ದಾವಣಗೆರೆ, ಡಿ. 23- ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಪ್ರಥಮ ಚಿಕಿತ್ಸೆ ಅರಿವು ಅತ್ಯವಶ್ಯ ಎಂದು ಜಿಲ್ಲಾಧಿಕಾರಿ ಜಿ.ಎನ್. ಗಂಗಾಧರಸ್ವಾಮಿ ಹೇಳಿದರು.
ನಗರದ ಕೆೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಸ್ ಚಾಲನೆ ಸಂದರ್ಭದಲ್ಲಿ ಹಠಾತ್ ಹೃದಯಾಘಾತ, ಪಿಟ್ಸ್, ಅಪಘಾತ ಸೇರಿದಂತೆ ಇನ್ನಿತರೆ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಬಸ್ ಚಾಲಕರು ಮತ್ತು ನಿರ್ವಾಹಕರು ತಕ್ಷಣ ಮಾಡಬಹುದಾದ ಪ್ರಥಮ ಚಿಕಿತ್ಸೆ ಮತ್ತು ಆರೈಕೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಲ್ಲಿ ದಿನಕ್ಕೆ ಒಂದು ಜೀವ ಬಲಿಯಾಗುತ್ತಿದ್ದು, ಮರಣ ಪ್ರಮಾಣ ಕಡಿಮೆ ಮಾಡಲು ಚಾಲಕರ ಪಾತ್ರ ಬಹುಮುಖ್ಯ. ಚಾಲಕರು ಸಹ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡಿ, ಸುರಕ್ಷತೆ ಕಾಪಾಡಬೇಕೆಂದು ಸಲಹೆ ನೀಡಿದರು.
ಪ್ರಥಮ ಚಿಕಿತ್ಸೆ ಅರಿವಿನ ಜೊತೆಗೆ ಕಲಿಕೆ ಕೂಡ ಬಹಳ ಮುಖ್ಯ. ಎರಡು ದಿನಗಳ ತರಬೇತಿಯ ಸದುಪಯೋಗ ಪಡೆದುಕೊಂಡು ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗುವಂತೆ ಕರೆ ನೀಡಿದರು.
ಭಾರತೀಯ ರೆಡ್‌ಕ್ರಾಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಚಿಂತನೆಯಿದ್ದು, ಸದೃಢ, ಆರೋಗ್ಯವಂತ ಕೆಎಸ್ಆರ್‌ಟಿಸಿ ಸಿಬ್ಬಂದಿ ರಕ್ತದಾನ ಮಾಡುವಂತೆ ಮನವಿ ಮಾಡಿದರು.
ರಾಷ್ಟ್ರೀಯ ಮಟ್ಟದ ಪ್ರಥಮ ಚಿಕಿತ್ಸೆ ತರಬೇತುದಾರ ಡಾ. ವಿ.ಎಲ್. ಎಸ್. ಕುಮಾರ್ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಪ್ರಥಮ ಚಿಕಿತ್ಸೆ ತರಬೇತಿ ಅಗತ್ಯವಾಗಿದ್ದು, ಅಪಘಾತ ಮತ್ತು ಅವಘಡಗಳ ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ಈ ತರಬೇತಿ ತುಂಬಾ ಸಹಕಾರಿಯಾಗಲಿದೆ ಎಂದರು.
ತುರ್ತು ಪರಿಸ್ಥಿತಿಗಳ ನಿರ್ವಹಣೆ ಮತ್ತು ಜೀವ ಉಳಿಸುವ ಕೌಶಲ್ಯವನ್ನು ಕಲಿಯುವುದು ಅವಶ್ಯ ಎಂದು ಹೇಳಿದ ಅವರು, ಪ್ರಥಮ ಚಿಕಿತ್ಸೆಯ ವಿಧಾನಗಳು ಮತ್ತು ಅವಘಡಗಳು, ಅಪಘಾತಗಳಾದ ವೇಳೆ ಅನುಸರಿಸಬೇಕಾದ ಚಿಕಿತ್ಸಾ ಕ್ರಮಗಳ ಕುರಿತು ತರಬೇತಿ ನೀಡಿದರು.
ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ಧೇಶ್ ಎನ್. ಹೆಬ್ಬಾಳ್ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಸಭಾಪತಿ ಡಾ. ಎ.ಎಂ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ ಜ್ಯೋತಿ, ಕೆಎಸ್ ಆರ್‌ಟಿಸಿ ದಾವಣಗೆರೆ ವಿಭಾಗದ ವಿಭಾಗೀಯ ಯಾಂತ್ರಿಕ ಅಭಿಯಂತರ ಕೆ. ವೆಂಕಟೇಶ್, ವಿಭಾಗೀಯ ಸಂಚಲನಾಧಿಕಾರಿ ಡಿ. ಫಕೃದ್ದೀನ್, ದಾವಣಗೆರೆ ಘಟಕ-1 ರ ವ್ಯವಸ್ಥಾಪಕ ಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್ ಬಗರೆ, ಟಿ. ಕರಿಬಸಪ್ಪ, ಎ.ಜೆ.ರವಿಕುಮಾರ್, ಸಂಯೋಜಕ ಎನ್.ಜಿ ಶಿವಕುಮಾರ್, ತರಬೇತುದಾರ ಎ. ದೇವರಾಜ್ ಸೇರಿದಂತೆ ಕೆೆಎಸ್‌ಆರ್‌ಟಿಸಿ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.