ಕಷ್ಟಪಟ್ಟರೆ ಫಲ ಕಟ್ಟಿಟ್ಟ ಬುತ್ತಿ

ಕಷ್ಟಪಟ್ಟರೆ ಫಲ ಕಟ್ಟಿಟ್ಟ ಬುತ್ತಿ - Janathavaniಕೊಲನಪಾಕ (ತೆಲಂಗಾಣ) ಜ.5- ಸತ್ಯ ಶುದ್ಧವಾದ ಜೀವನ ಶ್ರೇಯಸ್ಸಿಗೆ ದಾರಿ. ಗುರಿಯಿಲ್ಲದ, ಸಾಧನೆಯಿಲ್ಲದ ಜೀವನ ವ್ಯರ್ಥ. ಕಷ್ಟ ಪಟ್ಟು ಶ್ರಮವಹಿಸಿ ದುಡಿದರೆ ಫಲ ಕಟ್ಟಿಟ್ಟ ಬುತ್ತಿ ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಪ್ರತಿಪಾದಿಸಿದರು.

ತೆಲಂಗಾಣ ರಾಜ್ಯದ ಕೊಲನಪಾಕ ಶ್ರೀ ಸ್ವಯಂಭು ಸೋಮೇಶ್ವರ ಕ್ಷೇತ್ರದಲ್ಲಿ ತಮ್ಮ 66ನೇ ಜನ್ಮ ದಿನೋತ್ಸವದ ನಿಮಿತ್ಯ ಸಂಯೋಜಿಸಿದ 3ನೇ ದಿನದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುವುದು ಬಲು ಸುಲಭ. ಆದರೆ ಆಚರಣೆಯಲ್ಲಿ ತರುವುದು ಬಲು ಕಷ್ಟ. ಪ್ರಾಣ, ಯೌವನ ಮತ್ತು ಕಾಲ ಯಾರನ್ನೂ ಕಾಯುವುದಿಲ್ಲ. ಒಮ್ಮೆ ಕಳೆದರೆ ಮತ್ತೆಂದೂ ಮರಳಿ ಬರಲಾರದು. ಸ್ಮೇಹ, ವಿದ್ಯೆ ಮತ್ತು ಸಂಬಂಧ ಬೆಳೆಸಿ ಆರೋಗ್ಯ ಪೂರ್ಣ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.  ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾನವೀಯತೆಯ ಸದ್ಗುಣ, ಸಂಸ್ಕಾರಗಳನ್ನು ಎಲ್ಲ ವರ್ಗದ ಜನ ಸಮುದಾಯಕ್ಕೆ ಬೋಧಿಸಿ ಬಾಳಿಗೆ ಬೆಳಕು ತೋರಿದರು ಎಂದರು.

ಬಿಚಗುಂದ ಮಠದ ಸೋಮಲಿಂಗ ಶ್ರೀ, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶ್ರೀ, ಮಳಲಿಮಠದ ಡಾ|| ನಾಗಭೂಷಣ ಶ್ರೀ, ಮೇಹಕರ ಹಿರೇಮಠದ ರಾಜೇಶ್ವರ ಶ್ರೀ, ಜವಳಿಮಠದ ಗಂಗಾಧರ ಸ್ವಾಮೀಜಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ದೇವಸ್ಥಾನದ ಅರ್ಚಕ ಸೋಮಯ್ಯ ಸ್ವಾಮಿ ಮತ್ತು ಗಂಗಾಧರ ಸ್ವಾಮಿ ಪೂಜಾ ವಿಧಿಗಳನ್ನು ನೆರವೇರಿಸಿದರು. ಶ್ರೀ ಪೀಠದ ಗಂಗಾಧರ ಸ್ವಾಮಿ ಮತ್ತು ಗದಿಗೆಯ್ಯಸ್ವಾಮಿ ರುದ್ರ ಪಠಣ ಮಾಡಿದರು. 

ಟ್ರಸ್ಟಿನ ಕಾರ್ಯದರ್ಶಿ ಅಣ್ಣಾರಾವ ಬಿರಾದಾರ, ಶಿವಶರಣಪ್ಪ ಸೀರಿ, ಪ್ರಭುಲಿಂಗ ಶಾಸ್ತ್ರಿಗಳು, ಅಶೋಕ ಸಿದ್ಧಾಪುರ ಹಾಗು ಅನೇಕ ಭಕ್ತರು ಪಾಲ್ಗೊಂಡಿದ್ದರು. ಕಲಬುರ್ಗಿಯ ಗಿರಿಯಪ್ಪ ಮುತ್ಯಾ ಸಂಗಡಿಗರು ಅನ್ನ ದಾಸೋಹ ಸೇವೆ ಸಲ್ಲಿಸಿದರು.

error: Content is protected !!