ಮಾರುಕಟ್ಟೆಯಲ್ಲಿ ಟ್ರಾಫಿಕ್‌ ಸಮಸ್ಯೆ-ಲಯನ್ ಘರ್ಜನೆಗೆ ರೋಡ್ ಕ್ಲಿಯರ್

ಮಾರುಕಟ್ಟೆಯಲ್ಲಿ ಟ್ರಾಫಿಕ್‌ ಸಮಸ್ಯೆ-ಲಯನ್ ಘರ್ಜನೆಗೆ ರೋಡ್ ಕ್ಲಿಯರ್

ಬಿ. ಸಿಕಂದರ್

ಏ.. ಆಟೋ, ಸ್ವಲ್ಪ ಸೈಡ್‌ಗೆ ಬಾರಪ್ಪ. ಆ ನಿಂಬೆ ಹಣ್ಣಿನ ಗಾಡಿ ಮುಂದೆ ತಳ್ಳು, ಇದ್ಯಾರಪ್ಪ ಸ್ಕೂಟರ್ ರಸ್ತೆಗೆ ಅಡ್ಡ ಹಾಕ್ದೋರು, ಸೈಡ್‌ಗೆ ತಳ್ಳಿ. ಏ.. ಬೆಳ್ಳುಳ್ಳಿ ಇನ್ನೊಂದು ಸಾರಿ ರಸ್ತೆಗೆ ಗಾಡಿ ಬಂದ್ರೆ ನೋಡು ನಿನಗೆ..! 

ಹೀಗೆ ಧ್ವನಿ ವರ್ಧಕದಲ್ಲಿ ಎಚ್ಚರಿಕೆ ನೀಡುತ್ತಲೇ ಮುಂದೆ ಸಾಗುವ `ಲಯನ್ ಘರ್ಜನೆಗೆ’ ತತ್ತರಿಸಿ ವ್ಯಾಪಾರಸ್ಥರು ಕ್ಷಣ ಮಾತ್ರ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ. ಲಯನ್ ಮರೆಯಾದ ಬಳಿಕ ಸಂಜೆಯವರೆಗೂ ಅದೇ ರಾಗ, ಅದೇ ಹಾಡು.!

ಇಂತಹ ದೃಶ್ಯವಳಿಗಳು ನಿತ್ಯವೂ ಕೆ.ಆರ್. ಮಾರ್ಕೆಟ್, ಚಾಮರಾಜೇಂದ್ರ ವೃತ್ತ, ಹಾಸಬಾವಿ ವೃತ್ತ ಮತ್ತು ಚೌಕಿ ಪೇಟೆಯಲ್ಲಿ ಕಾಣಿಸುತ್ತವೆ.

ತಳ್ಳು ಗಾಡಿಯ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಸ್ಥರು ಹಾಗೂ ಗ್ರಾಮೀಣ ಭಾಗದ ರೈತರು ಮಾರುಕಟ್ಟೆಯಲ್ಲಿ ಪ್ರತಿದಿನ ರಸ್ತೆಯಲ್ಲೇ ಅಂಗಡಿ ತೆರೆಯುವುದರಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಮಾರುಕಟ್ಟೆ ದಾಟುವುದಕ್ಕೆ ನಿತ್ಯವೂ ಹರಸಾಹಸ ಪಡುವ ಪ್ರಸಂಗ ಎದುರಾಗಿದೆ.

ಸುಗಮ ಸಂಚಾರಕ್ಕಾಗಿ ಸಂಚಾರಿ ಪೊಲೀಸರು ಪ್ರತಿ ದಿನ ಸೂಕ್ತ ಕ್ರಮ ಕೈಗೊಂಡರೂ ಕೆಲವೊಮ್ಮೆ ಭಾರೀ ವಾಹನಗಳು, ಈ ಭಾಗಕ್ಕೆ ಪ್ರವೇಶಿಸಿದಾಗ ಗಂಟೆ ಗಟ್ಟಲೆ ಟ್ರಾಫಿಕ್ ಸಮಸ್ಯೆ ಎದುರಾಗಿ ವಾಹನ ಸವಾರರಲ್ಲಿ ಸಂಘರ್ಷಗಳು ನಡೆಯುತ್ತಿವೆ.

ಸುಮಾರು ವರ್ಷಗಳಿಂದ ಜಲ್ವಂತ ಸಮಸ್ಯೆ ಎದುರಿಸುತ್ತಿರುವ ಈ ಭಾಗದ ಚಿಕ್ಕ ಪುಟ್ಟ ಅಂಗಡಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಇಲ್ಲಿ ಬರುವ ವಾಹನಗಳಿಗೆ ಸೂಕ್ತ ನಿಲ್ದಾಣದ ವ್ಯವಸ್ಥೆ ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಎಸ್ಪಿ ಉಮಾ ಪ್ರಶಾಂತ್‌ ಅವರಿಗೆ ಇಲ್ಲಿನ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಸೂಚಿಸಬೇಕೆಂದು ಹಿರಿಯ ನಾಗರಿಕರು ಸೇರಿದಂತೆ, ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

error: Content is protected !!