ಕದಳಿ ಮಹಿಳಾ ವೇದಿಕೆಯ 13ನೇ ವಾರ್ಷಿಕೋತ್ಸವದಲ್ಲಿ ಈಶ್ವರನ್ ಪಿ.ತೀರ್ಥ
ಅನುಸೂಯದೇವಿ ಟಿ.ಎಸ್. ಪಾಟೀಲ್ ಅವರಿಗೆ `ಕದಳಿಶ್ರೀ’ ಪುರಸ್ಕಾರ
ದಾವಣಗೆರೆ, ಜ.4- ಸಾವಯವ ಆಹಾರ ಹಾಗೂ ಸಿರಿಧಾನ್ಯಗಳ ಬಳಕೆಯಿಂದ ಉತ್ತಮ ಆರೋಗ್ಯ ಗಳಿಸಿಕೊಳ್ಳುವ ಜೊತೆಗೆ ಜೀವನದಲ್ಲಿ ಚೈತನ್ಯ ಹಾಗೂ ಶಕ್ತಿ ತಂದುಕೊಳ್ಳಬಹುದಾಗಿದೆ ಎಂದು ಸಾವಯವ ಕೃಷಿಕರೂ, ವಿಶೇಷ ಆಹಾರ ತಜ್ಞರೂ ಆಗಿರುವ ಈಶ್ವರನ್ ಪಿ.ತೀರ್ಥ ಹೇಳಿದರು.
ನಗರದ ತರಳಬಾಳು ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕದಳಿ ಮಹಿಳಾ ವೇದಿಕೆಯ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ನಮ್ಮ ದೇಶದಲ್ಲಿ ನಿರಾಯಾಸವಾಗಿ ನೂರು ವರ್ಷ ಬದುಕುತ್ತಿದ್ದ ಜನ ಬದಲಾದ ಆಹಾರ ಪದ್ಧತಿ, ಜೀವನ ಶೈಲಿಯಿಂದಾಗಿ ಇಂದು ಆಯಾಸದಿಂದಲೇ 60 ವರ್ಷ ಬಾಳಿದರೆ ಸಾಕು ಎನ್ನುವಂತಾಗಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಉತ್ತಮ ಆಹಾರದ ಉತ್ಪಾದನೆಯಲ್ಲಿ ವಿಫಲವಾಗಿದೆ. ಮುಂದುವರಿದ ವಿಜ್ಞಾನವು ಹೆಚ್ಚಾಗಿ ಮತ್ತೊಬ್ಬರನ್ನು ನಾಶ ಮಾಡುವತ್ತಲೇ ಕೈ ತೋರಿಸುತ್ತಿದೆ. ಆದರೆ ಉತ್ತಮ ಆಹಾರದ ಮೂಲಕ ಮನುಷ್ಯನ ಜೀವಿತಾವಧಿಯನ್ನು ಹೆಚ್ಚಿಸಲು ವಿಫಲವಾಗಿದೆ ಎಂದರು
ಸಿರಿಧಾನ್ಯಗಳ ಬಳಕೆ ಕುರಿತು ಜನರಲ್ಲಿ ಅನೇಕ ಗೊಂದಲಗಳಿವೆ. ಶಿವ ಪುರಾಣದಲ್ಲಿ ಅನ್ನಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರೆ, ವಿಷ್ಣು ಪುರಾಣದಲ್ಲಿ ಸಿರಿಧಾನ್ಯಕ್ಕೆ ಮಹತ್ವ ನೀಡಲಾಗಿದೆ. ಆಧುನಿಕ ಜೀವನ ಶೈಲಿ, ವಿಕಾರವಾದ ಜೀವನಕ್ಕೆ ಉತ್ತಮ ಆಕಾರ ಕೊಡುವಲ್ಲಿ ಸಿರಿಧಾನ್ಯಗಳ ಪಾತ್ರ ಮಹತ್ವದ್ದು ಎಂದರು.
ಆಹಾರದ ವಿಷಯದಲ್ಲಿ ಚೀನಾ ದೇಶದವರು ಮುಂದಿದ್ದರೆ, ಭಾರತದಲ್ಲಿ ಉತ್ತಮ ಆಹಾರ ಸೇವಿಸದೆ, ರಾಸಾಯನಿಕ ಆಹಾರ ಬಳಕೆಯಿಂದಾ ಗಿಯೇ ಶೇ.73ರಷ್ಟು ಜನರು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂದರು. ನಿತ್ಯದ ಆಹಾರದಲ್ಲಿ ಸಿರಿಧಾನ್ಯಗ ಬಳಕೆಯಿಂದ ಅನೇಕ ರೋಗಗಳನ್ನು ತಡೆಯಬಹುದು ಎಂದು ಹೇಳಿದರು.
ಇದೇ ವೇಳೆ ಅನುಸೂಯದೇವಿ ಟಿ.ಎಸ್. ಪಾಟೀಲ್ ಅವರಿಗೆ ಕದಳಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಅಲ್ಲಮಪ್ರಭು ಅವರ `ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ’ ವಚನವನ್ನು ಉದಾಹರಿಸುತ್ತಾ, ಜ್ಞಾನರತ್ನವೇ ನಿನ್ನ ಒಡೆಯ ಎಂದು ಅಲ್ಲಮಪ್ರಭು ಹೇಳಿದಂತೆ, ಪ್ರತಿಯೊಬ್ಬರೂ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ದಾಯಾದಿಗಳು ಆಸ್ತಿಯಲ್ಲಿ ಪಾಲು ಕೇಳಬಹುದು. ಆದರೆ ನಾವು ಸಂಪಾದಿಸಿದ ಜ್ಞಾನದಲ್ಲಿ ಪಾಲು ಕೇಳಲು ಸಾಧ್ಯವಿಲ್ಲ. ಜ್ಞಾನ ಎಲ್ಲಾ ಆಸ್ತಿಗಳಿಗಿಂತಲೂ ಮಿಗಿಲಾದದ್ದು. ವನಚಗಳ ಮೂಲಕ 12ನೇ ಶತಮಾನದಲ್ಲಿ ಶಿವಶರಣರು ಕ್ರಾಂತಿ ಮಾಡಿದ್ದರು. ಅದೇ ರೀತಿ ಕದಳಿ ವೇದಿಕೆ ಸದಸ್ಯರಿಂದ 12ನೇ ಶತಮಾನ ಮತ್ತೆ ಮರುಕಳಿಸುವಂತಾಗಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಕದಳಿ ವೇದಿಕೆ ಸದಸ್ಯೆಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಆಶಾ ಮಹಾಬಲೇಶ್ವರಗೌಡ್ರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಸಾವಿತ್ರಮ್ಮ ಉಪಸ್ಥಿತರಿದ್ದರು.
ಗಾಯತ್ರಿ ವಸ್ತ್ರದ್ ಹಾಗೂ ವಸಂತ ನಿರೂಪಿಸಿದರು. ವಿನೋದ ಅಜಗಣ್ಣನವರ್ ಸ್ವಾಗತಿಸಿದರು. ಮಮತಾ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಿಕಾ ಮಂಜುನಾಥ್ ದತ್ತಿ ದಾನಿಗಳನ್ನು ಪರಿಚಯಿಸಿದರೆ, ವಿಜಯ ಲಕ್ಷ್ಮಿ ಕದಳಿಶ್ರೀ ಪುರಸ್ಕೃತರನ್ನೂ, ವಾಣಿ ರಾಜ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸೌಮ್ಯ ಸತೀಶ್, ಪೂರ್ಣಿಮ ಪ್ರಸನ್ನಕುಮಾರ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ವಿಜಯ ಚಂದ್ರಶೇಖರ್ ವಂದಿಸಿದರು.