ಭಾವನಾತ್ಮಕ ಸಂಬಂಧಗಳು ಗಟ್ಟಿಯಾದಾಗ ಮಾತ್ರ ನೆಮ್ಮದಿ ಜೀವನ

ಭಾವನಾತ್ಮಕ ಸಂಬಂಧಗಳು ಗಟ್ಟಿಯಾದಾಗ ಮಾತ್ರ ನೆಮ್ಮದಿ ಜೀವನ

ದಾವಣಗೆರೆ, ಜ. 17- ಭಾವನಾತ್ಮಕ ಸಂಬಂಧಗಳು ಗಟ್ಟಿಯಾದಾಗ ಮಾತ್ರ ನೆಮ್ಮದಿ, ಸಾರ್ಥಕ ಜೀವನ ಸಾಧ್ಯವಾಗುತ್ತದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ನಗರದ ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಕಲ್ಯಾಣ ಮಂಟಪದ ಆವರಣದಲ್ಲಿರುವ ತರಳಬಾಳು ಸಭಾಭವನದಲ್ಲಿ ಇಂದು ಹಮ್ಮಿಕೊಂಡಿದ್ದ ನೀರಾವರಿ ಇಲಾಖೆಯ ನಿವೃತ್ತ ಡೆಪ್ಯೂಟಿ ಸೆಕ್ರೆಟರಿ ದಿ. ಎಸ್‌.ಎಂ. ರಾಜಶೇಖರಪ್ಪ ಅವರ ಕೈಲಾಸ ಶಿವಗಣಾರಾಧನೆ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಸಂಪತ್ತಿಗಿಂತ ಭಾವನಾತ್ಮಕ ಜೀವನ ಮುಖ್ಯ. ಭಾವನಾತ್ಮಕ ಸಂಬಂಧಗಳು ಗಟ್ಟಿಗೊಂಡರೆ, ಎಷ್ಟೇ ಆರ್ಥಿಕವಾಗಿ ದುರ್ಬಲವಾಗಿದ್ದರೂ ಸಹ ನೆಮ್ಮದಿ, ಸಂತೋಷದಿಂದ ಬಾಳಲು ಸಾಧ್ಯವಾಗುತ್ತದೆ ಎಂದರು.

ನಮ್ಮ ಪೂರ್ವಾಶ್ರಮದಲ್ಲಿ ರಾಜಶೇಖರಪ್ಪ ಅವರ ಕುಟುಂಬದವರ ಜೊತೆಗೆ ತುಂಬಾ ಒಡನಾಟವಿತ್ತು. ರಾಜಣ್ಣ ಮತ್ತು ನಮ್ಮ ನಡುವೆ ತುಂಬಾ ಆತ್ಮೀಯತೆ ಇತ್ತು. ಅವರ ಅಗಲಿಕೆ ಎಲ್ಲರನ್ನೂ ದುಃಖಿತರನ್ನಾಗಿ ಮಾಡಿದೆ ಎಂದು ಹೇಳಿದರು.

ರಾಜಶೇಖರಪ್ಪ ಲಿಂ. ಜಗದ್ಗುರು ಶಿವಕುಮಾರ ಸ್ವಾಮೀ ಜಿಯವರ ಆಪ್ತ ಒಡನಾಡಿಯಾಗಿದ್ದು, ತರಳಬಾಳು ವಿದ್ಯಾಸಂಸ್ಥೆಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂದರು.

ರಾಜಶೇಖರಪ್ಪನವರದು  ವಿದ್ಯಾವಂತ ಮತ್ತು ಆದರ್ಶ ಕುಟುಂಬ ಜೀವನ. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದಲ್ಲದೇ ಉನ್ನತ ಹುದ್ದೆಗಳನ್ನು ಕೊಡಿಸಿ, ಸಂಸ್ಕಾರವಂತರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.

ರಾಜಶೇಖರಪ್ಪ ಅವರ ಆಪ್ತಮಿತ್ರ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಸಿದ್ಧಲಿಂಗಯ್ಯ ಇವರೀರ್ವರು ಜೊಡೆತ್ತುಗಳಿದ್ದಂತೆ. ಹಿರಿಯ ಶ್ರೀಗಳ ಶಿಕ್ಷಣ ಕ್ರಾಂತಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಲ್ಲಿ ರಾಜಶೇಖರಪ್ಪ ಅವರ ಶ್ರಮ ಅಪಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಶ್ರೀಮತಿ ಮಲ್ಲಮ್ಮ, ರತ್ನಮ್ಮ, ರಾಜು, ಶಶಿರೇಖ ಮತ್ತಿತರರು ರಾಜಶೇಖರಪ್ಪ ಅವರಿಗೆ ನುಡಿ ನಮನ ಸಲ್ಲಿಸಿದರು.

ಶ್ರೀಮತಿ ಸುಶೀಲ ರಾಜಶೇಖರಪ್ಪ ಮತ್ತವರ ಕುಟುಂಬ ವರ್ಗದವರು ಸೇರಿದಂತೆ ರಾಜಶೇಖರಪ್ಪ ಅವರ ಒಡನಾಡಿಗಳು, ಸ್ನೇಹಿತರು, ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!