ಹರಿಹರ : ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಒತ್ತಾಯ

ಹರಿಹರ, ಜ. 4 – ಅತಿಥಿ ಉಪನ್ಯಾಸಕರ ನ್ಯಾಯ ಯುತ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಲು ಮುಂದಾಗಬೇಕು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಜೇಶನ್ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದೆ.

ನಗರದ ಡಿ ಆರ್.ಎಂ. ಪದವಿ ಕಾಲೇಜಿನಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು,  ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆಯ ಮುಖಾಂತರ ಸಂಚರಿಸಿ  ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ವಿದ್ಯಾರ್ಥಿ ಮುಖಂಡರು, ರಾಜ್ಯ ವ್ಯಾಪಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಕಳೆದ ಇಪ್ಪತ್ತು ದಿನಗಳಿಂದ ತರಗತಿ ಬಹಿಷ್ಕಾರ ಮಾಡಿ ಹೋರಾಟ ಮಾಡುತ್ತಿದ್ದಾರೆ. ಇತ್ತೀಚೆಗೆ ತೀರ್ಥಹಳ್ಳಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಹರ್ಷ ಶಾನುಭೋಗ ಅವರ ಆತ್ಮಹತ್ಯೆ ಘಟನೆ ಉಪನ್ಯಾಸಕರ ಅತ್ಯಂತ ಕಷ್ಟಮಯ ಜೀವನವನ್ನು ತೋರಿಸುತ್ತದೆ ಎಂದಿದ್ದಾರೆ.

ಉದ್ಯೋಗದ ಭದ್ರತೆ ಇಲ್ಲದೆ ಮತ್ತು ಹಲವಾರು ತಿಂಗಳಲ್ಲಿ ಸಂಬಳವೇ
ಇಲ್ಲದ ಸಾವಿರಾರು ಅತಿಥಿ ಉಪನ್ಯಾಸಕರು ಕಷ್ಟದಲ್ಲಿದ್ದಾರೆ. ‌ ಉನ್ನತ ಪದವಿ, ಎನ್.ಇ.ಟಿ ಆದವರು, ಡಾಕ್ಟರೇಟ್ ಮಾಡಿರುವವರು 15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಇವರು ಗೌರವಯುತ ಬದುಕು ಸಾಗಿಸಲು ಕನಿಷ್ಟ ಭದ್ರತೆ ಸಂಬಳ ದೊರಕಿಸುವಲ್ಲಿ ಸರ್ಕಾರದ ಸ್ಪಂದನೆ ದೊರಕದೇ ಇರುವುದು ಅತ್ಯಂತ ಬೇಸರದ ವಿಚಾರ. ಶಿಕ್ಷಕರು ತರಗತಿ ಬಹಿಷ್ಕಾರ ಮಾಡಿ ಹೋರಾಟದಲ್ಲಿ ಇರುವುದರಿಂದ ಶೈಕ್ಷಣಿಕ ಏರುಪೇರುಗಳು ಉಂಟಾಗಿವೆ. ಈ ಶೈಕ್ಷಣಿಕ ಗೊಂದಲಕ್ಕೆ ಸರ್ಕಾರ ಈ ಕೂಡಲೇ ಪರಿಹಾರ ಕಲ್ಪಿಸಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪೂಜಾ ನಂದಿಹಳ್ಳಿ, ಮಾರುತಿ, ಗಜೇಂದ್ರ, ಪ್ರವೀಣ್, ಜಶವಂತ್, ಶರತ್, ಇತರರು ಹಾಜರಿದ್ದರು.

error: Content is protected !!