ಆಫ್ರಿಕಾದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನೈಜೀರಿಯಾದಲ್ಲಿ ಕ್ರಿಸ್‌ಮಸ್ ರಜೆಯ ಅವಧಿ ಜೀವಗಳಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಿಸುತ್ತಿದೆ. ನೈಜೀರಿಯಾದಲ್ಲಿ ಹಸಿವು ವ್ಯಾಪಕವಾಗಿದೆ. ಇಲ್ಲಿ ಪ್ರತಿಯೊಬ್ಬರು ಹಸಿದಿದ್ದಾರೆ.
ಕಳೆದ ಒಂದು ವಾರದಲ್ಲಿ ನೈಜೀರಿಯಾದಲ್ಲಿ ಆಹಾರಕ್ಕಾಗಿ ನಡೆಸಲಾದ ನೂಕು ನುಗ್ಗಲಿನಲ್ಲಿ ಕನಿಷ್ಟ 67 ಜನ ಸಾವನ್ನಪ್ಪಿದ್ದಾರೆ. ಈ ಪೀಳಿಗೆಯ ಅತ್ಯಂತ ಭೀಕರ ಬದುಕಿನ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ನೆರವು ಒದಗಿಸುವುದು ಹರಸಾಹಸವಾಗುತ್ತಿದೆ.
ಕಳೆದ ಬುಧವಾರ ಓಯೋ ಪ್ರಾಂತ್ಯದಲ್ಲಿ ಸಂಭವಿಸಿದ ನೂಕು ನುಗ್ಗಲಿನಲ್ಲಿ ಕನಿಷ್ಟ 35 ಮಕ್ಕಳು ಸಾವನ್ನಪ್ಪಿದ್ದರು. ಶನಿವಾರ ಅನಮ್ರ ರಾಜ್ಯದಲ್ಲಿ ಸಂಭವಿಸಿದ ನೂಕು ನುಗ್ಗಲಿನಲ್ಲಿ 22 ಜನ ಮೃತಪಟ್ಟಿದ್ದರು. ರಾಜಧಾನಿ ಅಬುಜಾದಲ್ಲಿ 10 ಜನ ಸಾವನ್ನಪ್ಪಿದ್ದರು.
ಆಫ್ರಿಕಾದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನೈಜೀರಿಯಾದಲ್ಲಿ ಕ್ರಿಸ್‌ಮಸ್ ರಜೆಯ ಅವಧಿ ಜೀವಗಳಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಿಸುತ್ತಿದೆ. ನೈಜೀರಿ ಯಾದಲ್ಲಿ ಹಸಿವು ವ್ಯಾಪಕವಾಗಿದೆ. ಇಲ್ಲಿ ಪ್ರತಿಯೊಬ್ಬರು ಹಸಿದಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.
ಹಣ ಉಳಿಸಲು ಹಾಗೂ ಹೂಡಿಕೆ ಸೆಳೆಯಲು ಸರ್ಕಾರ ರೂಪಿಸಿರುವ ನೀತಿಗಳೇ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿವೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಹಣದುಬ್ಬರ ದರ ಶೇ. 34.6ಕ್ಕೆ ತಲುಪಿದ್ದು ಇದು 28 ವರ್ಷಗಳಲ್ಲೇ ಅತಿ ಹೆಚ್ಚಾಗಿದೆ. ನೈಜೀರಿಯಾದ ಹಣವಾದ ನೈರಾ ಡಾಲರ್ ಎದುರು ದಾಖಲೆಯ ಕುಸಿತ ಕಾಣುತ್ತಿದೆ.
ದೇಶದ 210 ದಶಲಕ್ಷ ಜನರ ಪೈಕಿ ಕನಿಷ್ಟ ಶೇ. 63ರಷ್ಟು ಜನ ಬಡವರಿದ್ದಾರೆ ಎಂದು ಸರ್ಕಾರದ ಅಂಕಿ – ಅಂಶಗಳು ತಿಳಿಸುತ್ತಿವೆ. ಉದ್ಯೋಗ ಸೃಷ್ಟಿಸಲು ಸರ್ಕಾರ ಪರದಾಡುತ್ತಿದೆ. ಹತಾಶೆಗೊಂಡ ಜನ ಪ್ರತಿಭಟನೆ ನಡೆಸಲು ಮುಂದಾದರೆ ಬರ್ಬರವಾಗಿ ಹತ್ತಿಕ್ಕಲಾಗುತ್ತಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ದೇಶಾದ್ಯಂತ ಪ್ರತಿಭಟನೆಗಳು ನಡೆದಾಗ ಭದ್ರತಾ ಪಡೆಗಳು 20ಕ್ಕೂ ಹೆಚ್ಚು ಜನರನ್ನು ಹೊಡೆದುರುಳಿಸಿದ್ದವು.
ಸಾಮಾನ್ಯ ನೈಜೀರಿಯಾ ವ್ಯಕ್ತಿಯ ಕೈಗೆ ಆಹಾರ ಸಿಗುತ್ತಿಲ್ಲ. ದೇಶದ 97ರಷ್ಟು ಜನರು ತಮ್ಮ ಆದಾಯದ ಶೇ. 63ರಷ್ಟನ್ನು ಆಹಾರಕ್ಕಾಗಿ ವೆಚ್ಚ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿ ಸುತ್ತಿದೆ ಎಂದು ಲಾಗೋಸ್‌ನ ಎಸ್‌ಬಿಎಂ ಇಂಟಲಿಜೆಂಟ್ ಸಂಶೋಧನಾ ಸಂಸ್ಥೆಯ ವ್ಯವಸ್ಥಾಪಕ ಸಹಭಾಗಿ ಚತಾ ನ್ವಾಂಜೆ ಹೇಳಿದ್ದಾರೆ.
ನೈಜೀರಿಯಾದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಸಾವುಗಳು ಸಂಭವಿಸುವುದು ಹೊಸದೇನೂ ಅಲ್ಲ. ಈ ದೇಶದಲ್ಲಿ ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡುವ ಅಭ್ಯಾಸ ಇಲ್ಲ. ಇದರ ನಡುವೆ ಹಸಿವಿನಿಂದ ಹತಾಶೆ ಗೊಂಡಿರುವ ಜನರು ಗುಂಪು ಸೇರಿದಾಗ ನಿಯಂತ್ರಿಸುವುದು ಇನ್ನಷ್ಟು ಕಠಿಣವಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಆಹಾರ ವಿತರಣೆ ಆರಂಭವಾಗುವ ಮುಂಚೆಯೆ ಅಬುಜಾ ಹಾಗೂ ಅನಮ್ರಗಳಲ್ಲಿ ನೂಕು ನುಗ್ಗಲು ನಡೆದಿದ್ದವು ಎಂದು ಪ್ರತ್ಯಕ್ಷ ದರ್ಶಿಗಳು ಹಾಗೂ ಪೊಲೀಸರು ಹೇಳಿದ್ದಾರೆ.
ಅವಧಿಗೆ ಮೊದಲೇ ಮುಂದಿರಬೇಕು ಎಂದು ಜನ ನೂಕು ನುಗ್ಗಲು ನಡೆಸಿದ್ದರು. ಈ ಘಟನೆಗಳ ಹಿನ್ನೆಲೆಯಲ್ಲಿ ಅಬುಜಾದ ಚರ್ಚ್‌ಗಳು ಆಹಾರ ಚೀಲ ವಿತರಣೆ ಕಾರ್ಯಕ್ರಮಗಳನ್ನು ರದ್ದುಗೊಳಿಸಿವೆ.
ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸು ವವರು ಭದ್ರತೆಗೆ ಆದ್ಯತೆ ನೀಡುವುದಿಲ್ಲ ಎಂದು ಅಬುಜಾದ ಬ್ಯಾರಿಕೇಡ್ ಎಕ್ಸಿಕ್ಯೂಟಿವ್ ಪ್ರೊಟೆಕ್ಷನ್ ಸೆಕ್ಯೂರಿಟಿ ಸಂಸ್ಥೆಯ ಅಡೆಮೊಲ್ ತಿಳಿಸಿದ್ದಾರೆ.
ಈ ನಡುವೆ ಜನರಿಗೆ ನೆರವು ನೀಡಲು ಹಲವಾರು ಸಂಘಟನೆಗಳು ಹಾಗೂ ವ್ಯಕ್ತಿಗಳು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇಂತಹ ಆಯೋಜಕರು ರಕ್ಷಣಾ ವೃತ್ತಿಪರರ ಸಲಹೆ ಹಾಗೂ ನೆರವು ಪಡೆದಲ್ಲಿ ಸಮಸ್ಯೆ ಬಗೆಹರಿಸಬಹುದು ಎಂದು ಅಡೆಮೊಲ್ ಹೇಳಿದ್ದಾರೆ.
ನೆರವು ಕಾರ್ಯಕ್ರಮಗಳು ಆಯೋಜಿಸುವಾಗ ಲೋಪಗಳು ಉಂಟಾದರೆ ಸಹಿಸುವುದಿಲ್ಲ ಎಂದು ನೈಜೀರಿಯಾ ಅಧ್ಯಕ್ಷ ಬೋಲಾ ಟಿಂಬು ಹೇಳಿದ್ದಾರೆ. ನೆರವು ಕಾರ್ಯಕ್ರಮಗಳ ಆಯೋಜಿಸಲು ಮುಂಚೆಯೇ ಅನುಮತಿ ಪಡೆಯುವುದು ಕಡ್ಡಾಯ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ರೀತಿಯ ನಿಯಮಗಳು ಹೊಸದೇನೂ ಅಲ್ಲ, ಇವುಗಳನ್ನು ಸಮರ್ಪಕವಾಗಿ ಜಾರಿಗೆ ತಂದೇ ಇಲ್ಲ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಜನರು ವರ್ಷವಿಡೀ ಆದಾಯದ ಕೊರತೆಯಿಂದ ಬಳಲಿದ್ದಾರೆ. ಎಲ್ಲಾದರೂ ಆಹಾರ ವಿತರಣೆ ನಡೆಯುತ್ತದೆ ಎಂದರೆ ಅಲ್ಲಿಗೆ ಹೋಗುವುದು ಸಹಜವಾಗಿದೆ. ನಮ್ಮಲ್ಲಿ ಸರದಿಯಲ್ಲಿ ಕಾಯುವ ಸಂಪ್ರದಾಯವಂತೂ ಇಲ್ಲವೇ ಇಲ್ಲ ಎನ್ನಬಹುದು. ಇದೆಲ್ಲವು ಕಾಲ್ತುಳಿತದ ಸಮಸ್ಯೆಗೆ ಆಹ್ವಾನ ನೀಡುತ್ತವೆ ಎಂದು ವಾಂಜೆ ಹೇಳಿದ್ದಾರೆ.
ಎಸ್.ಎ. ಶ್ರೀನಿವಾಸ್