ದಾವಣಗೆರೆ, ಏ.4- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಔಷಧಿ ವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಔಷಧಿ ಸೇರಿದಂತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಕಳೆದ ಹತ್ತು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿ ಲೀಟರ್‍ಗೆ 6.40 ರೂ.ಗಳಷ್ಟು ಹೆಚ್ಚಳವಾಗಿದ್ದು, ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತಿದೆ. ಮಾ. 22ರ ನಂತರ ಸತತ 9 ಬಾರಿ ಇಂಧನ ಬೆಲೆ ಹೆಚ್ಚಳವಾಗಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ದಾವಣಗೆರೆ ಉತ್ತರ ಗ್ರಾಮಾಂ ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಪರಶುರಾಮ್ ಮಾಗಾನಹಳ್ಳಿ ಮಾತ ನಾಡಿ, ರೈತರ ಬೆಳೆಗೆ ಸಮರ್ಪಕ ಬೆಲೆ ನೀಡದ ಕೇಂದ್ರ ಸರ್ಕಾರ ರೈತರು ಖರೀದಿಸುವ ಗೊಬ್ಬರ, ಬಿತ್ತನೆ ಬೀಜಗಳ ಬಳಕೆ ಹೆಚ್ಚಿಸುವ ಮೂಲಕ ಅನ್ನದಾತನನ್ನು ಸಂಕಷ್ಟಕ್ಕೆ ತಳ್ಳಲಾಗಿದೆ ಎಂದು ಕಿಡಿ ಕಾರಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದರು.
ದಾವಣಗೆರೆ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ದೇಶದಲ್ಲಿ ಹಿಂದೂ-ಮುಸ್ಲಿಂ ಸೇರಿದಂತೆ, ಎಲ್ಲಾ ಧರ್ಮೀಯರು ಸೌಹಾರ್ದಯುತ ವಾಗಿ ಬಾಳುತ್ತಿದ್ದಾರೆ. ಬಿಜೆಪಿಯವರು ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಹಿಜಾಬ್, ಹಲಾಲ್ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರರಾದ ನಾಗರತ್ನಮ್ಮ, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಮುಖಂಡರಾದ ಎ. ನಾಗರಾಜ್, ಕೆ. ಚಮನ್ ಸಾಬ್, ಎಸ್. ಮಲ್ಲಿಕಾರ್ಜುನ್, ಹೆಚ್. ಜಯಣ್ಣ, ನಿಖಿಲ್ ಕೊಂಡಜ್ಜಿ, ಸಾಗರ್, ರಾಘವೇಂದ್ರ ಗೌಡ, ಹರೀಶ್ ಕೆ.ಎಲ್. ಬಸಾಪುರ, ಬಾತಿ ಶಿವಕುಮಾರ್, ನಂಜಾನಾಯ್ಕ, ಯಾಸಿನ್ ಪೀರ್, ಮಂಗಳಮ್ಮ, ರಾಜೇಶ್ವರಿ, ಲಕ್ಷ್ಮಿಬಾಯಿ, ಸಾಕಮ್ಮ, ಗೀತಾ ಚಂದ್ರಶೇಖರ್, ಸುರೇಶ್ ಜಾಧವ್, ಡೋಲಿ ಚಂದ್ರು, ಕೋಳಿ ಇಬ್ರಾಹಿಂ, ಹೆಚ್. ಗುರುರಾಜ್, ರಾಕೇಶ್, ಸುಭಾನ್‍ಸಾಬ್, ಮಹ್ಮದ್ ಬಾಷಾ, ಹರೀಶ್, ಆನಂದ್ ಇಟ್ಟಿಗುಡಿ, ದೇವರಹಟ್ಟಿ ಶಮೀವುಲ್ಲಾ, ಕರಿಬಸಪ್ಪ ಯರಗುಂಟೆ, ಮಂಜಾನಾಯ್ಕ, ವಿನಯ್, ರವಿ ಎಸ್. ಮತ್ತಿತರರಿದ್ದರು.