ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ತವರಿಗೆ ಮರಳಿದ ಯೋಧರಾದ ನಾಗರಾಜ್, ರಾಘವೇಂದ್ರ
ದಾವಣಗೆರೆ, ಜ. 5- ಭಾರತೀಯ ಸೈನ್ಯದಲ್ಲಿ 27 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ನಾಗರಾಜ ಶೆಟ್ಟಿ ಹಾಗೂ 21 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಅರಸೀಕೆರೆಯ ರಾಘವೇಂದ್ರ ಅವರುಗಳನ್ನು ನಗರದ ರೈಲ್ವೇ ನಿಲ್ದಾಣದಲ್ಲಿ ಇಂದು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ರೈಲ್ವೇ ನಿಲ್ದಾಣದಿಂದ ತೆರೆದ ವಾಹನದಲ್ಲಿ ಯೋಧರನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು. ಈ ವೇಳೆ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಯೋಧರ ಬಂಧುಗಳು ಹಾಗೂ ಸ್ನೇಹಿತರೊಂದಿಗೆ ಹಾಡಿಗೆ ಹೆಜ್ಜೆ ಹಾಕಿದರು.
ಯೋಧರನ್ನು ಸ್ವಾಗತಿಸಿ ಮಾತನಾಡಿದ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ತಮ್ಮ ವೈಯಕ್ತಿಕವಾದ ಅಮೂಲ್ಯ ದಿನಗಳನ್ನು ಭಾರತ ಮಾತೆಗೆ ಅರ್ಪಿಸಿ, ದೇಶದ ಸೇವೆಗೆ ಮುಡಿ ಪಾಗಿಟ್ಟು ಹಿಂತಿರುಗಿದ ಸೈನಿಕರನ್ನು ಗೌರವಿಸು ವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ನಮ್ಮ ಹಿತಕ್ಕಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಮ್ಮ ಸೈನಿಕರ ಮುಂದಿನ ಜೀವನ ಸುಖದಾಯಕವಾಗಿರಲಿ. ಅವರ ಕನಸುಗಳು ಈಡೇರಲಿ ಎಂದು ಆಶಿಸಿದ ವೀರೇಶ್, ಅವರೊಟ್ಟಿಗೆ ಇದ್ದು, ಅವರನ್ನು ಬೆಂಬಲಿಸೋಣ ಎಂದು ಹೇಳಿದರು.
ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಮಾತನಾಡಿ, ನಾವು ಸೈನಿಕರಿಗೆ ಬೆಂಬಲಿಸಿದಷ್ಟೂ ನಮ್ಮ ದೇಶದ ಸೈನ್ಯ ಬಲಿಷ್ಠವಾಗುತ್ತದೆ. ಗಡಿಗಳು ರಕ್ಷಿಸಲ್ಪಡುತ್ತವೆ. ಆಗ ನಾವೆಲ್ಲರೂ ಇಲ್ಲಿ ನೆಮ್ಮದಿ ಯಿಂದ ಕೆಲಸ ಮಾಡಬಹುದು. ಆದ್ದರಿಂದ ಪ್ರತಿ ಪ್ರಜೆಯೂ ಸೈನಿಕರನ್ನು ಬೆಂಬಲಿಸಬೇಕು, ಗೌರವಿಸಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಲಡಾಕ್ನಲ್ಲಿ ದೀಪಾವಳಿ ಆಚರಿಸುವ ಮೂಲಕ ಸೈನಿಕರಲ್ಲಿ ಆತ್ಮ ವಿಶ್ವಾಸ ತುಂಬಿದ್ದಾರೆ. ಸೈನಿಕರು ಹೊರಗಿನ ಶತ್ರುಗಳಿಂದ ದೇಶವನ್ನು ರಕ್ಷಿಸಿದರೆ. ದೇಶದೊಳಗಿನ ಶತ್ರುಗಳನ್ನು ಪೊಲೀಸರು ಸೆದೆಬಡಿಯಲು ಸಹಕಾರಿಯಾಗುತ್ತದೆ. ಜೈ ಜವಾನ್, ಜೈ ಕಿಸಾನ್ ಎಂದು ನಾವು ಸೈನಿಕರ ಬೆಂಬಲಕ್ಕೆ ನಿಲ್ಲೋಣ ಎಂದರು.
ನಿವೃತ್ತ ಯೋಧ ನಾಗರಾಜ ಶೆಟ್ಟಿ ಮಾತನಾಡಿ, ನಮ್ಮ ದೇಶಕ್ಕಾಗಿ ಮಾಡಿದ ಸೇವೆ ನಮಗೆ ತೃಪ್ತಿ ತಂದಿದೆ. ನಮಗೆ ಈ ಸನ್ಮಾನಗಳು ಬೇಡ, ಆದರೆ ಇದು ಯುವ ಜನತೆಗೆ ಪ್ರೇರಣೆಯಾಗಲಿ. ಪ್ರತಿಯೊಬ್ಬರೂ ದೇಶ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂ.ನಾಗರಾಜ್, ಎಂ.ನಾರಾಯಣ ಸ್ವಾಮಿ, ವಾರ್ತಾ ಇಲಾಖೆಯ ಬಿ.ಎಸ್.ಬಸವರಾಜ, ಶ್ರೀಧರ್, ಯುವ ಬ್ರಿಗೇಡ್ ಕಾರ್ಯಕರ್ತ ಪವನ್ ಪ್ರೇರಣ, ಜಿ.ಬಿ.ಸುರೇಶ್, ಸತೀಶ್, ಧನರಾಜ್, ರಮೇಶ್, ಮಂಜುನಾಥ್, ಅಮೃತ, ಹನುಮಂತಪ್ಪ, ಶಿವಕುಮಾರ್, ಪರಶುರಾಮ, ಗಿರೀಶ್, ಶಂಕರ್ ಗಣೇಶ್, ಹರೀಶ್ ಪವಾರ್, ಯೋಗೀಶ್, ರಾಜು, ಶಿವು ಸೇರಿದಂತೆ ನೀಲಮ್ಮನ ತೋಟದ ಚಾಮುಂಡೇಶ್ವರಿ ಕಬಡ್ಡಿ ಕ್ರೀಡಾ ಸಮಿತಿ, ವಂದೇ ಮಾತರಂ ಕ್ರೀಡಾ ಸಮಿತಿ, ಜಿಲ್ಲಾ ಸರ್ಕಾರಿ ನೌಕರರ ಕಬಡ್ಡಿ ಕ್ರೀಡಾ ಸಮಿತಿ, ಮಾಜಿ ಸೈನಿಕರ ಸಂಘ, ಜಿಲ್ಲಾ ಪ್ಯಾರಾ ಮಿಲಿಟರಿ ಯೋಧರ ಸಂಘ, ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಪದಾಧಿಕಾರಿಗಳು, ಯೋಧರ ಸ್ನೇಹಿತರು, ಬಂಧುಗಳು ಪಾಲ್ಗೊಂಡಿದ್ದರು.