ಬಸಾಪುರ : ಸಂಭ್ರಮದ ಮಹೇಶ್ವರ ಜಾತ್ರೆ-ಅನ್ನ, ಹಾಲು, ಬಾಳೇಹಣ್ಣು, ಬೋರೆ ಸಕ್ಕರೆ ಪ್ರಸಾದ ಸೇವಿಸಿದ ಸಾವಿರಾರು ಭಕ್ತರು

ಬಸಾಪುರ : ಸಂಭ್ರಮದ ಮಹೇಶ್ವರ ಜಾತ್ರೆ-ಅನ್ನ, ಹಾಲು, ಬಾಳೇಹಣ್ಣು, ಬೋರೆ ಸಕ್ಕರೆ ಪ್ರಸಾದ ಸೇವಿಸಿದ ಸಾವಿರಾರು ಭಕ್ತರು

ದಾವಣಗೆರೆ, ಡಿ.24- ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಮಂಗಳವಾರ ಮಹೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು.

ದಾವಣಗೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಅಕ್ಕಿ, ಹಾಲು, ಬಾಳೆ ಹಣ್ಣು ಗಳಿಂದ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿ ದರು. ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡು ಪ್ರಸಾದ ಬಡಿಸುವಲ್ಲಿ ಮಗ್ನರಾಗಿದ್ದರು.

ಎರಡು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಮೊದಲ ದಿವಸ ಅನ್ನ, ಹಾಲು, ಬಾಳೇಹಣ್ಣು, ಬೋರೆ ಸಕ್ಕರೆಯನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಯಿತು. ಬೆಳಿಗ್ಗೆಯಿಂದ ರಾತ್ರಿ 8 ಗಂಟೆವರೆಗೂ ಪ್ರಸಾದ ಕಾರ್ಯ ನೆರವೇರಿತು. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಪ್ರಥಮ ದಿನದ ಪ್ರಸಾದ ಸೇವಿಸಿದರು. ನಾಳೆ ಎರಡನೇ ದಿನವಾದ ಬುಧವಾರ ಅನ್ನ, ಸಾರು ಪ್ರಸಾದ ಇರಲಿದೆ. ಸಮೀಪದಲ್ಲಿಯೇ ಮಾಡಲಾಗುವ ಬಿಸಿ ಬಿಸಿ ಮಿರ್ಚಿಯನ್ನು ಕೊಂಡು ಭಕ್ತರು ಅನ್ನ,ಸಾರು ಪ್ರಸಾದ ಸೇವಿಸುತ್ತಾರೆ. ಅಂದಾಜು 70 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ಸಾಧ್ಯತೆ ಇದೆ.

ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಮಹೇಶ್ವರ ಸ್ವಾಮಿಯ ಗದ್ದುಗೆ ಸಮೀಪ ಇರುವ ಪುಷ್ಕರಣಿಯಲ್ಲಿ ಸ್ವಾಮೀಜಿಯೊಬ್ಬರು ಮುಳುಗಿ ಮೃತ್ತಿಕೆಯನ್ನು ತಂದರು. ಅದನ್ನು 2 ಬಾಳೆಹಣ್ಣಿನ ಚಿಪ್ಪಿನಲ್ಲಿಟ್ಟು ಪೂಜಿಸಲಾಯಿತು. ನಂತರ ಪುಷ್ಕರಿಣಿಯಲ್ಲಿ ವಿಸರ್ಜಿಸಲಾಯಿತು. ಬಾಳೆಹಣ್ಣಿನ ಒಂದು ಚಿಪ್ಪು ಮುಳುಗಿ, ಮತ್ತೊಂದು ತೇಲಿತು. ಇದರಿಂದಾಗಿ ಸಾಧಾರಣ ಫಲ ಎಂದು ಗ್ರಾಮಸ್ಥರು ಹೇಳಿದರು.

ಈ ಪುಷ್ಕಪಣೆಯಲ್ಲಿ ವಿಸರ್ಜಿಸಿದ ಎರಡೂ ಚಿಪ್ಪುಗಳು ಮುಳುಗಿದರೆ ಗಂಡಾಂತರ, ಎರಡೂ ತೇಲಿ ದರೆ ತುಂಬಾ ಒಳ್ಳೆಯದು. ಎಂದು ಒಂದು ತೇಲಿ ಒಂದು ಮುಳುಗಿದರೆ ಸಾಧಾರಣ ಫಲ ಎಂಬ ನಂಬಿಕೆ ಇದೆ.

ಜಾತ್ರೆಯ ಹಿಂದಿನ ದಿನ ಆನೆಕೊಂಡ ಬಸವೇಶ್ವರ ಸ್ವಾಮಿ ಹಾಗೂ ಬಸಾಪುರದ ಗುರು ಸಿದ್ದೇಶ್ವರ ಸ್ವಾಮಿ ಹಾಗೂ ಹಾಲಸ್ವಾಮಿ ದೇವರುಗಳನ್ನು ಪಲ್ಲಕ್ಕಿ ಮೂಲಕ ಮೆರವಣಿಗೆಯಲ್ಲಿ ಕರೆ ತಂದ ಮೇಲೆಯೇ ಪ್ರಸಾದ ತಯಾರಿಸಲು ಒಲೆ ಹಚ್ಚುವುದು ಇಲ್ಲಿನ ವಾಡಿಕೆಯಾಗಿದೆ. ಜಾತ್ರೆ ಮುಗಿದ ಈ ದೇವರು ಮೂಲ ಸ್ಥಾನಗಳಿಗೆ ತೆರಳುತ್ತವೆ.

error: Content is protected !!