ರಾಜಕೀಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬರಲು ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ಕರೆ
ದಾವಣಗೆರೆ, ಜ. 19- ಯಾವ ಪಕ್ಷದಿಂದಾದರೂ ಸ್ಪರ್ಧಿಸಲಿ, ಆದರೆ ಪ್ರತಿ ಜಿಲ್ಲೆಯಲ್ಲೂ ನೇಕಾರ ಸಮುದಾಯದ ಒಬ್ಬರು ಶಾಸಕರಾಗಬೇಕು. ಟಿಕೆಟ್ ಪಡೆಯುವ ಹಂತದಿಂದ, ಚುನಾವಣೆಯಲ್ಲಿ ಗೆಲ್ಲಿಸುವ ಹಂತದವರೆಗೆ ಸಮುದಾಯದ ಎಲ್ಲಾ ಒಳ ಪಂಗಡಗಳೂ ಒಟ್ಟಾಗಿ ಮುಕ್ತವಾಗಿ ಚರ್ಚಿಸಬೇಕು ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರೂ, ಮಾಜಿ ಶಾಸಕರೂ ಆದ ಎಂ.ಡಿ. ಲಕ್ಷ್ಮೀನಾರಾಯಣ ಕರೆ ನೀಡಿದರು.
ಶ್ರೀ ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್ ಹಾಗೂ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಸಹಯೋಗದೊಂದಿಗೆ ಇಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ `ನೇಕಾರ ಸಮುದಾಯಗಳ ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯದಲ್ಲಿ ಹಿಂದುಳಿದ ನೇಕಾರ ಸಮುದಾಯದಲ್ಲಿ ಬರುವ ಚುನಾವಣೆಗೆ 25 ಜನರು ಸ್ಪರ್ಧಿಸಲು ತಯಾರಿರುವುದು ಸಂತಸದ ವಿಷಯ. ನಾನು ಈ ಬಾರಿಯ ಚುನಾವಣೆಗೆ ಸ್ಪರ್ದಿಸದಿರಲು ನಿರ್ಧರಿಸಿದ್ದೇನೆ. ಬದಲಾಗಿ ಹತ್ತಾರು ಜನ ಯುವಕರನ್ನು ರಾಜಕೀಯದಲ್ಲಿ ಬೆಳೆಸಬೇಕೆಂಬ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದರು.
ರಾಜ್ಯ ಸರ್ಕಾರದ 224 ಶಾಸಕರಲ್ಲಿ ಶೇ.24.3ರಷ್ಟು ಹರಿಜನ-ಗಿರಿಜನ ಶಾಸಕರು, ಶೇ.15.7ರಷ್ಟು ವೀರಶೈವ, ಶೇ.14.3ರಷ್ಟು ಒಕ್ಕಲಿಗ, ಶೇ.13.2ರಷ್ಟು ಮುಸ್ಲಿಮರು ಇದ್ದಾರೆ. ನಂತರದ ಸ್ಥಾನ ಅಂದರೆ 5ನೇ ಸ್ಥಾನಕ್ಕೆ ನೇಕಾರ ಸಮುದಾಯದವರು ಬರಬೇಕೆಂಬುದು ನಮ್ಮ ಆಶಯವಾಗಿದೆ. ಆದರೆ ಸರ್ಕಾರದ ಲೆಕ್ಕದ ಪ್ರಕಾರ ನಾವು 29ನೇ ಸ್ಥಾನದಲ್ಲಿದ್ದೇವೆ ಎಂದರು.
ನೇಕಾರ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಒತ್ತಾಯ
ನೇಕಾರ ಸಮುದಾಯಗಳ ಮುಂದಿನ ಮಕ್ಕಳ ಭವಿಷ್ಯಕ್ಕಾಗಿ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮ ಅತ್ಯಗತ್ಯವಾಗಿದ್ದು, ಈ ಬಗ್ಗೆ ಎಲ್ಲಾ ಜಿಲ್ಲಾಧ್ಯಕ್ಷರು ದನಿ ಎತ್ತಬೇಕು ಎಂದು ಮಾಜಿ ಶಾಸಕರೂ ಆದ ಎಂ.ಡಿ. ಲಕ್ಷ್ಮೀನಾರಾಯಣ ಕರೆ ನೀಡಿದರು.
ರಾಜ್ಯದಲ್ಲಿ ನೇಕಾರ ಸಮುದಾಯ ಶೇ.9ರಷ್ಟಿದೆ. ಶೇ.15ರಷ್ಟಿರುವ ಬೇರೆ ಸಮುದಾಯಕ್ಕೆ ಒಂದು ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಹಾಗೆಯೇ ಶೇ.9ರಷ್ಟಿರುವ ನಮಗೆ 500 ಕೋಟಿ ರೂ.ಗಳನ್ನಾದರೂ ನೀಡಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು, ನಮಗೆ ಬೇರೆ ಸಮುದಾಯಕ್ಕೆ ಹಣ ನೀಡಿದ ಬಗ್ಗೆ ಅಸೂಯೆ ಇಲ್ಲ. ಆದರೆ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆಯೇ ಹೊರತು, ಭಿಕ್ಷೆಯನ್ನಲ್ಲ ಎಂದು ಹೇಳಿದರು.
ಯಾವ ಪಕ್ಷ ನಿಗಮ ಸ್ಥಾಪನೆಗೆ ಮುಂದಾಗುತ್ತದೋ ಆ ಪಕ್ಷದ ಪರ ಸಮುದಾಯ ಇರಬೇಕು ಎಂದ ಅವರು, ಸಮು ದಾಯದ ಜಿಲ್ಲಾ ಪ್ರಮುಖರು ವಾರದೊಳಗೆ ಮಾಧ್ಯಮಗಳ ಮೂಲಕ ನಿಗಮದ ಬೇಡಿಕೆ ಬಗ್ಗೆ ಆಗ್ರಹಿಸಿದಲ್ಲಿ, ತಾವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಹೇಳಿದರು.
1999ರಲ್ಲಿ ನೇಕಾರ ಸಮುದಾಯದ ಸಂಖ್ಯೆ 1.90 ಲಕ್ಷ ಇತ್ತು. ಆದರೆ ಇಂದು ಆಂದಾಜು 60 ಲಕ್ಷದಷ್ಟಿದೆ. ಅಂದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇ.9.3ರಷ್ಟಿದೆ ಎಂದ ಅವರು, 2017 ರಿಂದ 2019ರವರೆಗೆ ನಡೆದ ಸರ್ವೆಯಲ್ಲಿ ಶೇ.80ರಷ್ಟು ಜನರು ನೇಕಾರರು ಎಂದು ನಮೂದಿಸಲಿಲ್ಲ. ಸಮೀಕ್ಷೆ ವರದಿ ಬಂದಿಲ್ಲವಾದರೂ, ಅಧಿಕಾರಿಗಳಿಂದ ಪಡೆದ ಮಾಹಿತಿ ಪ್ರಕಾರ ನೇಕಾರ ಸಮುದಾಯದ ಸಂಖ್ಯೆ 5.70 ಲಕ್ಷ ಮಾತ್ರ ಎಂದು ಹೇಳಿದರು.
ನೇಕಾರ ಸಮುದಾಯದ 29 ಪಂಗಡಗಳು ಸೇರಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ನೇಕಾರ ಅಥವಾ ನೇಕಾರಿಕೆ ವೃತ್ತಿಯೇ ಹೊರತು ಜಾತಿಯಲ್ಲ. ಈ ವೃತ್ತಿಯಲ್ಲಿ 1462
ಜಾತಿಗಳು ಬರುತ್ತವೆ. ಇದರಲ್ಲಿ ಹಿಂದುಳಿದ ವರ್ಗಗಳಲ್ಲಿ ಬರುವ ಸಮುದಾಯದಲ್ಲಿನ 197 ಜಾತಿಗಳಿವೆ. ಅವುಗಳಲ್ಲಿ ನೇಕಾರ ಸಮುದಾಯದ 29 ಜಾತಿಗಳಿವೆ. ನೇಕಾರರಿಗೆ ಸಂಬಂಧಿಸಿದಂತೆ ಈಗಾಗಲೇ 2 ನಿಗಮಗಳು, 1 ಫೆಡರೇಷನ್ ಇದೆ. ಆದರೆ ಸರ್ಕಾರಕ್ಕೆ ನೇಕಾರಿಕೆ ಹಾಗೂ ನೇಕಾರ ಸಮುದಾಯಗಳ ಬಗ್ಗೆ ಮನವರಿಗೆ ಮಾಡಿಕೊಡಬೇಕಿದೆ ಎಂದು ಹೇಳಿದರು.
ಸಮುದಾಯದ ಮಠಗಳೂ ಅಭಿವೃದ್ಧಿ ಹೊಂದಬೇಕಿದೆ ಎಂದ ಅವರು, ಈ ಹಿನ್ನೆಲೆಯಲ್ಲಿ ಶ್ರೀ ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್ ಸ್ಥಾಪಿಸಲಾಗಿದೆ. ಮಠ ನಿರ್ಮಾಣಕ್ಕೆ ಭಕ್ತರಿಂದ ಜಾಗ ಖರೀದಿಸಿದರೆ, ಕಟ್ಟಡ ಕಟ್ಟಲು ಸರ್ಕಾರದಿಂದ ನೆರವು ಕೊಡಿಸಲು ಬದ್ಧನಾಗಿದ್ದೇನೆ. ಸಮುದಾಯದ ಪ್ರತಿಯೊಬ್ಬರೂ ದೇವರದಾಸಿಮಯ್ಯನವರ ಹೆಸರಿನಲ್ಲಿ ಕೈಲಾದಷ್ಟು ಧನ ಸಹಾಯ ಮಾಡಬೇಕು ಎಂದು ಹೇಳಿದರು.
ರಾಜ್ಯ ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಎಂ.ಪಿ. ಉಮಾಶಂಕರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಮ್ಮ ಅಸ್ಮಿತೆಯನ್ನು ಬಲ ಪಡಿಸಿಕೊಳ್ಳುವುದು ನಮ್ಮ ಹಕ್ಕು ಹಾಗೂ ಕರ್ತವ್ಯ. ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಹೋರಾಟ ಅನಿವಾರ್ಯವಾಗಿದೆ. ಒಳ ಪಂಗಡಗಳು ತಮ್ಮದೇ ಆಚಾರ, ರೀತಿ, ನೀತಿಗಳನ್ನು ಇಟ್ಟುಕೊಂಡು ಒಗ್ಗಟ್ಟಾಗದಿದ್ದರೆ ಜಯ ದೊರೆಯುವುದಿಲ್ಲ ಎಂದು ಹೇಳಿದರು.
ಬಾಗಲಕೋಟೆ ಗುಳೇದಗುಡ್ಡದ ಶ್ರೀ ಗುರುಸಿದ್ದೇಶ್ವರ ಬೃಹನ್ಮಠದ ಶ್ರೀ ಬಸವರಾಜ ಪಟ್ಟದಾರ್ಯ ಮಹಾಸ್ವಾಮೀಜಿ, ಶ್ರೀ ಪದ್ಮಶಾಲಿ ಗುರುಪೀಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ, ತಪಸೀಹಳ್ಳಿ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮದ ಶ್ರೀ ದಿವ್ಯಜ್ಞಾನಾನಂದಗಿರಿ ಮಹಾಸ್ವಾಮೀಜಿ, ಶ್ರೀ ಗುರುಬಸವ ದೇವರು ಸಾನ್ನಿಧ್ಯ ವಹಿಸಿದ್ದರು.
ಉದ್ಯಮಿ ಡಾ.ಎಂ.ಜಿ. ಮಂಜುನಾಥ್, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಸಂಗಮೇಶ್ ಉಪಾಸೆ, ಎಂ.ಎಸ್. ರಾಮಚಂದ್ರಪ್ಪ, ಎ.ಹೆಚ್. ಕೃಷ್ಣಮೂರ್ತಿ, ಪ್ರೊ.ಎಲ್. ಸತ್ಯನಾರಾಯಣ, ಸಿ.ಶ್ರೀನಿವಾಸ ಚಿನ್ನಕಟ್ಟಿ, ಪಿ.ಜೆ. ನಾಗರಾಜ್, ಪ್ರಕಾಶ್ ಕೊಳೂರು, ಜಯಶ್ರೀ, ಸುಮಂಗಲ, ಪ್ರೇಮಮ್ಮ, ರೇಣುಕಾ ಶ್ರೀನಿವಾಸ್, ಸೌಮ್ಯ ಇತರರು ಉಪಸ್ಥಿತರಿದ್ದರು. ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಸ್.ಕೆ. ಬಸವರಾಜ್ ಸ್ವಾಗತಿಸಿದರು.