ಮತದಾರ ಜಾಗೃತನಾಗದ ಹೊರತು ಪ್ರಜಾಪ್ರಭುತ್ವ ಯಶಸ್ಸು ಅಸಾಧ್ಯ: ತೇಜಸ್ವಿ

ಮತದಾರ ಜಾಗೃತನಾಗದ ಹೊರತು ಪ್ರಜಾಪ್ರಭುತ್ವ ಯಶಸ್ಸು ಅಸಾಧ್ಯ: ತೇಜಸ್ವಿ

ವಿವಿಧ ವಿಚಾರಗಳ ಬಗ್ಗೆ ಪ್ರಬಂಧ ಸ್ಪರ್ಧೆ, ವಿಚಾರ ಸಂಕಿರಣ ಆಯೋಜನೆ

ಜಾತಿ ರಾಜಕಾರಣ, ಅಂಬೇಡ್ಕರ್ ವಿಚಾರಧಾರೆ, ದೇಶದ ಅಭಿವೃದ್ಧಿ ಸೇರಿದಂತೆ ಜನರಿಗೆ ಹತ್ತಿರವಾಗುವ ವಿಚಾರಗಳ ಕುರಿತಂತೆ ಇನ್ನೆರಡು ತಿಂಗಳಿನಲ್ಲಿ ಪ್ರಬಂಧ ಸ್ಪರ್ಧೆ, ವಿಚಾರ ಸಂಕಿರಣ ಹಾಗೂ ಸಂವಿಧಾನ ಸೇರಿದಂತೆ ಪ್ರಚಲಿತ ವಿಚಾರಗಳು ಪ್ರಜೆಗಳಲ್ಲಿ ನಿರಂತರವಾಗಿ ಚರ್ಚೆಯಾಗಬೇಕು ಎಂಬ ಆಲೋಚನೆ ದೃಷ್ಟಿಯಿಂದ ಆಯೋಜಿಸಲಾಗುವುದು. 

– ಜಿ. ಬಿ. ವಿನಯ್ ಕುಮಾರ್


ದಾವಣಗೆರೆ, ಫೆ. 16- ದಾವಣಗೆರೆ ಜಿಲ್ಲೆಯನ್ನಾಗಿಸಿದ್ದು ನಮ್ಮ ದೊಡ್ಡಪ್ಪ ಜೆ. ಹೆಚ್. ಪಟೇಲ್ ಅವರು. ಜಿಲ್ಲೆಯನ್ನಾಗಿಸಿದ ಸಮಾಜವಾದಿ ನಾಯಕನ ಆಶಯ ಈಡೇರಿಲ್ಲ ಎಂಬ ನೋವು ಇದೆ. ಇದಕ್ಕೆಲ್ಲಾ ರಾಜಕೀಯ ಪಕ್ಷಗಳು ಕಾರಣವೆಂದರೆ ಖಂಡಿತಾ ಅಲ್ಲ. ಪ್ರತಿಯೊಬ್ಬರದ್ದೂ ಇದರಲ್ಲಿ ಪಾತ್ರವಿದೆ.  ಮತದಾರ ಜಾಗೃತನಾಗದ ಹೊರತು, ಪ್ರಜಾಪ್ರಭುತ್ವ ಯಶಸ್ವಿ ಆಗಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಹೇಳಿದರು. 

ನಗರದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿರುವ ಶ್ರೀ ಶಿವಯೋಗ ಮಂದಿರದ ಸಭಾ ಭವನದಲ್ಲಿ ಸ್ವಾಭಿಮಾನಿ ಬಳಗವು ಇಂದು ಏರ್ಪಡಿಸಿದ್ದ ಕುಟುಂಬ ರಾಜಕಾರಣ, ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ವಿಚಾರ ಸಂಕ್ರಾಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಚನ್ನಗಿರಿ ತಾಲ್ಲೂಕು ಕಾರಿಗನೂರಿನವರಾದ ನಾವುಗಳು ಶಿವಮೊಗ್ಗ ಜಿಲ್ಲೆಗೆ ಸೇರಿದ್ದೆವು. ದೇವರಾಜ ಅರಸು ಕೃಷಿ ಸುಧಾರಣೆ ತಂದಾಗ ಶಿವಮೊಗ್ಗದಲ್ಲಿ ಕ್ರಾಂತಿಕಾರಕ ಬದಲಾವಣೆ ಆಯಿತು. ಜೆ.ಹೆಚ್. ಪಟೇಲ್ ಅವರು ತನ್ನ ತಂದೆ ಜಮೀನ್ದಾರರಾದರೂ ಗೇಣಿದಾರರ ಪರ ಹೋರಾಟ ನಡೆಸಿದರು. ಶಿವಮೊಗ್ಗದಲ್ಲಿದ್ದ ಹೋರಾಟ ಮನೋಭಾವನೆ ಇಲ್ಲಿ ಕಂಡು ಬರುತ್ತಿಲ್ಲ. ದಾವಣಗೆರೆ ಜಿಲ್ಲೆಯು ಇಂದು ವ್ಯವಹಾರ ಜಿಲ್ಲೆಯಾಗಿದ್ದು, ಪಟೇಲರ ಆಶಯಕ್ಕೆ ಕೊಡಲಿ ಪೆಟ್ಟು ಬಿತ್ತು ಎಂಬ ನೋವು ಇದೆ ಎಂದರು.

ಜಿ.ಬಿ. ವಿನಯ್ ಕುಮಾರ್ ಅವರು ವಿಚಾರ ದಿಂದ ವಿಮುಖರಾಗಬಾರದು. ಜವಾಬ್ದಾರಿಯಿಂದ ಕಾರ್ಯ ನಿರ್ವಹಿ ಸಲಿ. ಕರ್ನಾಟಕದಲ್ಲಿ ಹೊಸ ರಾಜಕೀಯ ಶಕ್ತಿಗೆ ಅವಕಾಶ ಇದೆ ಎನಿಸುತ್ತಿದೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ, ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್‌ಗೆ ದೇವೇಗೌಡರ ಕುಟುಂಬ ಅನಿವಾರ್ಯ ಎಂಬ ವಾತಾವರಣ ಇದೆ. ಈ ಮೂವರು ನಾಯಕರ ಮೇಲೆ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ವೈಯಕ್ತಿಕ ವರ್ಚಸ್ಸು ಇಲ್ಲ, ಹಣಬಲದಿಂದಲೇ ಗೆಲ್ಲುತ್ತಿದ್ದಾರೆ. ಹೊಸ ರಾಜಕೀಯ ಶಕ್ತಿ ಉದಯಕ್ಕೆ ಅವಕಾಶ ಇದ್ದು, ಸಾಮಾನ್ಯ ಜನರು ಮನಸ್ಸು ಮಾಡಿದರೆ ಹೊಸ ರಾಜಕೀಯ ಶಕ್ತಿ ಶಕ್ತಿಯುತವಾಗಲಿದೆ ಎಂದು ಅಭಿಪ್ರಾಯಪಟ್ಟರು.

ದುಡ್ಡಿಲ್ಲದೇ ಯಾವ ಕ್ಷೇತ್ರಗಳಲ್ಲಿಯೂ ಗೆಲ್ಲಲಾಗದು ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ. ಆರ್ಥಿಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಬೇಕು. ಅಂತರ ರಾಷ್ಟ್ರೀಯ, ದೇಶ, ರಾಜ್ಯ ಮತ್ತು ಜಿಲ್ಲೆಗಳ ವಿಚಾರಗಳಿಗೆ ಮತದಾರ ಆದ್ಯತೆ ಕೊಟ್ಟು ಹಕ್ಕು ಚಲಾಯಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್  ಮಾತನಾಡಿ, ಕುಟುಂಬ ರಾಜಕಾರಣದ ವಿರುದ್ಧ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರು ವುದು ಬದಲಾವಣೆಯ ಪರ್ವದ ಸಂಕೇತ. ವೈಚಾರಿಕತೆ ಬೀಜ ಬಿತ್ತಬೇಕೆಂಬುದು ನಮ್ಮ ಉದ್ದೇಶವೇ ಹೊರತು ದಾವಣಗೆರೆಯ ಕುಟುಂಬ ವೊಂದರ ವಿರುದ್ಧ ಮಾಡುತ್ತಿರುವ ಆಂದೋಲನ ಅಲ್ಲ. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕುಟುಂಬ ರಾಜಕಾರಣ ಹಾಸುಹೊಕ್ಕಾಗಿದ್ದು, ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಪ್ರತಿಪಾದಿಸಿದರು. 

34 ಕುಟುಂಬಗಳು ಬಲಿಷ್ಠವಾಗಿ ಬೆಳೆದು 140 ಕೋಟಿ ಜನರನ್ನು ನಿಯಂತ್ರಿಸುತ್ತಿವೆ. ಅವರೆಲ್ಲಾ ರಾಜ, ರಾಣಿಯಂತೆ ಬದುಕುತ್ತಿದ್ದಾರೆ. ಈ ವ್ಯವಸ್ಥೆ ಬದಲಾಗಬೇಕಿದೆ ಎಂದರು.

ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಲು ಹಿಂದೇಟು ಹಾಗೂ ಭಯಪಡುವ ಇಂಥ ವಾತಾವರಣದಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಮಾತನಾಡಿರುವುದು ಒಳ್ಳೆಯ ಬೆಳವಣಿಗೆ. ದಾವಣಗೆರೆ ವ್ಯಾಪಾರ ಕೇಂದ್ರೀತ ನಗರ. ಸಾಂಸ್ಕೃತಿಕ, ವಿಚಾರವಂತ, ಬುದ್ಧವಂತ ನಗರವನ್ನಾಗಿ ಪರಿವರ್ತಿಸಬೇಕೆಂಬುದು ನಮ್ಮ ಉದ್ದೇಶ. ಪ್ರಜಾಪ್ರಭುತ್ವದಲ್ಲಿ ಅನಿಸಿಕೆಯನ್ನು ಅಂಜಿಕೆ, ಅಳುಕು ಇಲ್ಲದೇ ವ್ಯಕ್ತಪಡಿಸಬೇಕು. ಕುಟುಂಬ ರಾಜಕಾರಣದ ಬಗ್ಗೆ ರಾಷ್ಟ್ರ, ರಾಜ್ಯ, ಜಿಲ್ಲೆ, ಊರು, ಮನೆ ಮನೆಗಳಲ್ಲಿಯೂ ಚರ್ಚೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಗೆದ್ದವರು ಅವರ ಕುಟುಂಬದ ಏಳಿಗೆ ಅಷ್ಟೇ ಗಮನಕೇಂದ್ರೀಕರಿಸುತ್ತಾರೆ. ಕ್ಷೇತ್ರದ ಅಭಿವೃದ್ದಿ ಬೇಕಿಲ್ಲ. ನಗರ ಪ್ರದೇಶದವರಿಗಿಂತ ಹಳ್ಳಿಗಳ ಜನರು ಪರಾವಲಂಬಿಗಳಾಗ ಬೇಕು. ಆದ್ರೆ, ದೊಡ್ಡ ಸಮಾವೇಶ ನಡೆಯುವುದು ಕುರ್ಚಿ ಗಟ್ಟಿಮಾಡಲು ಹೊರತು ಶೋಷಿತರ ಅಭಿವೃದ್ಧಿಗಲ್ಲ. ಸಹಿಸಿ ಕೊಂಡು ಹೋಗುತ್ತಿದ್ದೇವೆ. ಇಂದಿನ ಯುವಕರು, ಯುವತಿ ಯರು ಗಟ್ಟಿಯಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು. ನಿರ್ಭೀತಿ ಯಿಂದ ನಡೆಯಬೇಕು ಎಂದು ಕಿವಿಮಾತು ಹೇಳಿದರು. 

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಕಾರ್ಯಕ್ರಮ ಮಾಡಿಲ್ಲ. ನನ್ನ ರೀತಿ 100 ಜನರು ಬೆಳೆಯಬೇಕು. ರಾಜ್ಯ, ಜಿಲ್ಲೆಯಲ್ಲಿ ಈ ರೀತಿ ಬೆಳೆದರೆ ಅಧಿಕಾರ ವಿಕೇಂದ್ರೀಕರಣ ಆಗುತ್ತದೆ. ಒಬ್ಬ ವ್ಯಕ್ತಿ ಮೇಲೆ ವ್ಯವಸ್ಥೆ ಸೃಷ್ಟಿಯಾಗಬಾರದು. ನಾಯಕತ್ವವೂ ಬೇಕು. ಪ್ರಜಾಪ್ರಭುತ್ವ ಆಶಯವೂ ಉಳಿಯಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗುವಂ ತಾಗಬೇಕು ಎಂದು ವಿನಯ್ ಕುಮಾರ್ ಎಂದು ಹೇಳಿದರು.

ಯಾವ ಪಕ್ಷದೊಳಗೂ ಪ್ರಜಾಪ್ರಭುತ್ವವೇ ಇಲ್ಲದಂತಾಗಿದೆ. ಚುನಾವಣೆ ಆದ ಮೇಲೆ ನಾನು ವಿಶ್ರಾಂತಿ ಪಡೆಯಬಹುದಿತ್ತು. ಆದ್ರೆ, ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಬೀದರ್, ರಾಯಚೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಪ್ರಜ್ಞೆ ಮೂಡಿಸುತ್ತಿದ್ದೇನೆ. ಜನರು ಕುಟುಂಬ ಆಧಾರಿತ ರಾಜಕೀಯ ಕೈಹಿಡಿಯುತ್ತಾರೆಂದು ಭ್ರಮನಿರಸನಕ್ಕೊಳಗಾಗಿ ಕೂರಲಿಲ್ಲ. ಮುಂಬರುವ ದಿನಗಳಲ್ಲಿ ಯಶಸ್ಸು ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದರು. 

 ವೇದಿಕೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಹೆಚ್. ಅರುಣ್ ಕುಮಾರ್, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್, ವಕೀಲರಾದ ಸಿ. ಪಿ. ಅನಿತಾ, ಚಿತ್ರನಿರ್ದೇಶಕರು, ಉಪನ್ಯಾಸಕ ಮಾರುತಿ ಶಾಲೆಮನೆ ಮಾತನಾಡಿದರು.

ಎಸ್.ಎಂ. ಕೃಷ್ಣ ಕಾಲೇಜಿನ  ಉಪನ್ಯಾಸಕ ರಾದ ಧನಂಜಯ, ಗುರುದೇವ ಬಳುಂಡಗಿ, ರಾಜು ಮೌರ್ಯ, ವಿರೂಪಾಕ್ಷಪ್ಪ ಪಂಡಿತ್, ಶಿವಕುಮಾರ್ ಶೆಟ್ಟರ್, ಪುರಂದರ ಲೋಕಿಕೆರೆ, ಅಯ್ಯಣ್ಣ ಹುಲಿಕಲ್, ಶಿವಕುಮಾರ್ ಸಂಬಳಿ, ಸಾಧಿಕ್, ಹೊನ್ನಾಳಿಯ ರಾಜು ಕಣಗಣ್ಣನವರ್,  ಮತ್ತಿತರರು  ಉಪಸ್ಥಿತರಿದ್ದರು.

error: Content is protected !!