ನಗರಕ್ಕೆ ನಾಳೆ `ಪ್ರಜಾಧ್ವನಿ’ ಬಸ್ ಯಾತ್ರೆ

ನಗರಕ್ಕೆ ನಾಳೆ `ಪ್ರಜಾಧ್ವನಿ’ ಬಸ್ ಯಾತ್ರೆ

ದಾವಣಗೆರೆ, ಜ. 17 – ಬೆಳಗಾವಿಯಿಂದ ಆರಂಭವಾಗಿರುವ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಬಸ್ ಯಾತ್ರೆ ಜ.19ರ ಗುರುವಾರದಂದು ನಗರಕ್ಕೆ ಆಗಮಿಸಲಿದೆ. ಹೈಸ್ಕೂಲ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಬಹಿರಂಗ ಸಭೆ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ಸಲೀಂ ಅಹಮದ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಧ್ರುವನಾರಾಯಣ, ರಾಮಲಿಂಗಾ ರೆಡ್ಡಿ ಮತ್ತಿತರೆ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿರುವ ಬಿಜೆಪಿ ಸಾಲು ಸಾಲು ಅಕ್ರಮಗಳನ್ನು ನಡೆಸಿದೆ. ಬಿಜೆಪಿಯದು 40 ಪರ್ಸೆಂಟ್ ಸರ್ಕಾರ ಎಂದು ಮಲ್ಲಿಕಾರ್ಜುನ್ ಆರೋಪಿಸಿದರು. ನಮ್ಮ ಅವಧಿಯಲ್ಲಿ ಪಾಲಿಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿರ ಲಿಲ್ಲ. ಈಗ ನಗರ ಪಾಲಿಕೆಯಲ್ಲಿ 40 ಪರ್ಸೆಂಟ್ ಕಮೀಷನ್ ನಡೆದಿದೆ ಎಂದವರು ಆರೋಪಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಜನರ ಒಲವು ಕಾಂಗ್ರೆಸ್ ಕಡೆ ಇದೆ. ನಾಳೆಯೇ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು. ನಿನ್ನೆ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಆರೋಪ ಕೇಳಿ ಬಂದಿದೆ. ಪಿಎಸ್ಐ ಹಗರಣ ಹಳೆಯದಾಗಿ ಈಗ ಸ್ಯಾಂಟ್ರೋ ರವಿ ಹಗರಣ ಹುಟ್ಟಿಕೊಂಡಿದೆ. ಪ್ರತಿನಿತ್ಯ ಈಗ ಒಳ್ಳೊಳ್ಳೆ ಹಗರಣಗಳು ಬೆಳಕಿಗೆ ಬರುತ್ತಿವೆ ಎಂದರು.

ಶಾಸಕ ಎಸ್.ರಾಮಪ್ಪ ಮಾತನಾಡಿ, ಹರಿಹರದಿಂದ ಹತ್ತು ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಮಾಜಿ ಶಾಸಕರಾದ ಡಿ.ಜಿ. ಶಾಂತನಗೌಡ, ಹೆಚ್.ಪಿ. ರಾಜೇಶ್, ಮುಖಂಡರಾದ ಅಯೂಬ್ ಪೈಲ್ವಾನ್, ತೇಜಸ್ವಿ ಪಟೇಲ್, ಕೆ.ಎಸ್. ಬಸವಂತಪ್ಪ, ಕೆ.ಪಿ. ಪಾಲಯ್ಯ, ದಿನೇಶ್ ಕೆ. ಶೆಟ್ಟಿ, ಬಸವರಾಜ್, ಆನಂದಪ್ಪ, ಎ. ನಾಗರಾಜ್, ಕೆ.ಜಿ. ಶಿವಕುಮಾರ್, ಬಿ.ಹೆಚ್. ವೀರಭದ್ರಪ್ಪ, ಎಸ್. ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!