ದಾವಣಗೆರೆ, ಡಿ. 24- ಡಾ. ಅಂಬೇಡ್ಕರ್ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಲು ಸೂಚಿಸಬೇಕು. ಇಲ್ಲವೇ ಅಮಿತ್ ಶಾ ಅವರನ್ನು ಈ ಕೂಡಲೇ ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಆಗ್ರಹಿಸಿದರು.
ನಗರದ ತಮ್ಮ ಗೃಹ ಕಚೇರಿ ಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ರವರಿಗೆ ಅಂಬೇಡ್ಕರ್ ಬಗ್ಗೆ ಮೇಲೆ ದ್ವೇಷ ಇದೆ. ಇದು ಸದನದಲ್ಲಿ ಅವರು ಮಾತನಾಡಿದ ಬಗೆಯಲ್ಲಿಯೇ ತಿಳಿದು ಬಂದಿದೆ. ಇದನ್ನು ನಾವು ಬಲವಾಗಿ ಖಂಡಿಸುವುದಾಗಿ ಹೇಳಿದರು.
ನಗರ ಹಾಗೂ ಜಿಲ್ಲೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಕೊಡುಗೆ ಏನು ಎಂಬುದು ಎಲ್ಲರಿಗೂ ಗೊತ್ತು. ರಾಜಕೀಯಕ್ಕೋಸ್ಕರ ಏನೋ ಉದ್ದೇಶ ಇಟ್ಟುಕೊಂಡು ಮಾತನಾಡಿದರೆ ನಾವೇನು ಮಾಡಲು ಆಗುತ್ತದೆ. ಇದಕ್ಕೆಲ್ಲ ಉತ್ತರ ಕೊಡುವ ಸಮಯವೂ ಇಲ್ಲ ಎಂದು ಪ್ರಭಾ ಅವರು ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ಸಂಬಂಧ ಅವರ ಹೆಸರು ಪ್ರಸ್ತಾಪಿಸದೆ ಕುಟುಕಿದರು.
ರಾಜಕೀಯ ಎಂದರೆ ಅವಕಾಶವಾದ. ಎಲ್ಲವನ್ನೂ ಅಧಿಕಾರದಲ್ಲಿ ಇದ್ದೇ ಮಾಡಲಾಗದು. ಅಧಿಕಾರ ಇಲ್ಲದೆಯೋ ಮಾಡಬಹುದು ಎಂಬುದನ್ನು ಈ ಹಿಂದೆಯೇ ಮಲ್ಲಿಕಾರ್ಜುನ್ ಅವರು ಸಾಧಿಸಿ ತೋರಿಸಿದ್ದಾರೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಮಾತನಾಡಿದರೆ ಅದಕ್ಕೆಲ್ಲಾ ಉತ್ತರ ಕೊಡಲು ಆಗದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಸವಂತಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪ, ಎಸ್ಸಿ ಮೋರ್ಚಾದ ಅಧ್ಯಕ್ಷ ವೀರಭದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮೇಯರ್ ಚಮನ್ ಸಾಬ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಹರಿಹರದ ನಂದಿಗಾವಿ ಶ್ರೀನಿವಾಸ್ ಹಾಗೂ ಇತರರು ಉಪಸ್ಥಿತರಿದ್ದರು.