ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುವಂತಾಗಲಿ

ದಾವಣಗೆರೆ, ಜ. 2- ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕು ಎಂದು ಈ ಹಿಂದೆ ನಿರ್ಧಾರವಾಗಿತ್ತು. ಕೊರೊನಾ ಪರಿಸ್ಥಿತಿ ಮುಗಿದ ನಂತರ ದಾವಣಗೆರೆಯಲ್ಲಿ ಸಮ್ಮೇಳನ ನಡೆಯಬೇಕಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ.

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಶಿವಯೋಗಿ ಮಂದಿರದಲ್ಲಿ ಆಯೋಜಿಸಲಾಗಿದ್ದ 66ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ದಾವಣಗೆರೆಯಲ್ಲಿ ಸಮ್ಮೇಳನ ನಡೆಯಲು ರಾಜಕೀಯ ಮುಖಂಡರು, ಸಂಘ- ಸಂಸ್ಥೆಗಳು ಶ್ರಮಿಸಬೇಕಿದೆ. ಈ ದಿಸೆಯಲ್ಲಿ ತಾವೂ ಸಹ ಕೈ ಜೋಡಿಸುವುದಾಗಿ ಶ್ರೀಗಳು ಹೇಳಿದರು.  ಬಸವಣ್ಣನವರ ವಿಶ್ವಕುಟುಂಬ ಭಾವನೆಯಂತೆ ಕನ್ನಡಿಗರು ಎಲ್ಲ ಭಾಷಿಗರು ಹಾಗೂ ಧರ್ಮದವರನ್ನು ತಮ್ಮವರೆಂದು ಸ್ವೀಕರಿಸಿದ್ದಾರೆ. ಕರ್ನಾಟಕದಲ್ಲಿ ನೆಲೆಸಿರುವ ಎಲ್ಲರನ್ನೂ ಕನ್ನಡಿಗರೆಂದು ಭಾವಿಸಿದ್ದಾರೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾಜ ಸೇವೆಯೂ ದೇವರ ಪೂಜೆಯಂತೆ. ಸಮಾಜ  ಸೇವೆಯಿಂದ ಆನಂದ ಸಿಗುತ್ತದೆ. ಚಿತ್ರನಟ ಪುನೀತ್ ಅವರು ಬದುಕಿರುವಷ್ಟು ಕಾಲ ಬೇರೆಯವರಿಗೆ ಗೊತ್ತಾಗದಂತೆ ಪುಣ್ಯದ ಕೆಲಸ ಮಾಡಿದ್ದರಿಂದ ಅವರಿಗೆ ಸತ್ಕೀರ್ತಿ ದೊರೆತಿದೆ ಎಂದು ಶ್ರೀಗಳು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಗಳೂರು ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರಪ್ಪ, ಮುಂದಿನ ದಿನಗಳಲ್ಲಿ ಜಗಳೂರಿನಂತಹ ಸಣ್ಣ ಊರುಗಳಲ್ಲೂ ಸಹ ಈ ರೀತಿಯ ಕನ್ನಡ ರಾಜ್ಯೋತ್ಸವಗಳು ನಡೆಯಬೇಕಿದೆ. ಇದಕ್ಕೆ ತಮ್ಮ ಸಹಕಾರ ನೀಡುವುದಾಗಿ ಹೇಳಿದರು.

ಚಿತ್ರನಟ ಪುನೀತ್ ನಿಧನಕ್ಕೆ ಅಬಾಲ ವೃದ್ಧರಾಗಿ ಎಲ್ಲರೂ ಕಣ್ಣೀರು ಹಾಕಿದ್ದಾರೆ. ಅವರು ಇನ್ನಷ್ಟು ದಿನ ಕನ್ನಡ ಸೇವೆಗೆ ಬೇಕಿತ್ತು ಎಂದರು.

ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಮಾತನಾಡಿ, ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನೆರವೇರಬೇಕಿದೆ. ಇದಕ್ಕಾಗಿ ಸರ್ಕಾರ ಹಾಗೂ ಸಂಘಟನೆಗಳಷ್ಟೇ ಅಲ್ಲದೇ, ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಎಂ.ಎಸ್. ವಿಠಲ್, ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ ಮತ್ತಿತರರು ಮಾತನಾಡಿದರು.

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ. ಯಲ್ಲಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ವೇದಿಕೆಯ ಮೇಲೆ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಸದಸ್ಯ ಮಂಜುನಾಯ್ಕ, ತಾಜ್ ಪ್ಯಾಲೇಸ್‌ ಮುಖ್ಯಸ್ಥ ದಾದಾಪೀರ್, ಲುಂಬಿನಿ ಪ್ಯಾರಾ ಮೆಡಿಕಲ್ ಕಾಲೇಜ್ ಕಾರ್ಯದರ್ಶಿ ಜಿ.ವಿ. ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಎಂ. ಸೋಮಶೇಖರಪ್ಪ, ಮಹಾಂತೇಶ್ ಒಣರೊಟ್ಟಿ, ಜಿ.ರಂಗಸ್ವಾಮಿ, ಸಿ.ಆರ್. ನಸೀರ್ ಅಹ್ಮದ್, ಕೊಂಡಯ್ಯ, ಪರಮೇಶ್ವರಪ್ಪ ಕತ್ತಿಗೆ, ಚಂದ್ರಣ್ಣ, ಕೆ.ಎನ್. ಚನ್ನಬಸಪ್ಪ (ಶಂಭು), ಪುನೀತ್, ವಿಜಯ್ ಜಾಧವ್, ಬಿ. ಸಿಕಂದರ್, ಚನ್ನಬಸಪ್ಪ ಮಲ್ಲಶೆಟ್ಟಿಹಳ್ಳಿ, ಕೆ.ಎಂ. ಸಮೀರ್ ಖಾನ್ ಮತ್ತಿತರರನ್ನು ಸನ್ಮಾನಿಸಲಾಯಿತು.

ಸಂತೋಷ್ ದೊಡ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಹಿರೇಮಠ್ ನಿರೂಪಿಸಿದರು.

error: Content is protected !!