ಮಕ್ಕಳ ಕಲಿಕೆಯ ಹೊಣೆಗಾರಿಕೆ ತಂದೆ – ತಾಯಿಗಳಿಬ್ಬರದು

ವಿನೂತನ ಮಹಿಳಾ ಸಮಾಜದ ವಾರ್ಷಿಕೋತ್ಸವದ ಸಮಾರಂಭದಲ್ಲಿ ಪ್ರಾಧ್ಯಾಪಕ ಡಾ. ನವಿಲೇಹಾಳ್

ದಾವಣಗೆರೆ ಜ.2- ಪ್ರಸ್ತುತ ಮಕ್ಕಳಿಗೆ ವಿದ್ಯೆ ಕಲಿಸಬೇಕಾದ ಹೊಣೆಗಾರಿಕೆಯನ್ನು ತಾಯಿಯ ಜೊತೆಗೆ ತಂದೆಯೂ ಹೊರಬೇಕಾದ ಅನಿವಾರ್ಯತೆ ಇದೆ ಎಂದು ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್ ಹೇಳಿದರು.

ನಗರದ ವಿನಾಯಕ ಬಡಾವಣೆ ವಿದ್ಯಾನಗರದ ವಿನಾಯಕ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ವಿನೂತನ ಮಹಿಳಾ ಸಮಾಜದ 15 ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಮಾಜದಲ್ಲಿ ಮಹಿಳೆಯನ್ನು 2 ನೇ ದರ್ಜೆ ಪ್ರಜೆಯನ್ನಾಗಿ     ನೋಡುವ ಹಾಗೂ ಹೆಣ್ಣನ್ನು  ಅಕ್ಷರ ಸಂಸ್ಕೃತಿಯಿಂದ ದೂರ ಇಡಲಾಗಿತ್ತು. ಆದರೀಗ ಕಾಲ ಬದಲಾಗಿದೆ.  ಮಹಿಳೆ ಸಬಲೆಯಾಗಿದ್ದು, ಸುಶಿಕ್ಷಿತಳಾಗಿ, ಎಲ್ಲಾ ಕ್ಷೇತ್ರಗಳಲ್ಲೂ ಪುರುಷನ ಸರಿ ಸಮನಾಗಿ ದುಡಿಯುತ್ತಿದ್ದಾಳೆ. ವಿದ್ಯೆ, ಪದವಿ ಪಡೆದ ಶಿಕ್ಷಣವಂತ ಮಹಿಳೆಯೇ ತನಗೆ ಹೆಣ್ಣು ಬೇಡವೆಂದು ಭ್ರೂಣ ಹತ್ಯೆಯಂತಹ ಕ್ರೌರ್ಯಕ್ಕೆ ಬಲಿಯಾಗುತ್ತಿರುವುದು ವಿಷಾದದ ಸಂಗತಿ ಎಂದರು.

ಮಕ್ಕಳಿಗೆ ಕೇವಲ ಓದು-ಬರಹವಿದ್ದ ರಷ್ಟೇ ಸಾಲದು, ನೈತಿಕ ಶಿಕ್ಷಣದ ಅವಶ್ಯವಿದೆ. ಅರಿವನ್ನು ಕಲಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಜೀವನ ಕ್ರಮ ಬದಲಾಗುತ್ತಿದ್ದು, ದ್ವಂದ್ವಗಳಲ್ಲಿ ಬದುಕುತ್ತಿದ್ದೇವೆ ಎಂದರು.

ಅನ್ಯಾಯಕ್ಕೊಳಗಾದವರ ಬಗ್ಗೆ ಕರುಣೆಯೂ ಇಲ್ಲ, ಅನ್ಯಾಯ ಮಾಡಿದವರ ಬಗ್ಗೆ ಸಿಟ್ಟು ಇಲ್ಲದಂತಾಗಿದೆ. ರೋಗಗ್ರಸ್ಥ ಧಾರಾವಾಹಿಗಳನ್ನು ನೋಡುವ ಬದಲು ವಿನೂತನ ಮಹಿಳಾ ಸಮಾಜ ಯೋಜಿಸುವ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸುವ ಅವಶ್ಯವಿದೆ ಎಂದು ಕರೆ ನೀಡಿದರು. 

ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ರೇಖಾ ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ವಿನಾಯಕ ಬಡಾವಣೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಯು. ಸದಾಶಿವಪ್ಪ ಉಪಸ್ಥಿತರಿದ್ದರು. 

ನಾಡಗೀತೆ ಮತ್ತು ವಿನೂತನ ಮಹಿಳಾ ಸಮಾಜದ ಮಹಿಳೆಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಮಾಜದ ಕಾರ್ಯದರ್ಶಿ ಶೈಲಜಾ ತಿಮ್ಮೇಶ್ ನಿರೂಪಿಸಿದರು. ಚೇತನಾ ಮಂಜುನಾಥ್ ಸ್ವಾಗತಿಸಿದರು. ಸಾವಿತ್ರಿ ಗವಿಸಿದ್ದೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾ ಪಾಟೀಲ್ಮ ವಂದಿಸಿದರು. 

ಮಮತಾ ಜಯಕುಮಾರ್,  ಲೀಲಾ ಶೇಖರ್, ಮಂಜುಳಾ ನಾಗರಾಜ್, ಶಶಿ ಶಿವಯ್ಯ, ಲಲಿತಾ ಪಾಟೀಲ್ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.

ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾಗಿದ್ದ ಅನಿತಾ ಹೊಸಗೌಡರ್ ಹಾಗೂ ವಿನೂನ ಮಹಿಳಾ ಸಮಾಜದ ಅಧ್ಯಕ್ಷರಾದ ರೇಖಾ ಓಂಕಾರಪ್ಪ ಅವರನ್ನು  ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅವರು ರೇಖಾ ಓಂಕಾರಪ್ಪ ಅವರನ್ನು ಅಭಿನಂದಿಸಿದರು. 

error: Content is protected !!