ಕುಡಿಯುವ ನೀರಿಗೆ ಒತ್ತಾಯಿಸಿ ಪುರಸಭೆ ಎದುರು ಧರಣಿ

ಸಂಜೆ ವೇಳೆಗೆ ಸಮಸ್ಯೆ ಬಗೆಹರಿಸಿದ ಮುಖ್ಯಾಧಿಕಾರಿ

ಮಲೇಬೆನ್ನೂರು, ಜ.4- ಪಟ್ಟಣದ 17ನೇ ವಾರ್ಡ್‌ನಲ್ಲಿ ಕೆಟ್ಟಿರುವ ಬೋರ್‌ವೆಲ್ ರಿಪೇರಿ ಮಾಡಿಸಿ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಮಂಗಳವಾರ ಪುರಸಭೆ ಮುಂಭಾಗ ವಾರ್ಡ್‌ ಸದಸ್ಯರಾದ ಶ್ರೀಮತಿ ಅಕ್ಕಮ್ಮ ಬಿ.ಸುರೇಶ್ ಅವರು ಜನರೊಂದಿಗೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ಕಳೆದ ಅನೇಕ ದಿನಗಳಿಂದ ವಾರ್ಡ್‌ನಲ್ಲಿ ಬೋರ್‌ವೆಲ್‌ಗಳ ರಿಪೇರಿ ಇರುವುದರಿಂದ ನೀರಿನ ಸಮಸ್ಯೆ ಎದುರಾಗಿರುವ ಬಗ್ಗೆ ಪುರಸಭೆಗೆ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ಮಾಜಿ ಸದಸ್ಯ ಬಿ.ಸುರೇಶ್ ದೂರಿದರು.

ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಡೊಂಬರ್ ಅವರು, ಚುನಾವಣೆ ಕಾರಣದಿಂದಾಗಿ ಟೆಂಡರ್‌ ಕರೆದು ಮಾಡಬೇಕಾಗಿದ್ದ ಕೆಲಸಗಳು ವಿಳಂಬವಾಗಿ ಸಮಸ್ಯೆ ಆಗಿದೆ.

ತುರ್ತಾಗಿ ಬೋರ್‌ವೆಲ್‌ಗಳನ್ನು ರಿಪೇರಿ ಮಾಡಿಸಿ, ನೀರು ಪೂರೈಸುವ ಬಗ್ಗೆ ಮೇಲಾಧಿಕಾರಿಗಳಿಂದ ಅನುಮತಿ ಪಡೆದು ಇವತ್ತಿನಿಂದ ಕೆಲಸ ಪ್ರಾರಂಭಿಸಿದ್ದೇವೆ. ಒಂದೆ ರಡು ದಿನಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಲಿದೆ. 

ಪ್ರತಿಭಟನೆ ಕೈಬಿಟ್ಟು ನಮ್ಮೊಂದಿಗೆ ವಾರ್ಡಿಗೆ ಬನ್ನಿ, ಬೋರ್‌ವೆಲ್ ಎತ್ತಿಸಿ ರಿಪೇರಿ ಮಾಡಿಸೋಣ ಎಂದರೂ ಸುರೇಶ್ ಅವರು ಒಪ್ಪಲಿಲ್ಲ.

ಪಿಎಸ್ಐ ರವಿಕುಮಾರ್ ಅವರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆ ಕೈಬಿಡಿ, ಕೆಲಸ ಮಾಡಿಸಿ ಕೊಡುವ ಜವಾಬ್ದಾರಿ ನಮ್ಮದು ಎಂದು ಹೇಳಿದರು.

ಇದೇ ವೇಳೆ ಮುಖ್ಯಾಧಿಕಾರಿಗಳು 17, 18 ಮತ್ತು 19 ವಾರ್ಡ್‌ಗಳಲ್ಲಿ ಬೋರ್‌ವೆಲ್‌ಗಳನ್ನು ರಿಪೇರಿ ಮಾಡಿಸಲು ಹೊರಟಾಗ ಸದಸ್ಯೆ ಅಕ್ಕಮ್ಮ ಸುರೇಶ್ ಅವರು ಪ್ರತಿಭಟನೆ ಕೈ ಬಿಟ್ಟು ಅವರೊಂದಿಗೆ ವಾರ್ಡಿಗೆ ತೆರಳಿದರು. ಸಂಜೆ ಹೊತ್ತಿಗೆ ಒಂದು ಬೋರ್‌ವೆಲ್ ಸರಿಯಾಗಿ ನೀರು ಪೂರೈಕೆ ಆರಂಭವಾಗಿದೆ ಎಂದು ಅಕ್ಕಮ್ಮ ಸುರೇಶ್ `ಜನತಾವಾಣಿ’ಗೆ ತಿಳಿಸಿದರು.

ಜೊತೆಗೆ 18, 19 ಮತ್ತು 20ನೇ ವಾರ್ಡ್‌ನಲ್ಲೂ ಬೋರ್‌ವೆಲ್‌ಗಳ ರಿಪೇರಿ ಆಗಿ ನೀರು ಸರಬರಾಜು ಆಗುತ್ತಿದೆ ಎಂದು ಮುಖ್ಯಾಧಿಕಾರಿ ಡೊಂಬರ್ ತಿಳಿಸಿದರು.

error: Content is protected !!