ಸಂಸ್ಕಾರ ಕೊಡುವ ಶಾಲೆಯೇ ಜ್ಞಾನ ಮಂದಿರ

ಸಂಸ್ಕಾರ ಕೊಡುವ ಶಾಲೆಯೇ ಜ್ಞಾನ ಮಂದಿರ

ಸೋಮೇಶ್ವರೋತ್ಸವದಲ್ಲಿ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಮತ

ದಾವಣಗೆರೆ, ಜ. 20- ಅಂಕದ ಜೊತೆಗೆ ಮಕ್ಕಳಿಗೆ ಬೇಕಾದ ಸಂಸ್ಕೃತಿ, ಸಂಸ್ಕಾರ ಕೊಟ್ಟಾಗ ಮಾತ್ರ ಶಾಲೆಗಳು ಜ್ಞಾನ ಮಂದಿರಗಳಾಗಲು ಸಾಧ್ಯವಿದೆ ಎಂದು ತುಮಕೂರು ಜಿಲ್ಲೆಯ ಸಿದ್ಧರಬೆಟ್ಟ ಶ್ರೀ ಮದ್ರಂಭಾಪುರಿ ಖಾಸಾ ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಪ್ರತಿಪಾದಿಸಿದರು.

ಇಲ್ಲಿನ ಶ್ರೀ ಸೋಮೇಶ್ವರ ವಿದ್ಯಾಲಯದಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ `ಸೋಮೇಶ್ವರೋ ತ್ಸವ-2023′ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಾಲೆಗಳು ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುತ್ತವೆ. ಆದರೆ   ಸಂಸ್ಕೃತಿ, ಸಂಸ್ಕಾರ ನೀಡುವ ಮೂಲಕ ಪೋಷಕರು ಹಾಗೂ ಸಮಾಜದ ದೃಷ್ಟಿಯಲ್ಲಿ ಶಾಲೆಗಳೂ ಉತ್ತೀರ್ಣವಾಗಬೇಕಿದೆ ಎಂದು ಹೇಳಿದರು.

ನೈತಿಕ ಶಿಕ್ಷಣ ಮಕ್ಕಳಿಗೆ ದೊರೆಯದ ಪರಿಣಾಮ ಇತ್ತೀಚಿನ ದಿನಗಳಲ್ಲಿ ಪರಿಸರಕ್ಕೆ, ಸಂಸ್ಕೃತಿಗೆ ಹಾಗೂ ಹೆತ್ತವರಿಗೆ  ವಿದ್ಯಾವಂತರಿಂದಲೇ ಹೆಚ್ಚು ತೊಂದರೆ ಯಾಗುತ್ತಿದೆ.  ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಮನೆಗಳಲ್ಲಿ ಮೊದಲು ಸುಸಂಸ್ಕೃತ ವಾತಾವರಣ ನಿರ್ಮಾಣವಾಗಬೇಕು ಎಂದರು.

ಮಕ್ಕಳು ಹೇಳಿದ್ದನ್ನು ಕೇಳುವುದಕ್ಕಿಂತ ಪೋಷಕರು ಮಾಡಿದ್ದನ್ನು ಅನುಸರಿಸುವುದೇ ಹೆಚ್ಚು ಎಂಬುದನ್ನು ಅರಿಯಬೇಕು. ಈ ನಿಟ್ಟಿನಲ್ಲಿ ನೀವು ಮೊದಲು ಸಂಸ್ಕಾರವಂತರಾಗಿರಬೇಕು. ಶಿಸ್ತು, ಸಂಸ್ಕೃತಿಯನ್ನೊಳಗೊಂಡ ಪರಿಸರವನ್ನು ಮನೆಗಳಲ್ಲಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಪೋಷಕರು ಮಕ್ಕಳ ಶಿಸ್ತಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ನಿಮ್ಮ ಕಷ್ಟಗಳು ಹಾಗೂ ಪರಿಶ್ರಮ ಮಕ್ಕಳಿಗೆ ತಿಳಿದಿರಲಿ. ಅಗತ್ಯವಿಲ್ಲದ, ಅಗತ್ಯಕ್ಕಿಂತ ಹೆಚ್ಚಾದ ಬೆಲೆಬಾಳುವ ವಸ್ತುಗಳನ್ನು ಮಕ್ಕಳಿಗೆ ಕೊಡಿಸಿ ಖುಷಿ ಪಡುವ ಬದಲು, ಕ್ರೀಡೆ, ಸಂಗೀತ ಮೊದಲಾದ ಕ್ಷೇತ್ರಗಳಲ್ಲಿ ಮಕ್ಕಳನ್ನು ತೊಡಗಿಸಬೇಕು. ಇದರಿಂದ ಮಕ್ಕಳಲ್ಲೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

ಇಂದು ವಿದೇಶಿಯರು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನಾವು ನಮ್ಮ ಸಂಸ್ಕೃತಿಯ ಮಹತ್ವವನ್ನು ಮರೆಯಬಾರದು. ಹೆತ್ತವರಿಗೆ, ಹಿರಿಯರಿಗೆ ಗೌರವಿಸುವುದನ್ನು, ಇತರರಿಗೆ ಸಹಾಯ ಮಾಡುವುದನ್ನು ಮಕ್ಕಳಿಗೆ ಹೇಳಿಕೊಡಬೇಕಿದೆ.  ಇಂದು ಎಲ್ಲಾ ಕ್ಷೇತ್ರಗಳಲ್ಲೂ ವಿಫುಲವಾದ ಅವಕಾಶಗಳಿದ್ದು, ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇರುತ್ತದೋ ಆ ವಿಷಯದ ಬಗ್ಗೆ ಪೋಷಕರು ಹಾಗೂ ಶಾಲಾ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ ಮಾತನಾಡಿ, ದೇಶ ಹಾಗೂ ಸಮಾಜಕ್ಕೆ ಹೋರಾಟ ನಡೆಸಿದವರನ್ನು ಮಾತ್ರ ಸಮಾಜ ನೆನಪಿಟ್ಟುಕೊಳ್ಳುತ್ತದೆ. ಹೆತ್ತವರು ತಮ್ಮ ಮಕ್ಕಳಲ್ಲಿ ಸ್ವಾರ್ಥ ಮನೋಭಾವದ ಬದಲು ತ್ಯಾಗ, ಸೇವೆ, ಸಮಾಜಕ್ಕೆ ಸ್ಪಂದಿಸುವ ಗುಣಗಳನ್ನು ಬೆಳೆಸುವುದು ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆ ಎಂದರು.

ಸ್ವಾಮಿ ವಿವೇಕಾನಂದರು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕನಿಷ್ಟ ದಿನಕ್ಕೆ ಅರ್ಧ ಗಂಟೆ ವಿವೇಕಾನಂದ ಅವರ ಪುಸ್ತಕಗಳನ್ನು ಓದಿಸುವಂತೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಧರ್ಮಸ್ಥಳದ ಅನ್ನ ದಾಸೋಹ ಭವನದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಶಿಕ್ಷಣ ವ್ಯಾಪಾರೀಕರಣಗೊಂಡು ಮೌಲ್ಯಗಳು ಮರೆಯಾಗುತ್ತಿರುವ ದಿನಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸೋಮೇಶ್ವರ ಶಾಲೆ ದೇಶಕ್ಕೆ ಮಾದರಿಯಾಗಿದೆ ಎಂದು ಶ್ಲ್ಯಾಘಿಸಿದರು.

ಮೀಸಲಾತಿ, ಅವಕಾಶಗಳ ಕೊರತೆ ಮುಂತಾದ ಕಾರಣಗಳಿಂದ ಹಣಕ್ಕಾಗಿ ವಿದೇಶಕ್ಕೆ ತೆರಳುವವರು ಹೆಚ್ಚಾಗಿ ಇಂದು ಪ್ರತಿಭಾ ಪಲಾಯನವಾಗುತ್ತಿದೆ.  ಜ್ಞಾನ ಪಡೆಯುವ ಜೊತೆಗೆ ಮಕ್ಕಳು ತಮ್ಮ ಮನೆ, ಗ್ರಾಮ, ಸಮಾಜಕ್ಕೆ ಏನು ಸಹಾಯ ಮಾಡಬೇಕೆಂಬ ಚಿಂತನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದು ಹೇಳಿದರು.

ಅವಕಾಶಗಳು ಮತ್ತೆ ಮತ್ತೆ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿಯೇ ಗುರಿಗಳು ಸ್ಪಷ್ಟವಾಗಿರಬೇಕು. ದುರಭ್ಯಾಸಗಳಿಂದ ದೂರವಿದ್ದು, ದೇಶ ಭಕ್ತಿ ಬೆಳೆಸಿಕೊಳ್ಳಿ. ಏಕಾಗ್ರತೆಯಿಂದ ಗುರಿ ಸಾಧಿಸಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ ಏಕಬೋಟೆ ಹಾಗೂ ವೈದ್ಯರುಗಳಾದ ಡಾ.ವಿದ್ಯಾ ವಿ., ಡಾ.ಸಿದ್ದೇಶ್ವರನ್ ವಿ. ಅವರುಗಳಿಗೆ `ಸೋಮೇಶ್ವರ ಸಿರಿ’ ಗೌರವ ಪ್ರದಾನ ಮಾಡಲಾಯಿತು.  ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕು.ನಿಧಿ ಎಸ್.ನಾಯರ್ ಅವರಿಗೆ ಸಾಧನ ಸಿರಿ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಶ್ರೀ ಸೋಮೇಶ್ವರ  ಸಂಸ್ಥೆಯ ಸಂಸ್ಥಾಪಕ ಕೆ.ಎಂ. ಸುರೇಶ್, ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ಪ್ರಾಂಶುಪಾಲರಾದ ಪ್ರಭಾವತಿ, ವೀಣಾ, ಪ್ರೌಢಶಾಲೆಯ ಮುಖ್ಯಸ್ಥ ಪ್ರಕಾಶ್, ಹರೀಶ್ ಬಾಬು, ಪತ್ರೇಶ್ ಉಪಸ್ಥಿತರಿದ್ದರು. ಕು.ವರ್ಷ ಬಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯತ್ರಿ ಸ್ವಾಗತಿಸಿದರು. ಶಿಕ್ಷಕಿ ತೇಜಸ್ವಿನಿ ಹಾಗೂ ಕು.ವೈ.ಎಂ. ಸೃಜನ ಕಾರ್ಯಕ್ರಮ ನಿರೂಪಿಸಿದರು.

error: Content is protected !!