ಜನತೆ ದೂರು ನೀಡದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿಲ್ಲ: ಎಸ್ಪಿ ರಿಷ್ಯಂತ್
ದಾವಣಗೆರೆ, ಮೇ 4- ಸ್ಥಳೀಯರನ್ನು ಹೆದರಿಸಿ ಹಣ ಮಾಡುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಅಂತಹವರ ವಿರುದ್ಧ ದೂರು ನೀಡದ ಹಿನ್ನೆಲೆಯಲ್ಲಿ ಇಲಾಖೆಯೂ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಯಾರಾದರೂ ದೂರು ನೀಡಿದರೆ, ರೌಡಿಗಳನ್ನು ಹಿಡಿದು ಜೈಲಿಗೆ ಕಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್ ತಿಳಿಸಿದರು.
ದಾವಣಗೆರೆಯಲ್ಲಿ ವೃತ್ತಿ ನಿರತ ರೌಡಿಗಳು ಕಡಿಮೆ ಇದ್ದರೂ, ರೌಡಿ ಶೀಟರ್‍ಗಳು ಬಹಳ ಜನರಿದ್ದಾರೆ. ಕೆಲ ದಿನದ ಹಿಂದಷ್ಟೇ ರೌಡಿ ಶೀಟರ್ ಗಾರೆ ಮಂಜನನ್ನು ಬಂಧಿಸಿ, ಜೈಲಿಗೆ ಕಳಿಸಲಾಗಿದೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಮಾಡಲಾಗುತ್ತಿದೆ. ಸಕ್ರಿಯವಾಗಿ ಇರುವ ರೌಡಿಗಳ ವಿರುದ್ದ ಗೂಂಡಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗುವುದು. ಅಲ್ಲದೇ ಕಾನೂನು ರೀತಿ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಆದರೆ ಜನರು ಅಂತಹ ರೌಡಿಗಳ ಬಗ್ಗೆ ದೂರು ನೀಡುತ್ತಿಲ್ಲ. ರೌಡಿಗಳ ವಿರುದ್ಧ ದೂರು ನೀಡದ ಹಿನ್ನೆಲೆಯಲ್ಲಿ ಇಲಾಖೆಯೂ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ತಮ್ಮ ಕಚೇರಿಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಈಗಾಗಲೇ ಅಕ್ರಮ ಮರಳು ದಂಧೆಕೋರರು, ಹಣ ವಸೂಲಿ ಮಾಡುವ, ತಿಂಗಳು ಮಾಮೂಲು ಪಡೆಯುವ, ರೌಡಿಸಂ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ. ಹಲವರನ್ನು ಜೈಲಿಗೆ ಕಳಿಸಲಾಗಿದೆ. ಇಂತಹ ಪ್ರಕರಣಕ್ಕೆ ಸಂಬಂಧಪಟ್ಟಂತೆ 1.25 ಕೋಟಿ ರೂ.ಗಳನ್ನು ರೌಡಿಗಳಿಂದ ಜಪ್ತು ಮಾಡಲಾಗಿದೆ. ಈಗಾಗಲೇ ರೌಡಿ ಪರೇಡ್ ನಡೆಸಿದ್ದು, ಖಡಕ್ ವಾರ್ನಿಂಗ್ ಮಾಡಿದ್ದೇವೆ. ಯಾರೇ, ಎಷ್ಟೇ ದೊಡ್ಡವರು ಇರಲಿ, ಸಾರ್ವಜನಿಕರು ದೂರು ನೀಡಿದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಜನರೂ ಸಹ ಭಯವಿಲ್ಲದೇ ದೂರು ಕೊಡಲಿ, ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಭೂ ವಿವಾದ ಸೇರಿದಂತೆ ಬೆದರಿಕೆ, ರೌಡಿಸಂ ಮಾಡುವ ಪ್ರಕರಣಗಳಿದ್ದರೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿ. ಈಗಾಗಲೇ ರೌಡಿ ಪರೇಡ್ ನಡೆಸಿದ್ದು, ಖಡಕ್ ವಾರ್ನಿಂಗ್ ಮಾಡಿದ್ದೇವೆ. ಜನರು ದೂರು ನೀಡಿದರೆ, ಎಂತಹ ರೌಡಿಯನ್ನಾದರೂ ಮಟ್ಟ ಹಾಕುತ್ತೇವೆ. ಇಲ್ಲಿ ರೌಡಿ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆಯೂ ದೂರು ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇವೆ. ಮೈಸೂರು ಇಮ್ರಾನ್ ಸಿದ್ದಿಕಿ ಬಳಿ ಸುಮಾರು 75 ಲಕ್ಷ ರೂ. ವಶಪಡಿಸಿಕೊಂಡಿದ್ದೇವೆ. ಆತನ ಬಳಿ ಎರಡು ಬೆಂಜ್ ಕಾರುಗಳಿವೆ. ಆದರೆ ಕೃತ್ಯಕ್ಕೆ ಬಳಸಿಲ್ಲ. ಐಷಾರಾಮಿ ಜೀವನ ನಡೆಸುತ್ತಿದ್ದ. ಯಾರೇ ಆದರೂ ಕಾನೂನು ವಿರೋಧಿ ಕೃತ್ಯ ಎಸಗಿದರೆ ಕಠಿಣ ಕ್ರಮ ಖಚಿತ.
ಈಗಾಗಲೇ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಮೂವರನ್ನು ಬಂಧಿಸಿದ್ದೇವೆ. ಇನ್ನು ಹಲವರು ಈ ಪ್ರಕರಣದಲ್ಲಿದ್ದಾರೆ. ತನಿಖೆ ಮುಂದುವರೆದಿದೆ. ಈಗ ಸಿಕ್ಕಿ ಬಿದ್ದಿರುವ ಸಿದ್ಧಿಕಿ ಮಾಮೂಲು ಹಣ ವಸೂಲು ಮಾಡಲು ಜನರನ್ನು ಇಟ್ಟುಕೊಂಡಿದ್ದ ಎಂದು ಹೇಳಿದರು.