ದಾವಣಗೆರೆಯಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್

ದಾವಣಗೆರೆಯಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್
  • ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ

ದಾವಣಗೆರೆ, ಡಿ. 23 – ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಒಮ್ಮೆ ಖರೀದಿಸಿದ ನಂತರ ಖರ್ಚು ಕಡಿಮೆ ಹಾಗೂ  ಪ್ರತಿ ವರ್ಷ ತೆರಿಗೆ ಕಟ್ಟುವ ಪ್ರಮೇಯ  ಇರುವುದಿಲ್ಲ ಹೀಗಾಗಿ ಎಲೆಕ್ಟ್ರಿಕ್‌ ವಾಹನಗಳತ್ತ ಜನ ವಾಲುತ್ತಿದ್ದಾರೆ.

ವಾಹನಗಳ ಸಂಖ್ಯೆ ಹೆಚ್ಚಾದಂತೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳ ಅಗತ್ಯತೆಯೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆ ಕೆಇಬಿ ವೃತ್ತದ ಬಳಿ ಬೆಸ್ಕಾಂ ವತಿಯಿಂದ ನೂತನ ಚಾರ್ಚಿಂಗ್ ಪಾಯಿಂಟ್ ಸ್ಥಾಪಿಸಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಸಿದ್ಧವಾಗಲಿದೆ.

ರಾಜ್ಯದ 31 ಜಿಲ್ಲೆ ಮತ್ತು 240 ತಾಲೂಕು ಕೇಂದ್ರಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ 1,190 ಎಲೆಕ್ಟ್ರಿಕ್‌ ಚಾರ್ಜಿಂಗ್‌ ಸೆಂಟರ್‌ ಸ್ಥಾಪನೆಗೆ ಸರಕಾರಿ ಸ್ಥಳ ಗುರುತಿಸುವ ಪ್ರಕ್ರಿಯೆ ಅಂತಿಮವಾಗಿದ್ದು, ದಾವಣಗೆರೆ ಜಿಲ್ಲೆಯಲ್ಲಿ 21 ಜಾಗಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಮಿನಿ ವಿಧಾನ ಸೌಧ, ಸರಕಾರಿ ಆಸ್ಪತ್ರೆ, ಬಸ್‌ ನಿಲ್ದಾಣ, ಸರಕಾರಿ ಕಾಲೇಜು ಸಹಿತ ಅನ್ಯ ಸರಕಾರಿ ಕಟ್ಟಡಗಳನ್ನು ಗುರುತಿಸಲಾಗಿದೆ. 

ಖಾಸಗಿಯಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಎಲೆಕ್ಟ್ರಿಕ್ 13 ಚಾರ್ಚಿಂಗ್ ಪಾಯಿಂಟ್‌ಗಳು ಸೇವೆಗೆ ಸಿದ್ಧವಾಗುತ್ತಿವೆಯಾದರೂ, ಇನ್ನೂ ವಿದ್ಯುತ್ ಇಲಾಖೆಗೆ ನೋಂದಣಿ ಮಾಡಿಕೊಂಡಿಲ್ಲ.

ಎಲೆಕ್ಟ್ರಿಕ್‌ ವಾಹನದ ಚಾರ್ಜಿಂಗ್‌ಗೆ ಒಂದು ಯುನಿಟ್‌ಗೆ ಸರಾಸರಿ 8 ರೂ. ಖರ್ಚಾಗುತ್ತದೆ. 15 ಯುನಿಟ್ ಇದ್ದರೆ, 100 ಕಿ.ಮೀ.ವರೆಗೆ ವಾಹನ ಓಡುತ್ತದೆ.  120 ಖರ್ಚು ಮಾಡಿದರೆ, 100 ಕಿ.ಮೀ. ಓಡಿಸಬಹುದು. ಅಂದರೆ, ಒಂದು ಕಿ.ಮೀ.ಗೆ ಸರಾಸರಿ  1.20 ಪೈಸೆ ಮಾತ್ರ ವೆಚ್ಚವಾಗುತ್ತದೆ. ಪೆಟ್ರೋಲ್‌, ಡೀಸೆಲ್‌ಗಿಂತ ಇದು ಮಿತವ್ಯಯಕಾರಿ.

ಸದ್ಯ ಬೇರೆ ನಗರಗಳಲ್ಲಿ ಬೆಸ್ಕಾಂ ದರ ಪ್ರತಿ ಯುನಿಟ್‌ ವೇಗದ ಚಾರ್ಜಿಂಗ್‌  7.38 ರೂ., ನೇರ ಚಾರ್ಜಿಂಗ್‌ (ಡಿಸಿ),  6.71 ಮತ್ತು ಸಾಮಾನ್ಯ ಚಾರ್ಜಿಂಗ್‌ (ಎಸಿ) 6.57ರೂ.  ನಿಗದಿಗೊಳಿಸಿದೆ. ಆದರೆ ದಾವಣಗೆರೆಯಲ್ಲಿ ನಿರ್ಮಾಣವಾಗುತ್ತಿರುವ ಚಾರ್ಚಿಂಗ್ ಸ್ಟೇಷನ್‌ ದರದ ಬಗ್ಗೆ ಅಧಿಕಾರಿಗಳ ಬಳಿ ಮಾಹಿ ಇಲ್ಲ.

ಅಂದ ಹಾಗೆ ರಾಜ್ಯದಲ್ಲಿರುವ 3.5 ಕೋಟಿ ವಾಹನಗಳ ಪೈಕಿ ಶೇ 10ರಷ್ಟು ವಾಹನಗಳು ಎಲೆಕ್ಟ್ರಿಕ್‌ ಆಗಿವೆ. ಪ್ರತಿವರ್ಷ 12 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು, 2.75 ಲಕ್ಷಕ್ಕೂ ಅಧಿಕ ನಾಲ್ಕು ಚಕ್ರ ವಾಹನಗಳು ನೋಂದಣಿಯಾಗುತ್ತಿವೆ. ಕೆಲವೇ ವರ್ಷಗಳಲ್ಲಿ ಒಟ್ಟು ವಾಹನಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆಯೇ ಅಧಿಕವಾಗಲಿವೆ.

ಕರ್ನಾಟಕ ಸರ್ಕಾರ  ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು  ಫೆಬ್ರವರಿಯಲ್ಲಿ ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಸುಮಾರು 2,500 ಹೊಸ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ ಸ್ಥಾಪನೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. 

ಸದ್ಯದ ಮಾಹಿತಿ ಪ್ರಕಾರ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಬ್ಯುರೋ ಆಫ್ ಎನರ್ಜಿ ಎಫೆಷಿಯನ್ಸಿ ಬಿಡುಗಡೆ ಮಾಡಿರುವ ವರದಿ ಪ್ರಕಾರ 5,765 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳು ಕರ್ನಾಟಕದಲ್ಲಿವೆ. ಈ ಪೈಕಿ ಬೆಂಗಳೂರನಲ್ಲಿ ಅಧಿಕ ಪಾಯಿಂಟ್‌ಗಳಿವೆ.

error: Content is protected !!