ಕೊರೊನಾ ಮುಕ್ತಮಾಡಲು ಪ್ರತಿಯೊಬ್ಬರೂ ಸಹಕರಿಸಿ

ಹರಪನಹಳ್ಳಿ, ಜ. 3- ಕೊರೊನಾ ಮೂರನೇ ಅಲೆ ತಡೆಗಟ್ಟಲು ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ಮುಕ್ತವಾಗಲು ಸಹಕರಿಸಬೇಕು. ಮಕ್ಕಳು ಭಯ ಪಡದೆ ಧೈರ್ಯವಾಗಿ ಲಸಿಕೆ  ಪಡೆಯಿರಿ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಆಯೋಜಿಸಿದ್ದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಕೊರೊನಾ ಮಹಾಮಾರಿಯಿಂದ ವಿಶ್ವವೇ ತಲ್ಲಣಗೊಂಡಿದ್ದು, ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ಸುರಕ್ಷಿತವಾಗಿದೆ. ಮಕ್ಕಳೇ ಈ ದೇಶದ ಆಸ್ತಿಯಾಗಿದ್ದು, ಅವರ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹಾಲಸ್ವಾಮಿ ಮಾತನಾಡಿ, ಸರ್ಕಾರದ ಆದೇಶದಂತೆ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯಿಂದ 15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಎಲ್ಲಾ ಶಾಲಾ-ಾಲೇಜುಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುವುದು. ತಾಲ್ಲೂಕಿನಲ್ಲಿ 15 ರಿಂದ 18 ವರ್ಷದೊಳಗಿನ ಒಟ್ಟು 16355 ಮಕ್ಕಳಿದ್ದು, 83 ತಂಡಗಳ ಮೂಲಕ ಎರಡು ದಿನಗಳಲ್ಲಿ ಲಸಿಕೆ ಸಂಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಈಗಾಗಲೇ ತಾಲ್ಲೂಕಿನಲ್ಲಿ ಶೇ. 95ರಷ್ಟು ಜನರಿಗೆ ಮೊದಲನೇ ಲಸಿಕೆ ನೀಡಲಾಗಿದೆ. ಎರಡನೇ ಲಸಿಕೆಯನ್ನು ಶೇ. 69 ರಷ್ಟು ಹಾಕಲಾಗಿದೆ. ಇನ್ನು ಎರಡನೇ ಡೋಸ್ ಪ್ರಗತಿಯಲ್ಲಿದೆ ಎಂದು ಡಾ. ಹಾಲಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್, ಉಪವಿಭಾಗಾಧಿಕಾರಿ ಹೆಚ್.ಜಿ. ಚಂದ್ರಶೇಖರಯ್ಯ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಶಿವಕುಮಾರ್, ತಹಶೀಲ್ದಾರ್ ಎಂ.ಎಲ್. ನಂದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜ್, ತಾ.ಪಂ. ಇಓ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಮುಖಂಡರಾದ ಎಂ.ಪಿ. ನಾಯ್ಕ, ಬಾಗಳಿ ಕೊಟ್ರೇಶಪ್ಪ, ಮುತ್ತಿಗಿ ರೇವಣಸಿದ್ದಪ್ಪ, ಡಾ. ವೆಂಕಟೇಶ್, ಮಂಜುನಾಥ, ಡಾ. ದತ್ತಾತ್ರೇಯ, ಡಾ. ವಿಜಯಕುಮಾರ, ಆರೋಗ್ಯ ಇಲಾಖೆಯ ಗೌರಮ್ಮ, ಭುವನೇಶ್ವರಿ, ಶಾಲಾ ಮುಖ್ಯಾಪಾಧ್ಯಾಯ ಬಿ. ರವೀಂದ್ರನಾಥ್, ಶಿಕ್ಷಕ ಕೆ. ಷಣ್ಮುಖಪ್ಪ, ಸಂಗೀತ ಶಿಕ್ಷಕ ಮೌಲಾನಾ ಸಾಹೇಬ್ ಉಪಸ್ಥಿತರಿದ್ದರು.

error: Content is protected !!