ದಾವಣಗೆರೆ, ಅ.24- ಸಮಾಜದಲ್ಲಿ ಬಾಳುವ ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಕೊಳ್ಳಬೇಕು. ಇದರಿಂದ ಬದುಕಿಗೆ ಒಂದು ಅರ್ಥ ಬರುತ್ತದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಹೆಚ್.ಕೆ.ಲಿಂಗರಾಜು ಹೇಳಿದರು.
ನಗರದ ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶರಣೆ ಹೆಚ್.ಎಂ ಮಂದಾಕಿನಿ ಸ್ವಾಮಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೌಲ್ಯ ಇಲ್ಲದವನ ಬಾಳು ಹಾಳು. ಮೌಲ್ಯಗಳನ್ನು ಶಿಕ್ಷಣದ ಆರಂಭಿಕ ಹಂತದಿಂದ ಪಠ್ಯಕ್ರಮದಲ್ಲಿ ಅಳವಡಿಸಿ, ಕಲಿಸುವುದರಿಂದ ಮಕ್ಕಳು ಮೌಲ್ಯ ಶಿಕ್ಷಣ ಪಡೆದಂತಾಗುತ್ತದೆ. ಅಲ್ಲದೇ ನಾಳಿನ ಸತ್ಪ್ರಜೆಗಳಾಗಿ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಪ್ರಾಂಶುಪಾಲ ಡಾ.ಜಿ.ಬಿ.ಬೋರಯ್ಯ ಕಾರ್ಯಕ್ರಮ ಉದ್ಘಾಟಿಸಿ, ಮಾನವೀಯ ಮೌಲ್ಯಗಳು ಇಲ್ಲದ ಶಿಕ್ಷಣ, ಶಿಕ್ಷಣವೇ ಅಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಮಾತನಾಡಿ, ದತ್ತಿ ಕಾರ್ಯಕ್ರಮದ ವಿಶೇಷ ಉಪನ್ಯಾಸ ಸಂಚಿಕೆಯಲ್ಲಿ 28 ಕಾರ್ಯ ಕ್ರಮಗಳು ಮುಗಿದಿದ್ದು, ಶರಣ ಸಂಸ್ಕೃತಿಯನ್ನು ಶಾಲಾ-ಕಾಲೇಜುಗಳ ಮಕ್ಕಳಿಗೆ ತಲುಪಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಇದರ ಸದುಪ ಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಗಾಯತ್ರಿ ವಸ್ತ್ರದ್, ಎ.ಆರ್.ಜಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಜೆ.ಕೆ. ಮಲ್ಲಿಕಾರ್ಜುನಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಭರಮಣ್ಣ ಮೈಸೂರು, ಖಜಾಂಚಿ ಆರ್.ಸಿದ್ದೇಶ, ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ, ಕುಸುಮಾ ಲೋಕೇಶ್ ಹಾಗೂ ಪ್ರೊ. ಅನಿತಾಕುಮಾರಿ, ಪ್ರೊ ಆನಂದ, ಪ್ರೊ ಪರಶುರಾಮ, ಡಾ. ಚಮನ್ಸಾಬ್, ಕವಿತಾ ಪಾಟೀಲ, ರೇಖಾ, ಕಛೇರಿ ಅಧೀಕ್ಷಕ ಕರಿಬಸಪ್ಪ ಉಪಸ್ಥಿತರಿದ್ದರು. ರಮೇಶ್ ಪೂಜಾರ್ ಸ್ವಾಗತಿಸಿದರು. ಪ್ರೊ ರಶ್ಮಿ ವಂದಿಸಿದರು. ಡಾ. ಹೆಚ್.ಆರ್. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.