ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಕಳಂಕ : ಪ್ರಜಾಧ್ವನಿ ಸಮಾವೇಶದಲ್ಲಿ ಕಾಂಗ್ರೆಸ್ ಆಕ್ರೋಶ
ದಾವಣಗೆರೆ, ಜ. 19 – ಬಿಜೆಪಿ ಶಾಸಕರು, ಸಚಿವರು ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ. ಇವರ ಪಾಪದ ಕೊಡ ತುಂಬಿದ್ದು, ಚುನಾವಣೆಯಲ್ಲಿ ಮನೆಗೆ ಹೋಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ‘ಪ್ರಜಾಧ್ವನಿ’ ಸಮಾವೇಶದಲ್ಲಿ ಕಿಡಿ ಕಾರಿದ್ದಾರೆ.
ಬೆಳಗಾವಿಯಿಂದ ಆರಂಭವಾಗಿರುವ ಪ್ರಜಾಧ್ವನಿ ಬಸ್ ಯಾತ್ರೆ ನಗರಕ್ಕೆ ತಲುಪಿದ ಸಂದರ್ಭದಲ್ಲಿ ಹೈಸ್ಕೂಲ್ ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ನಾಯಕರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಬಿಜೆಪಿಯ ಶಾಸಕರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ್ದಾರೆ. ಒಬ್ಬ ಸಚಿವರು ಲಂಚ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ದರೆ, ಇನ್ನೊಬ್ಬರು ಮಂಚ ಪ್ರಕರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ಇದೆಲ್ಲವೂ ಬಿಜೆಪಿಯ ‘ಪಾಪದ ಪುರಾಣ’ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಹಗರಣ ಮಾಡಿದವರು ಬಿಜೆಪಿಯ ಮುತ್ತು ರತ್ನಗಳಿದ್ದಂತೆ. ಇವರ ಹಗರಣಗಳನ್ನು ಜನರಿಗೆ ತಿಳಿಸುವ ಸಲುವಾಗಿ ‘ಪಾಪದ ಪುರಾಣ’ ಎಂಬ ಪುಸ್ತಕವನ್ನು ಪ್ರಕಟಿಸಿದ್ದೇನೆ. ಇದನ್ನು ಪಕ್ಷದ ಕಾರ್ಯಕರ್ತರು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂದವರು ಕರೆ ನೀಡಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದಂತಹ ಕೆಟ್ಟ, ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ಇವರ ಪಾಪದ ಕೊಡ ತುಂಬಿದೆ. ಮೂರು ತಿಂಗಳು ಮಾತ್ರ ಇವರ ಅಧಿಕಾರ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದಾವಣಗೆರೆಯಲ್ಲಿ ನೀರು, ರಸ್ತೆ, ರಿಂಗ್ ರೋಡ್ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ನಾನು ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕೈಗೊಂಡ ಕಾಮಗಾರಿಗಳನ್ನೇ ಬಿಜೆಪಿಯವರು
ನಾವು ಮಾಡಿದ್ದು ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡು.
– ಶಾಮನೂರು ಶಿವಶಂಕರಪ್ಪ, ಶಾಸಕ
ಬಿಜೆಪಿಯ ಅಕ್ರಮ ಪುರಾಣಜನರಿಗೆ ತಿಳಿಸಲು ಬೆಳಗಾವಿಯಿಂದ ಪ್ರಜಾಧ್ವನಿ ಯಾತ್ರೆ ಆರಂಭವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗಳನ್ನು ಜನರಿಗೆ ತಲುಪಿಸಲಾಗಿತ್ತು. ಬಿಜೆಪಿ ಸರ್ಕಾರ ತೊಲಗಿಸಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಬೇಕಿದೆ.
– ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಚಿವ
ಅಲ್ಪಸಂಖ್ಯಾತರಿಗೆ ತಮ್ಮ ಸರ್ಕಾರ ಇದ್ದಾಗ 3,195 ಕೋಟಿ ರೂ. ನೀಡಲಾಗಿತ್ತು. ಬಿಜೆಪಿ ಸರ್ಕಾರ 1,000 ಕೋಟಿ ರೂ. ಮಾತ್ರ ನೀಡಿದೆ. ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಇಲಾಖೆಗೆ 10 ಸಾವಿರ ಕೋಟಿ ರೂ. ನೀಡಲಿದೆ.
– ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾರು ಚಾಲಕನ ಸಾವು ಹೇಗಾಯಿತು ಎಂಬ ಬಗ್ಗೆ ಸಚಿವ ಮುರುಗೇಶ್ ನಿರಾಣಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಆರೋಪದ ಬಗ್ಗೆ ಮುಖ್ಯಮಂತ್ರಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕಿತ್ತು. ಅವರು ಕ್ರಮ ತೆಗೆದುಕೊಳ್ಳದೇ ಇದ್ದರೆ, ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕ್ರಮ ತೆಗೆದುಕೊಳ್ಳಲಿದೆ. ಇದಷ್ಟೇ ಅಲ್ಲದೇ, ಬಿಜೆಪಿಯ ಎಲ್ಲಾ ಹಗರಣಗಳ ಮರು ತನಿಖೆ ನಡೆಸುತ್ತೇವೆ.
– ಡಿ.ಕೆ. ಶಿವಕುಮಾರ್, ಕೆಪಿಸಿಸಿ ರಾಜ್ಯಾಧ್ಯಕ್ಷ
ಎಸ್ಸಿಪಿ-ಟಿಎಸ್ಪಿ ಅನುದಾನದ 8 ಸಾವಿರ ಕೋಟಿ ರೂ.ಗಳನ್ನು ಬಿಜೆಪಿ ಸರ್ಕಾರ ರಸ್ತೆ, ಮತ್ತಿತರೆ ಕಾಮಗಾರಿಗಳಿಗೆ ವರ್ಗಾಯಿಸಿದೆ. ಶೇ.40ರ ಕಮೀಷನ್ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ.
– ಹೆಚ್. ಆಂಜನೇಯ, ಮಾಜಿ ಸಚಿವ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇವಮಾನವ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ. ಆದರೆ, ಮೋದಿ ದೇವ ಮಾನವ ಅಲ್ಲ. ಅವರು ದೆವ್ವ ಮಾನವ.
– ಎಸ್. ರಾಮಪ್ಪ, ಶಾಸಕ
ಮುಂಬರುವ ವಿಧಾನಸಭಾ ಚುನಾವಣೆ ಸವಾಲಿನದ್ದಾಗಿದೆ. ಅಲ್ಪಸಂ ಖ್ಯಾತರು, ದಲಿತರು ಹಾಗೂ ಹಿಂದುಳಿದವರಲ್ಲಿ ಶೇ.90ರಷ್ಟು ಜನ ಕಾಂಗ್ರೆಸ್ಗೆ ಏಕಪಕ್ಷೀಯವಾಗಿ ಮತ ಹಾಕಬೇಕು.
– ಅಬ್ದುಲ್ ಜಬ್ಬಾರ್, ಪರಿಷತ್ ಸದಸ್ಯ
ಪರಿಶಿಷ್ಟರಿಗೆ ಬಜೆಟ್ನ ಶೇ.24.1ರಷ್ಟು ಹಣ ಮೀಸಲಿಡಬೇಕಿತ್ತು. ಆ ಪ್ರಕಾರ 42 ಸಾವಿರ ಕೋಟಿ ರೂ. ನೀಡಬೇಕಿತ್ತು. ಇದರಲ್ಲಿ ಕೇವಲ 28 ಸಾವಿರ ಕೋಟಿ ರೂ. ನೀಡಲಾಗಿದೆ. ಆ ಹಣದಲ್ಲೂ ಸುಮಾರು 8 ಸಾವಿರ ಕೋಟಿ ರೂ.ಗಳನ್ನು ಬೇರೆ ಬಾಬ್ತಿಗೆ ಬಳಸಲಾಗುತ್ತಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲು ರಾಜ್ಯಕ್ಕೆ ಬಂದಿದ್ದಾರೆ. ಆದರೆ, ವಾಸಿಸುವವನೇ ಮನೆಯ ಒಡೆಯ ಎಂಬ ಕಾಯ್ದೆ ಜಾರಿಗೆ ತಂದಿದ್ದು ತಮ್ಮ ಸರ್ಕಾರ. ಈಗ ಅವರು ಹಕ್ಕು ಪತ್ರ ಕೊಡಲು ಬಂದಿರುವುದು ಢೋಂಗಿತನ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
ಪರಿಶಿಷ್ಟರ ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಎಂದು ವಾಲ್ಮೀಕಿ ಜನಾಂಗಕ್ಕೆ ಟೋಪಿ ಹಾಕಿದ್ದಾರೆ ಹಾಗೂ ಪಂಚಮಸಾಲಿ ಸಮುದಾಯದ ಮೀಸಲಾತಿ ಬದಲಾವಣೆ ಮಾಡುವುದಾಗಿ ಬಿಜೆಪಿಯವರು ನೆತ್ತಿಗೆ ತುಪ್ಪ ಹಚ್ಚಿದ್ದಾರೆ. ಇಂತಹ ಕ್ರಮಗಳು ಜಾರಿಯಾಗಲು ಸಂವಿಧಾನಕ್ಕೆ ತಿದ್ದುಪಡಿ ಅಗತ್ಯ ಎಂದವರು ಹೇಳಿದರು.
ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಸ್ತೆ ಬಗ್ಗೆ ಮಾತನಾಡಬೇಡಿ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮಕ್ಕಳ ಕೈಗೆ ಕಾಗದ ಪೆನ್ನು ಕೊಡುವ ಬದಲು ಖಡ್ಗ ಕೊಡಬೇಕು ಎಂಬುದೇ ಇವರ ಹುನ್ನಾರ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿರುವ 47 ಜನ ಸಭೆಯಲ್ಲಿ ಉಪಸ್ಥಿತರಿದ್ದರು.
ಸಮಾವೇಶದಲ್ಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್. ರಾಮಪ್ಪ, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ನಾಯಕರಾದ ಮಯೂರ್ ಜಯಕುಮಾರ್, ಸಲೀಂ ಅಹಮದ್, ಧ್ರುವನಾರಾಯಣ್, ವೇಣುಗೋಪಾಲ್, ಅಲ್ಲಂ ವೀರಭದ್ರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್, ಹೆಚ್.ಎಂ. ರೇವಣ್ಣ, ರಾಮಲಿಂಗಾರೆಡ್ಡಿ, ಹೆಚ್. ಆಂಜನೇಯ, ಜಲಜಾನಾಯ್ಕ, ಪುಷ್ಪ ಅಮರನಾಥ್, ನಲಪಾಡ್, ಕೊಂಡಜ್ಜಿ ಮೋಹನ್, ಸಚಿನ್ ಮೀಗ, ಹೆಚ್.ಪಿ. ರಾಜೇಶ್, ಪ್ರಕಾಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.