ಶಿಕ್ಷಕರಲ್ಲಿದೆ ವ್ಯಕ್ತಿತ್ವ ಬದಲಿಸುವ ಶಕ್ತಿ

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ

ಜಿಲ್ಲೆ ಸಮಾಚಾರ ದಿನಪತ್ರಿಕೆ ಬಳಗದಿಂದ ಜಸ್ಟಿನ್ ಡಿಸೌಜ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

ದಾವಣಗೆರೆ, ಜ.2- ವ್ಯಕ್ತಿಯ ವ್ಯಕ್ತಿತ್ವವನ್ನೇ ಬದಲಿಸುವ ಶಕ್ತಿ ಶಿಕ್ಷಕರಲ್ಲಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.

`ಜಿಲ್ಲೆ ಸಮಾಚಾರ’ ದಿನಪತ್ರಿಕೆ ಬಳಗದಿಂದ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ `2021ರ `ವರ್ಷದ ವ್ಯಕ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ-ತಾಯಿಗಿಂತ ಗುರು ಶ್ರೇಷ್ಠ. ಅಲೆಗ್ಸಾಂಡರ್‌ ಜಗತ್ತನ್ನೇ ಗೆಲ್ಲಲು ಪ್ರೇರಕ ಶಕ್ತಿಯಾಗಿದ್ದ ಅವನ ಗುರು ಅರಿಸ್ಟಾಟಲ್. ಸ್ವಾಮಿ ವಿವೇಕಾನಂದರಿಗೆ ಗುರು ರಾಮಕೃಷ್ಣ ಪರಮಹಂಸರು, ಸಂತ ಶಿಶುನಾಳ ಶರೀಫರಿಗೆ, ಕಬೀರರಿಗೆ ಅವರ ಗುರುಗಳೇ ಪ್ರೇರಕರಾಗಿದ್ದರು ಎಂದು ಉದಾಹರಿಸಿದರು.

ಪ್ರತಿಯೊಬ್ಬರಲ್ಲೂ ವಿಶೇಷ ಶಕ್ತಿ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಪೋಷಕರು ಹಾಗೂ ಶಿಕ್ಷಕರ ಕರ್ತವ್ಯ. ತಮ್ಮ ಮಕ್ಕಳು ಎಂಜಿನಿಯರ್, ಡಾಕ್ಟರ್, ಐಎಎಸ್ ಓದಬೇಕೆಂದು ಪೋಷಕರೇ ನಿರ್ಧರಿಸುವ ಬದಲು ಮಕ್ಕಳಲ್ಲಿನ ಪ್ರತಿಭೆ ಗುರುತಿಸಬೇಕು ಎಂದು ಕಿವಿ ಮಾತು ಹೇಳಿದರು.

ಸಮಯ ಸಾಧಕರು ಬಹಳ ಜನ ಸಿಗುತ್ತಾರೆ. ಆದರೆ ನಿಜವಾದ ಸಾಧಕರು ಸಿಗುವುದು ವಿರಳ. ನಿಜ ಸಾಧಕರ ಪೈಕಿ ಜಸ್ಟಿನ್ ಡಿಸೌಜ ಒಬ್ಬರು. ಅವರು ನಿಸ್ವಾರ್ಥ ಸೇವೆಯಿಂದ ಸಂಸ್ಥೆ ಕಟ್ಟಿದವರು. ಜಿಲ್ಲಾ ಸಮಾಚಾರ ಬಳಗ ಉತ್ತಮ ಸಾಧಕರನ್ನು ಗುರುತಿಸಿ ಶ್ರೇಷ್ಠ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಾಧಕರು ಯಾವತ್ತೂ ಅರ್ಜಿ ಹಿಡಿದುಕೊಂಡು ಹೋಗಬಾರದು. ಸಂಘ-ಸಂಸ್ಥೆಗಳೇ ನಿಜವಾದ ಸಾಧಕರನ್ನು ಹುಡುಕಿ ಪ್ರಶಸ್ತಿ  ನೀಡಿದರೆ ಅದೇ ನಿಜವಾದ ಸಾಧಕರಿಗೆ ತೋರಿಸುವ ಗೌರವ ಎಂದು ಜೋಶಿ, ಸಾಧಕರು ಅಕ್ಕಪಕ್ಕದವರ ಗೇಲಿಯನ್ನೇ ಎದುರಿಸಬೇಕಾ ಗುತ್ತದೆ. ಅದನ್ನು ಮೆಟ್ಟಿ ಮುಂದೆ ಸಾಗಿದರೆ  ನಂತರ ಸಾಧನೆ ಕಂಡು ಅವರೇ ಹೊಗಳಲಾರಂಭಿಸುತ್ತಾರೆ.ಸಾಧಕನಿಗೆ ಮತ್ತಷ್ಟು ಸಾಧನೆ ಮಾಡುವ ತುಡಿತ ಇರುತ್ತದೆ ಎಂದು ಹೇಳಿದರು.

ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಶ್ರೀಮತಿ ಜಸ್ಟಿನ್ ಡಿಸೌಜ ಮಾತನಾಡುತ್ತಾ,  ಪ್ರಶಸ್ತಿಯನ್ನು ಸಂಸ್ಥೆಗೆ ಅರ್ಪಿಸುವುದಾಗಿ ಹೇಳಿದರು.

ಸರ್ಕಾರದ ಅನುದಾನವಿಲ್ಲದೆ ನಡೆಯುತ್ತಿರುವ ಸಂಸ್ಥೆಯನ್ನು ಪೋಷಕರೇ ಮುನ್ನಡೆಸುತ್ತಿದ್ದಾರೆ. ಬೋಧಕರು, ಬೋಧಕೇತರ ವರ್ಗದವರ ಶ್ರಮ ಸಂಸ್ಥೆಯ ಪ್ರಗತಿಗೆ ಕಾರಣ ವಾಗಿದೆ. ತಮ್ಮ ಮೂವರು ಮಕ್ಕಳು, ಸೊಸೆ ಯಂದಿರು, ಮೊಮ್ಮಕ್ಕಳೂ ಸಹ ಸಂಸ್ಥೆಯ ಏಳ್ಗೆ ಯಲ್ಲಿ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದರು.

ಸಿದ್ಧಗಂಗಾ ಶ್ರೀಗಳ ಹೆಸರಿಗೆ ಚ್ಯುತಿ ಬಾರದಂತೆ ಸಂಸ್ಥೆಯನ್ನು ಮುನ್ನಡೆಸಬೇಕೆಂದು ಸಂಸ್ಥೆಯ ಸಂಸ್ಥಾಪಕ ಶಿವಣ್ಣನವರು ಹೇಳಿದ್ದರು. ಅವರು ಹೇಳಿದಂತೆ ನಡೆದುಕೊಂಡು ಬಂದಿದ್ದೇವೆ. ಸಿದ್ಧಗಂಗಾ ಎನ್ನುವುದು ಒಂದು ಮಂತ್ರ, ಒಂದು ಶಕ್ತಿ ಇದ್ದಂತೆ. ಆ ಮಂತ್ರ ಮಕ್ಕಳಿಗೆ ಸ್ಪೂರ್ತಿ ನೀಡುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಹೊರ  ಹೊಮ್ಮುವುದು ಹೆಮ್ಮೆಯ ವಿಷಯ ಎಂದು ನುಡಿದರು.

51 ವರ್ಷಗಳಿಂದ ಒಂದು ಶಿಕ್ಷಣ ಸಂಸ್ಥೆ ನಿರಂತರವಾಗಿ ನಡೆಯುವುದು ಸುಲಭದ ಮಾತಲ್ಲ. ಹೋರಾಟವಿಲ್ಲದೆ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ನನಗೆ ಹೆಮ್ಮೆಯ ವಿಷಯ. ಆದರೆ ಜಿಲ್ಲಾ ಸಮಾಚಾರ ಬಳಗ ನನ್ನನ್ನೇ ಗುರುತಿಸಿ ಸನ್ಮಾನಿಸುತ್ತಿದೆ. ಬಳಗಕ್ಕೆ ಹಾಗೂ ಪ್ರೀತಿ ತೋರುವ ದಾವಣಗೆರೆಯ ಜನತೆಗೆ ಸದಾ ಋಣಿಯಾಗಿರುವುದಾಗಿ ಹೇಳಿದರು.

ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಎ.ಎಸ್. ವೀರಣ್ಣ ಅಧ್ಯಕ್ಷತೆ ವಹಿಸಿದ್ದರು. ಬಳಗದ ಸಂಸ್ಥಾಪಕ ವಿ.ಹನುಮಂತಪ್ಪ, ಗೌರವ ಅಧ್ಯಕ್ಷ ಡಾ.ಈಶ್ವರ ಶರ್ಮ, ಅಧ್ಯಕ್ಷೆ  ಶ್ರೀಮತಿ ಸತ್ಯಭಾಮ ಮಂಜುನಾಥ್, ಉಪಾಧ್ಯಕ್ಷ ಎಂ.ಎ. ವೆಂಕಟೇಶ್, ಸಹ ಕಾರ್ಯದರ್ಶಿ ಶ್ರೀಮತಿ ಭಾರತಿ, ಸಂಚಾಲಕ ಸಾ.ಗಣೇಶ್ ಶೆಣೈ, ಮಹಾಂತೇಶ್ ವಿ.ಒಣರೊಟ್ಟಿ, ರಾಘವೇಂದ್ರ ನಾಯರಿ, ಪ್ರಸಾದ್ ಬಂಗೇರ ಇತರರು ಉಪಸ್ಥಿತರಿದ್ದರು.

error: Content is protected !!