ಜಿಲ್ಲಾ ಬಿಜೆಪಿಯಿಂದ ಡಿ.ಕೆ. ಸುರೇಶ್ ಪ್ರತಿಕೃತಿ ದಹಿಸಿ ಪ್ರತಿಭಟನೆ
ದಾವಣಗೆರೆ, ಜ.4- ರಾಮನಗರದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ನಾಡ ಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರ ವರ್ತನೆ ಖಂಡಿಸಿ, ಜಿಲ್ಲಾ ಬಿಜೆಪಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮುಖೇನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಬಹಿರಂಗ ಸಭೆ ನಡೆಸಿ, ಸಂಸದ ಡಿ.ಕೆ. ಸುರೇಶ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮತ್ತು ವಿಪ ಸದಸ್ಯ ರವಿಕುಮಾರ್ ನಡೆದುಕೊಂಡ ರೀತಿ ಅತ್ಯಂತ ಖಂಡನೀಯವಾಗಿದ್ದು, ಡಿ.ಕೆ.ಸಹೋದರರು ರಾಮನಗರದಲ್ಲಿ ಹಣ-ತೋಳ್ಬಲದಿಂದ ರಾಜಕಾರಣ ಮಾಡುತ್ತಿರುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ರಾಮನಗರದಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ತಕ್ಷಣವೇ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ರಾಜ್ಯದಲ್ಲಿ ಒಬ್ಬನೇ ಕಾಂಗ್ರೆಸ್ ಸದಸ್ಯನಿದ್ದು, ಗೂಂಡಾನಂತೆ ವರ್ತಿಸಿದ್ದಾರೆ. ಕಾಂಗ್ರೆಸ್ಗೆ ಜನ ಪಾಠ ಕಲಿಸಿದರೂ ಬುದ್ದಿ ಬಂದಿಲ್ಲ. ಡಿ.ಕೆ.ಸುರೇಶ್ ವರ್ತನೆಯಿಂದ ರಾಜಕಾರಣಿಗಳು ತಲೆ ತಗ್ಗಿಸುವಂತೆ ಆಗಿದೆ. ಅದರಲ್ಲೂ ವಿಪ ಸದಸ್ಯ ರವಿಕುಮಾರ್ ಅವರು ಸಚಿವ ಅಶ್ವತ್ಥ್ ನಾರಾಯಣ ಅವರ ಕೈಯಲ್ಲಿದ್ದ ಮೈಕನ್ನು ಕಿತ್ತು ರಂಪಾಟ ಮಾಡಿದ್ದಾರೆ. ಅವರಿಗೆ ಜನ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಇವರಿಬ್ಬರೂ ಬಹಿರಂಗ ಕ್ಷಮೆಯಾಚನೆ ಮಾಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನಮ್ಮ ಸರ್ಕಾರ ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ಮುಂದಾಗಿದ್ದರೂ ಕಾಂಗ್ರೆಸ್ ನಾಯಕರು ಪಾದಯಾತ್ರೆ ಕೈಗೊಂಡಿದ್ದಾರೆ. ಈ ಯೋಜನೆಯನ್ನು ಈಗ ರಾಜಕಾರಣಕ್ಕೆ ಬಳಸುತ್ತಿರುವ ಕಾಂಗ್ರೆಸ್ಸಿಗರು ಅವರ ಅಧಿಕಾರದ ಅವಧಿಯಲ್ಲಿ ಏಕೆ ಅನುಷ್ಠಾನ ಮಾಡಿರಲಿಲ್ಲ. ಕಾಂಗ್ರೆಸ್ನವರು ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಪಾಲಿಕೆ ಸದಸ್ಯರಾದ ಎಲ್.ಡಿ.ಗೋಣ್ಯೆಪ್ಪ, ಕೆ.ಪ್ರಸನ್ನ ಕುಮಾರ್, ಆರ್.ಎಲ್. ಶಿವಪ್ರಕಾಶ್, ಕೆ.ಎಂ.ವೀರೇಶ್, ಮುಖಂಡರಾದ ಜಯಲಕ್ಷ್ಮಿ ಮಹೇಶ್, ರಾಜನಹಳ್ಳಿ ಶಿವಕುಮಾರ್, ವೈ.ಮಲ್ಲೇಶ್, ಉಮೇಶ್ ಪಾಟೀಲ್, ಮಜೀದ್, ಟಿಂಕರ್ ಮಂಜಣ್ಣ, ಶಂಕರಗೌಡ ಬಿರಾದಾರ್, ಭಾಗ್ಯ ಪಿಸಾಳೆ, ಹೆಚ್.ಪಿ. ವಿಶ್ವಾಸ್, ಶಿವರಾಜ್ ಪಾಟೀಲ್, ಶಿವಾನಂದ್, ಶಿವನಗೌಡ ಪಾಟೀಲ್ ಸೇರಿದಂತೆ ಇತರರು ಭಾಗವಹಿಸಿದ್ದರು.