`ಕೊರೊನಾ’ ಅಂತ್ಯಸಂಸ್ಕಾರ – ಶಿವಗಣಾರಾಧನೆ..!

ಹರಪನಹಳ್ಳಿ ತಾಲ್ಲೂಕು ಮತ್ತಿಹಳ್ಳಿ ಗ್ರಾಮದಲ್ಲಿ ಅಹೋರಾತ್ರಿ ಭಜನೆ; ವಿಶೇಷ ಪೂಜೆ 

ಹರಪನಹಳ್ಳಿ,ಜ.5- ತಾಲ್ಲೂಕಿನ ವ್ಯಾಪ್ತಿಯ ಮತ್ತಿಹಳ್ಳಿ ಗ್ರಾಮದ ಸುತ್ತಮುತ್ತಲಿನ ನಾಗರಿಕರು ಜ.1ರಂದು ಗ್ರಾಮದ ಶ್ರೀ ಕಾಳಿಕಾಂಬ ದೇವಸ್ಥಾನದ ಮುಂಭಾಗದಲ್ಲಿ ಕೊರೊನಾ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಕಾಳಿಕಾಂಬ ಭಜನಾ ಸಂಘ, ಮಾರಿಕಾಂಬ ಭಜನಾ ಸಂಘದವರು ಅಹೋರಾತ್ರಿ ಭಜನೆ ನಡೆಸಿದರು. 

ಜ.2ರಂದು ಕಂಚಿಕೆರೆ ಶ್ರೀ ಕ್ಷೇತ್ರ ಬಿದ್ದ ಹನುಮಪ್ಪನ ಮಟ್ಟಿಯ ವೀರಾಂಜನೇಯ ಮಹಾಸ್ವಾಮಿ ಟಸ್ಟ್ ಧರ್ಮದರ್ಶಿ ಶ್ರೀ ಬಸವರಾಜ ಗುರೂಜಿ ಅವರು ವಿಶೇಷ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ನೆರವೇರಿಸಿದರು. ಕೊರೊನಾ ಮೂರ್ತಿಯ ಶವವನ್ನು ಕೂರಿಸಿ, `ಕೊರೊನಾ ಮಹಾಮಾರಿ ತೊಲಗಲಿ’ ಎಂಬ ನಾಮ ಫಲಕಗಳೊಂದಿಗೆ ಸಮಾಜದ ಸರ್ವ ಬಂಧುಗಳು ಜೊತೆಗೂಡಿ ಮೆರವಣಿಗೆಯೊಂದಿಗೆ ವಾದ್ಯಮೇಳ ಸಮೇತ ರುದ್ರಭೂಮಿಗೆ ಹೋಗಿ ಶವವನ್ನು ಅಗ್ನಿ ಸ್ಪರ್ಷ ಮಾಡಿ ಅಂತ್ಯಸಂಸ್ಕಾರ ಮಾಡಲಾಯಿತು.!

ದಿನಾಂಕ 3ರಂದು ಪವಿತ್ರ ಗಂಗಾಜಲವನ್ನು ಸಿಂಪಡಿಸಿ ಗ್ರಾಮದ ನವದೇವತೆಗಳನ್ನು ಪವಿತ್ರಗೊಳಿಸಲಾಯಿತು. ಕೊರೊನಾ ಮಹಾಮಾರಿಯ `ಶಿವಗಣಾರಾಧನೆ’ಯನ್ನೂ ಸಹ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಸಣ್ಣ ನಿಂಗನಗೌಡ ವಕೀಲರು, ಕೆ. ಕೆಂಚನಗೌಡ, ಸಣ್ಣ ನಿಂಗಪ್ಪ, ಸಣ್ಣ ಕೆಂಚಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಕೆ. ಶ್ರವಣಕುಮಾರ, ಸಿ. ಕೋಟೆಪ್ಪ, ಕೆ. ಮಂಜುನಾಥ, ರಾಜು ಅಣ್ಣಿ, ಎಂ.ಪಿ. ಕೊಟ್ರೇಶಗೌಡ, ಆರ್. ಕೊಟ್ರಗೌಡ ಬಣಕಾರ, ಕೆ. ಮಹೇಶ್ ಶಿಕ್ಷಕರು, ಹೆಚ್. ದೇವರಾಜ್, ಎಸ್. ರಾಜು, ದಾವಣಗೆರೆ ಬಸವ ಬಳಗದ ಮಹಾದೇವಮ್ಮ ಮಲ್ಲಿಕಾರ್ಜುನಪ್ಪ, ತ್ಯಾಪೇರ ಕೆಂಚಪ್ಪ, ಹರಪನಹಳ್ಳಿ ಶಂಭಣ್ಣ, ಬೆಣ್ಣಿ ಚೆನ್ನಪ್ಪ, ಮುದ್ದಿ ನಿಂಗಪ್ಪರ ಕೆಂಚಣ್ಣ, ದಾವಣಗೆರೆಯ ಪ್ರಕಾಶ್ ಹೊಸಮನಿ, ಶಿಕ್ಷಕರಾದ ಚನ್ನಬಸಪ್ಪ ಪೂಜಾರ, ಸಂತೋಷಕುಮಾರ್ ಮತ್ತಿತರರು ಭಾಗವಹಿಸಿದ್ದರು. 

error: Content is protected !!