ದಾವಣಗೆರೆ : ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಒತ್ತಾಯ

ಎಐಡಿಎಸ್‍ಓ ನೇತೃತ್ವದಲ್ಲಿ ಪ್ರತಿಭಟನೆ

ದಾವಣಗೆರೆ, ಜ.4- ಸೇವಾ ಭದ್ರತೆ ಸೇರಿದಂತೆ, ರಾಜ್ಯದ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‍ಓ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಿನ್ನೆ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಿಂದ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ದರ್ಶನ್, ಮಧುಸೂದನ್ ಹಾಗು ಇತರರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಮುಖೇನ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪೂಜಾ ನಂದಿಹಳ್ಳಿ ಮಾತನಾಡಿ, ಈಚೆಗೆ ತೀರ್ಥಹಳ್ಳಿಯ ಸರ್ಕಾರಿ ಪದವಿ ಕಾಲೇಜು ಅತಿಥಿ ಬೋಧಕ ಹರ್ಷ ಶಾನುಭೋಗ ಕರುಣಾಜನಕ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಮಾತ್ರ ಇನ್ನೂ ಎಚ್ಚೆತ್ತಿಲ್ಲ. ಅತ್ಯಂತ ಕಷ್ಟದ ಜೀವನ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಮಾನವೀ ಯತೆ ಮೆರೆಯಬೇಕಿದೆ ಎಂದು ತಿಳಿಸಿದರು.

ಉದ್ಯೋಗ ಭದ್ರತೆ, ಹಲವಾರು ತಿಂಗಳ ಸಂಬಳವೇ ಇಲ್ಲದೇ ಎಷ್ಟೋ ಉನ್ನತ ಪದವಿ ಪಡೆದವರು, ಎನ್‍ಇಟಿ ಉತ್ತೀರ್ಣರಾದವರು, ಡಾಕ್ಟರೇಟ್ ಪದವಿ ಪಡೆದವರು ಕಳೆದ 10-15 ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿದ್ದರೂ ಸರ್ಕಾರ ಅಂತಹವರಿಗೆ ಗೌರವಯುತ ಜೀವನ ನಡೆಸಲು ಕನಿಷ್ಟ ಭದ್ರತೆ, ವೇತನ ನೀಡುವಲ್ಲೂ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅತಿಥಿ ಬೋಧಕರು ತರಗತಿ ಬಹಿಷ್ಕರಿಸಿ ದರೆ ಶೈಕ್ಷಣಿಕ ಏರುಪೇರಾಗುತ್ತದೆಂಬುದನ್ನು ಸರ್ಕಾರ ಮರೆಯಬಾರದು. ತಕ್ಷಣವೇ ಅತಿಥಿ ಬೋಧಕರ ಸೇವೆ ಖಾಯಂಗೊಳಿಸಿ, ಜೀವನ ಭದ್ರತೆ ಕಲ್ಪಿಸಬೇಕು. ಮುಷ್ಕರದಿಂದಾದ ಶೈಕ್ಷಣಿಕ ಗೊಂದಲ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಕಾವ್ಯ, ಪುಷ್ಪಾ, ಶಿವಕುಮಾರ, ಗಜೇಂದ್ರ, ದರ್ಶನ್, ಮಧುಸೂದನ್, ಶರತ್, ಯಶವಂತ, ಚರಣ್ ಶಿವಕುಮಾರ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!