ಪರಿಶಿಷ್ಟ ಅಲೆಮಾರಿ ಸಮುದಾಯಗಳ ಮುಖ್ಯ ವಾಹಿನಿಗೆ ನಿಗಮ ಪೂರಕ : ಅಧ್ಯಕ್ಷೆ ಜಿ. ಪಲ್ಲವಿ ಅಭಿಮತ

ಪರಿಶಿಷ್ಟ ಅಲೆಮಾರಿ ಸಮುದಾಯಗಳ ಮುಖ್ಯ ವಾಹಿನಿಗೆ ನಿಗಮ ಪೂರಕ : ಅಧ್ಯಕ್ಷೆ ಜಿ. ಪಲ್ಲವಿ ಅಭಿಮತ

ಜಗಳೂರು, ಡಿ. 23 – ಎಸ್‌ಸಿ, ಎಸ್‌ಟಿ ಅಲೆಮಾರಿ ಸಮುದಾಯಗಳ ಮುಖ್ಯವಾಹಿನಿಗೆ ಅಭಿವೃದ್ದಿ ನಿಗಮ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಪ. ಜಾತಿ ಮತ್ತು ಪ. ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ತಿಳಿಸಿದರು.

ಪಟ್ಟಣದ ಮಹಾತ್ಮ ಗಾಂಧಿ ಬಸ್ ನಿಲ್ದಾಣ, ಹುಚ್ಚವ್ವನಹಳ್ಳಿ ಕೊರಚರಹಟ್ಟಿ, ಅಶ್ವತ್ಥರೆಡ್ಡಿ ನಗರದ ಬಳಿ ಸಿಂಧೋಳ್ ಸಮುದಾಯಗಳ ಟೆಂಟ್‌ಗಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿ, ಸ್ಥಳೀಯ  ಸಮಸ್ಯೆಗಳ  ಅಹವಾಲು ಸ್ವೀಕರಿಸಿ ನಂತರ ಮಾತನಾಡಿದರು.

ಕಳೆದ ಒಂದೂವರೆ ವರ್ಷದ ಹಿಂದೆ ಸ್ಥಾಪಿತವಾದ ನಿಗಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಆಯ್ಕೆಗೊಳಿಸಿದ ನಂತರ  ರಾಜ್ಯದ 12 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಪರಿಶಿಷ್ಟ ಸಮುದಾಯಗಳ ಅರೆ ಅಲೆಮಾರಿ, ಅಲೆಮಾರಿ, ಸಮುದಾಯಗಳ ಸಾಮಾಜಿಕ, ಆರ್ಥಿಕ, ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸುತ್ತಾ, ವರದಿಯನ್ನು ಆಯಾ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಜಂಟಿ ಇಲಾಖೆಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥ  ನಡೆಸಲಾಗುವುದು.

ಸರ್ಕಾರದ ಆರ್ಥಿಕ ಯೋಜನೆಗಳನ್ನು ಪಾರದರ್ಶಕವಾಗಿ,  ಸಮರ್ಪಕವಾಗಿ ಅಲೆಮಾರಿ ಸಮುದಾಯಗಳಿಗೆ ತಲುಪಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಡುವ  ಹಾಗೂ ನಿವೇಶನ, ಸೂರಿಲ್ಲದವರಿಗೆ ಸ್ಥಿರ, ನೆಲೆ ಕಲ್ಪಿಸಿ ಟೆಂಟ್ ಮುಕ್ತ ರಾಜ್ಯವನ್ನಾಗಿಸಲು ಸಂಕಲ್ಪಗೈಯ್ಯಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಆಶಯದಂತೆ ಶಿಕ್ಷಣದಿಂದ ಮಾತ್ರ ಶೋಷಿತ ಅಲೆಮಾರಿ ಸಮುದಾಯಗಳು ಮುನ್ನೆಲೆಗೆ ಬರಲು ಸಾಧ್ಯ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಬಸ್ ನಿಲ್ದಾಣದಲ್ಲಿನ ಪ. ಜಾತಿ ಅಲೆಮಾರಿ ಕುಟುಂಬಗಳಿಗೆ ಭೇಟಿ : ಕೆರೆ ಅಂಗಳದಲ್ಲಿನ ಜೋಗಪ್ಪನಗುಡಿ ಸ್ಲಂ ನಿವಾಸಿಗಳು ಕಳೆದ ಎರಡು ವರ್ಷಗಳಿಂದ ಸೂರಿಲ್ಲದೆ ಬಸ್ ನಿಲ್ದಾಣದಲ್ಲಿ ಕೊಠಡಿ, ಸ್ನಾನ ಗೃಹಗಳಿಲ್ಲದೆ ಮಳಿಗೆಯಲ್ಲಿ ಮಹಿಳೆಯರು, ಮಕ್ಕಳು, ಪ್ರಾಣಿಗಳಂತೆ ವಾಸಿಸುತ್ತಾರೆ. ವಸತಿ ಯೋಜನೆ ಕಲ್ಪಿಸುವಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು,  ಸ್ಥಳೀಯ ಅಧಿಕಾರಿಗಳು ನಿವೇಶನ, ಮನೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸಂದರ್ಭದಲ್ಲಿ ಅಭಿವೃದ್ದಿ ನಿಗಮದ ಆಪ್ತ ಕಾರ್ಯದರ್ಶಿ ಆನಂದಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ತಾ.ಪಂ. ಇಓ ಕೆಂಚಪ್ಪ, ಸಮಾಜ  ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಪ. ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ‌ ನಿರ್ದೇಶಕ ಮಂಜುನಾಥ್, ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪ.ಪಂ. ಸದಸ್ಯ ಶಕೀಲ್ ಅಹಮ್ಮದ್, ಮುಖಂಡ ಲೋಕೇಶ್ ಬಿ.ಆರ್.ಐ. ಧನಂಜಯ್, ಹಿರೇಮಲ್ಲನ ಹೊಳೆ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ್, ಕೊರಚ ಸಮಾಜದ ಅಧ್ಯಕ್ಷ ರವಿಕುಮಾರ್, ಸಮುದಾಯದ ಮುಖಂಡ ಕುರಿಜಯ್ಯಣ್ಣ, ಮಾರಪ್ಪ, ವೆಂಕಟೇಶ್, ಚಂದ್ರು, ನಾರಾಯಣಪ್ಪ ಇದ್ದರು.

error: Content is protected !!