ಝಘಮಗಿಸುತ್ತಿದ್ದ ಎವಿಕೆ ರಸ್ತೆಯಲ್ಲಿ ಕಗ್ಗತ್ತಲು

1 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಗಳಿಗೆ ನಿರ್ವಹಣೆ ಕೊರತೆ

ದಾವಣಗೆರೆ, ಜ.2-  ಇಡೀ ನಗರದ ರಸ್ತೆಗಳಲ್ಲಿ ಮಾದರಿ ರಸ್ತೆ ಎಂಬ ಹೆಗ್ಗಳಿಕೆ ಇದ್ದಿದ್ದು ಎವಿಕೆ ರಸ್ತೆಗೆ. ಅದಕ್ಕೆ ಕಾರಣ ಅಲ್ಲಿನ ಅಲಂಕಾರಿಕ ವಿದ್ಯುತ್ ದೀಪಗಳು. ರಾತ್ರಿ ಈ ರಸ್ತೆಯಲ್ಲೊಮ್ಮೆ ನಡೆಯುವುದೇ ಖುಷಿ ನೀಡುತ್ತಿತ್ತು. ನಗರದವರಷ್ಟೇ ಅಲ್ಲ, ಪರ ಊರಿನವರು ಈ ರಸ್ತೆ ನೋಡಿ ಹುಬ್ಬೇರಿಸುತ್ತಿದ್ದರು.

ಅಂತಹ ಖ್ಯಾತವೆತ್ತ ರಸ್ತೆ ಇದೀಗ ಕತ್ತಲಲ್ಲಿ ಮುಳುಗಿದಂತಾಗಿದೆ. 2016 ರಿಂದ ಝಗಮಗಿಸುತ್ತಿದ್ದ ವಿದ್ಯುತ್ ದೀಪಗಳು ತಮ್ಮನ್ನು ದುರಸ್ತಿ ಮಾಡುವ ವರೇ ದಿಕ್ಕಿಲ್ಲ ಎಂಬಂತೆ ಕಣ್ಣು ಮುಚ್ಚಿ ನಿಟ್ಟುಸಿರು ಬಿಡುತ್ತಿವೆ ಎಂಬ ಭಾಸ.

ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳ ಆಡಳಿತಾವಧಿಯಲ್ಲಿ ಅಭಿವದ್ಧಿ ಪಡಿಸಿದ್ದ ಹಲವಾರು ರಸ್ತೆಗಳಲ್ಲಿ ಎವಿಕೆ ರಸ್ತೆಯೂ ಒಂದು. ಇದೇ ರಸ್ತೆಯಲ್ಲಿ 2016ರಲ್ಲಿ ಜೂನ್ 16ರಂದು ಡಾ.ಶಾಮನೂರು ಶಿವಶಂಕರಪ್ಪನವರ ಜನ್ಮದಿನದಂದೇ ಉದ್ಘಾಟಿಸಲಾಗಿತ್ತು.

ಅಂದಹಾಗೆ ಈ ರಸ್ತೆಗೆ ಬೆಳಕಿನ ಮೂಲಕ ಅಂದ ಹೆಚ್ಚಿಸುವ ಈ ವಿದ್ಯುತ್ ದೀಪಗಳಿಗೆ ಖರ್ಚಾಗಿದ್ದು ಸುಮಾರು 1 ಕೋಟಿ ರೂ.ಗಳಷ್ಟು. ಒಂದು  ಬದಿಯ ದೊಡ್ಡ ಕಂಬದ ದೀಪಗಳಿಗೆ 73 ಲಕ್ಷ ಹಾಗೂ ಎದುರು ಬದಿಯ ಚಿಕ್ಕ ಕಂಬಗಳಿಗೆ 26 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. 

2016ರಿಂದ ಎರಡು ವರ್ಷಗಳ ಗುತ್ತಿಗೆದಾರರ ನಿರ್ವಹಣೆ ಕಾರ್ಯ  ಮುಗಿದ ಮೇಲೆ ಮಹಾನಗರ ಪಾಲಿಕೆ ನಿರ್ವಹಣೆಯನ್ನು ವಹಿಸಿಕೊಳ್ಳಬೇಕಾಗಿತ್ತು. ಆದರೆ, ತಮಗಿನ್ನೂ ನಿರ್ವಹಣೆ ಹಸ್ತಾಂತರಿಸಲಾಗಿಲ್ಲ ಎಂಬ ಕಾರಣ ನೀಡಿರುವ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಆ ಮೂಲಕ ಕೋಟಿ ರೂ. ವೆಚ್ಚದ ವಿದ್ಯುತ್ ದೀಪಗಳನ್ನು ಹಾಳುಗೆಡವುತ್ತಿದ್ದಾರೆ ಎಂಬ ಆರೋಪ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರದ್ದು.

ಈ ವಿದ್ಯುತ್ ದೀಪಗಳನ್ನು ದುರಸ್ತಿಗೊಳಿಸುವಂತೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮಹಾನಗರ ಪಾಲಿಕೆಗೆ ಸೂಚಿಸಿದ್ದರೂ ಪಾಲಿಕೆ ಮೌನವಹಿಸಿದೆ. ಇನ್ನಾದರೂ ದುರಸ್ತಿಗೊಳಿಸಿ ಎಂಬುದು ನಾಗರಾಜ್ ಅವರ ಆಶಯ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಅಂದ ಹೆಚ್ಚಿಸಿಕೊಂಡಿದ್ದ ರಸ್ತೆಯೊಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಗಿ ಬಿಕೋ ಎನ್ನುತ್ತಿರುವಂತಾಗಿರುವುದು ನಗರದ ಜನತೆಯ ದುರ್ದೈವ ಎನ್ನಬಹುದೇನೋ.

error: Content is protected !!