ಹಳೆ ಊರಲ್ಲಿನ ಹಳೆಯ ಕಾಲದ ದೀಪಾವಳಿ ಸ್ವಾರಸ್ಯಗಳು…

ಹಳೆ ಊರಲ್ಲಿನ ಹಳೆಯ ಕಾಲದ ದೀಪಾವಳಿ ಸ್ವಾರಸ್ಯಗಳು…

ದಶಕಗಳ ಹಿಂದೆ ದಾವಣಗೆರೆಯಲ್ಲೊಬ್ಬ ತತ್ವಪದ, ದಾಸರ ಪದಗಳ ಗಾಯಕ ಬಹುಷಃ  ಆತನ ಹೆಸರು ವೆಂಕಟಪ್ಪ ಎಂದಿರಬೇಕು,  ಎಲ್ಲರೂ ಅವನನ್ನು `ತಂಬೂರಿ’ ಎಂದೇ  ಕರೆಯುತ್ತಿದ್ದರು.  ಕಾರಣ ಮಾರುದ್ದದ ಗಳಕ್ಕೆ ಒಣಗಿದ ಸಿಹಿಗುಂಬಳ ಬುರುಡೆ ಸಿಕ್ಕಿಸಿ  ಅದಕ್ಕೊಂದು ಏಕತಂತಿ ಕಟ್ಟಿ  ತೋರು ಬೆರಳಿಂದ ಅದನ್ನು ಮೀಟಿ ಡಿಂವ್ ಡಿಂವ್  ನಾದ ಮಾಡುತ್ತಾ ಎತ್ತಿ ಕಟ್ಟಿದ ಕಚ್ಚೆ ಪಂಚೆ, ಮಾಸಲು ಅಂಗಿ, ತಲೆ ಮೇಲೊಂದು ಪೇಟ ಸುತ್ತಿಕೊಂಡು ಅಂಗಡಿಗಳ  ಮುಂದೆ  ಹೋಗಿ ಪದ ಹೇಳುತ್ತಾ ಕಾಸು ಕೇಳುವುದು ಆತನ ಕಾಯಕ.  

ಅಂದು ದೀಪಾವಳಿ. ಹಳೇ ನಗರದ ಚೌಕಿಪೇಟೆಯ ಶ್ರೀಮಂತರ ಅಂಗಡಿಗಳಲ್ಲೂ ಪೂಜೆ ನಡೆದಿತ್ತು. ವೆಂಕಟಪ್ಪ ಹಾಡುತ್ತಾ ಅಂಗಡಿಗಳ ಮುಂದೆ ಬಂದ. `ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲಗೊಂದಿದ್ದರೆ ಸಾಕೋ…’ ಹಾಡನ್ನು ಒಂದು ಅಂಗಡಿಯ ಮುಂದೆ ಹಾಡಿದ,
`ಏ ತಂಬೂರಿ, ಅದು ಬ್ಯಾಡ, ಭಾಗ್ಯದ ಲಕ್ಷ್ಮಿ ಬಾರಮ್ಮ ಪದ ಹಾಡು’ ಎಂದರು ಆ ದೊಡ್ಡ ಅಂಗಡಿಯವರು. ವೆಂಕಟಪ್ಪ ಹಾಡಲಿಲ್ಲ. ಮುಂದಿನ ಅಂಗಡಿ  ಮುಂದೆ  `ಸತ್ಯವಂತರಿಗಿದು ಕಾಲವಲ್ಲ ದುಷ್ಟ ಜನರಿಗೆ ಸುಭೀಕ್ಷಕಾಲ’ ಪದವನ್ನು ಆರಂಭಿಸಿದ. ಅವರೂ `ಭಾಗ್ಯದ ಲಕ್ಷ್ಮಿ ಬಾರಮ್ಮ  ಹಾಡೋ ವೆಂಕಟಪ್ಪ’ ಎಂದರು. ವೆಂಕಟಪ್ಪ ಹಾಡಲಿಲ್ಲ. ಮತ್ತೊಂದು ಅಂಗಡಿ ಮುಂದೆ `ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿ ಬಿಡು ನಾಲಿಗೆ’ ಹಾಡು ಹೇಳುತ್ತಿದ್ದಂತೆಯೇ ಅಂಗಡಿಯವರು `ಲೇ ವೆಂಕಾ ಎಂಥಾ ಹಾಡು ಹಾಡ್ತೀಯ, ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡೋ ಮಾರಾಯಾ’ ಎಂದರು. ಶ್ರೀಮಂತರ ಮಾತಿಗೆ ಸೊಪ್ಪು ಹಾಕದ ವೆಂಕಟಪ್ಪ, ಚೌಕಿಪೇಟೆ ಹಾಗೂ ಅಡಿವೆಯ್ಯನ ಗಲ್ಲಿ ಮೂಲೆಯ ಮುರಿಗೆಪ್ಪನವರ ಕರಿ ಹಂಚಿನ ಚಿಕ್ಕ ಕಟ್ಟಡದಲ್ಲಿ ಸಣ್ಣ ಕಿರಾಣಿ ಅಂಗಡಿ ಮಾಡಿ ಕೊಂಡಿದ್ದ ದೇವಾಂಗದ ಫಕ್ಕೀರಪ್ಪನ ಅಂಗಡಿ ಮುಂದೆ ಬಂದು `ಭಾಗ್ಯದ ಲಕ್ಷ್ಮಿ ಬಾರಮ್ಮ…’ ಹಾಡನ್ನು ಹಾಡಲಾರಂಭಿಸಿದ. ಆ ಕಡೆ ಅಂಗಡಿಯವರು  ಕೋಪದಿಂದ  ಬಂದು
`ಏ ತಂಬೂರಿ, ಲಕ್ಷ್ಮಿ ಹಾಡು ಹಾಡಪ್ಪ ಅಂತ ನಾವು ಹೇಳಿದರೂ ಹಾಡದಲೇ ಧಿಮಾಕ್ ಮಾಡಕೊಂಡ್  ಬಂದಿ, ಇಲ್ ಬಂದು ಲಕ್ಷ್ಮಿ ಹಾಡ್ ಹಾಡ್ತೀಯಾ ? ಎಂದು ಏರು ಧ್ವನಿಯಲ್ಲಿ ಗದರಿಸುತ್ತಾ ಕೇಳಿದರು. ಅವರ ಕಡೆ ತಿರುಗಿಯೂ ನೋಡದೆ ತಂಬೂರಿ ವೆಂಕಟಪ್ಪ ಮೆಲು ಧ್ವನಿಯಲ್ಲಿ ಉತ್ತರ ಕೊಟ್ಟ `ನಿಮ್ಗಳ ತಾವ ಲಕ್ಷ್ಮಿ ಕಾಲ್ ಮುರ್ಕೊಂಡು ಕುಂತಾಳೆ, ಈವಯ್ಯ ಹೊಸದಾಗಿ ಸಣ್ಣ ಅಂಗಡಿ ಮಾಡ್ಯಾನೆ, ಇವನಿಗೆ ಬರಬೇಕು ಲಕ್ಷ್ಮಿ’ ಎಂದ.  ಆಕ್ಷೇಪಿಸಿದವರು ಮರು ಮಾತನಾಡಲಿಲ್ಲ.


ಹೆಚ್.ಬಿ.ಮಂಜುನಾಥ್
ಹಿರಿಯ ಪತ್ರಕರ್ತ

error: Content is protected !!