ಕೆ ಬೇವಿನಹಳ್ಳಿ : ಇಂದು ಮಹೇಶ್ವರ ಜಾತ್ರೆ, ನಾಳೆ ರಥೋತ್ಸವ

ಕೆ ಬೇವಿನಹಳ್ಳಿ : ಇಂದು ಮಹೇಶ್ವರ ಜಾತ್ರೆ, ನಾಳೆ ರಥೋತ್ಸವ

ಮಲೇಬೆನ್ನೂರು ಸಮೀಪದ ಸುಕ್ಷೇತ್ರ ಕಾಶಿ ಬೇವಿನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆಯು ಇಂದು ಮತ್ತು ನಾಳೆ ಜರುಗಲಿದೆ.

ಇಂದು ಬೆಳಗಿನ ಜಾವ 5 ಗಂಟೆಗೆ ಬಾವಿಯಲ್ಲಿರುವ ಗಂಗಾ ದೇವಿಗೆ ಪೂಜೆ ಸಲ್ಲಿಸುವ ಮುಖಾಂತರ
ಶ್ರೀ ಮಹೇಶ್ವರ ಸ್ವಾಮಿಯನ್ನು ಕರೆದುಕೊಂಡು ಬಂದು ವಿಜೃಂಭಿಸುವುದು. ನಂತರ ಶ್ರೀ ಮಹೇಶ್ವರಸ್ವಾಮಿಗೆ ಅನ್ನ, ಹಾಲು, ಬಾಳೇಹಣ್ಣು, ಬೆಲ್ಲ, ತುಪ್ಪ ನೈವೇದ್ಯ ಮಾಡಿದ ಬಳಿಕ ಸ್ವಾಮಿಗಳು, ಭಕ್ತಾದಿಗಳು ಸೇರಿ ಮಹಾಪಂತಿ ನಡೆಸುವುದರೊಂದಿಗೆ ಸಾಯಂಕಾಲ 6 ಗಂಟೆವರೆಗೆ ಶ್ರೀ ಮಹೇಶ್ವರ ಸ್ವಾಮಿಯ ಮಹಾ ಪ್ರಸಾದವು ನಡೆಯುವುದು. ರಾತ್ರಿ 8.30ಕ್ಕೆ ಸ್ವಾಮಿಗೆ ಬಂದ ಕಾಣಿಕೆಯನ್ನು ಲೆಕ್ಕ ಮಾಡುವುದು ಹಾಗೂ ರಾತ್ರಿ 12 ಗಂಟೆಗೆ ಪುನಃ ಶ್ರೀ ಮಹೇಶ್ವರ ಸ್ವಾಮಿಗೆ ಅನ್ನ, ಹಾಲು, ಬಾಳೆಹಣ್ಣು, ಬೆಲ್ಲ, ತುಪ್ಪ ನೈವೇದ್ಯ ಮಾಡಿದ ನಂತರ ಶ್ರೀ ಮಹೇಶ್ವರ ಸ್ವಾಮಿಯನ್ನು ಪುನಃ ಬಾವಿಯಲ್ಲಿ ವಿಜೃಂಭಿಸಿ ಮಹಾಪಂತಿ ನಡೆಸಲಾಗುವುದು. ನಾಳೆ ಬುಧವಾರ ಬೆಳಗ್ಗೆ 8 ಗಂಟೆಯಿಂದ ಸ್ವಾಮಿಗೆ ಮನೆಗಳಿಂದ ಎಡೆ ಕೊಡುವುದು.

ಹಣ್ಣು, ಕಾಯಿ ಮಾಡಿಸುವುದು, ಸ್ವಾಮಿಗೆ ಬಾಯಿಬೀಗ, ಜವಳ ದಿಂಡು ಉರುಳು ಸೇವೆ ಮಾಡುವುದು ಇನ್ನೂ ಅನೇಕ ಕಾರ್ಯಕ್ರಮಗಳು ಜರುಗುವವು. ಇದೇ ದಿನ ಸಂಜೆ 4 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಬೀರಲಿಂಗೇಶ್ವರ ಸ್ವಾಮಿಯ ರಥೋತ್ಸವವು ಜರುಗಲಿದೆ.

ರಾತ್ರಿ 10.30 ಕ್ಕೆ ಗ್ರಾಮಸ್ಥರಿಂದ ಸಾಮಾಜಿಕ ನಾಟಕ ಪ್ರದರ್ಶನವಿರುತ್ತದೆ. ದಿನಾಂಕ 27ರ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಭಕ್ತಾದಿಗಳಿಂದ 108 ಕುಂಭಾಭಿಷೇಕ ನೆರವೇರುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ. 

error: Content is protected !!