ಮಲೇಬೆನ್ನೂರು, ಜ.15- ಭವ್ಯ ವ್ಯಕ್ತಿತ್ವ, ಸರಳ ಜೀವನ ಮಾರ್ಗದೊಂದಿಗೆ ದಿವ್ಯ ಸಂದೇಶ ನೀಡುತ್ತಿದ್ದ ಸಿದ್ದೇಶ್ವರ ಶ್ರೀಗಳು ಕಾವಿಧಾರಿಗಳಾಗಿರಲಿಲ್ಲ, ಆದರೂ ಅವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವವಿತ್ತು. ಜನರಿಗೆ ಅವರು ಹಾಗೂ ಅವರ ಪ್ರವಚನ ಎಂದರೆ ಪಂಚಪ್ರಾಣವಾಗಿತ್ತು ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಹಮ್ಮಿ ಕೊಂಡಿದ್ದ ಹರಜಾತ್ರೆಯ 2ನೇ ದಿನ ಬೆಳಿಗ್ಗೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳವರಿಗೆ ನುಡಿ ನಮನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಶತಮಾನದ ಮಹಾಸಂತರಾಗಿ ಎಲ್ಲಾ ಜನರ ಉತ್ತಮ ಬದುಕಿಗಾಗಿ ಬದುಕಿದ ಸಿದ್ದೇಶ್ವರ ಶ್ರೀಗಳು 2014 ರಲ್ಲೇ ವಿಲ್ ಬರೆದು ನಾವು ನಿಧನರಾದ ಮೇಲೆ ನನ್ನನ್ನು ಮಣ್ಣು ಮಾಡಬೇಡಿ, ಅಗ್ನಿಸ್ಪರ್ಶ ಮಾಡಿ, ನನ್ನ ಸ್ಮಾರಕ ನಿರ್ಮಿಸಬೇಡಿ ಎಂದು ಹೇಳಿದ್ದರು. ಅವರ ಆಶಯದಂತೆ ಎಲ್ಲಾ ನಡೆದಿದೆ. ಜಗತ್ತಿನಲ್ಲೇ ಈ ರೀತಿ ವಿಲ್ ಬರೆದ ವ್ಯಕ್ತಿ ಸಿದ್ದೇಶ್ವರ ಶ್ರೀಗಳಾಗಿದ್ದಾರೆ. ಶರಣರ ಧರ್ಮದಲ್ಲಿ ಅಗ್ನಿಸ್ಪರ್ಶ ಮಾಡು ವುದಿಲ್ಲ. ಈ ತಾತ್ವಿಕ ನಿಲುವು ಗೊತ್ತಿದ್ದರೂ ಸಹ ಅವರು ಅದರಿಂದ ನಿರ್ಲಿಪ್ತರಾಗಲು ಬಯಸಿ ತಮ್ಮ ಶರೀರವನ್ನು ಅಗ್ನಿಸ್ಪರ್ಶ ಮಾಡುವಂತೆ ಸೂಚಿಸಿದ್ದರು ಎಂದರು.
ರೈತರ ಬಗ್ಗೆ ತುಂಬಾ ಕಾಳಜಿ ಹೊಂದಿದ್ದ ಶ್ರೀಗಳು ಎಂ.ಬಿ. ಪಾಟೀಲ್ ಅವರು ನೀರಾವರಿ ಸಚಿವರಾಗಿದ್ದಾಗ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳ ಜೊತೆಗೆ ಅವರ ಹುಟ್ಟೂರಾದ ತ್ರಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲೂ 3600 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ ಜಾರಿಗೊಳಿಸಿ ರೈತರಿಗೆ ಅನುಕೂಲ ಮಾಡಿಸಿಕೊಟ್ಟಿದ್ದಾರೆ. ಆ ನೀರಾವರಿ ಯೋಜನೆಗೆ ಸಿದ್ದೇಶ್ವರ ಶ್ರೀಗಳನ್ನು ಎಂ.ಬಿ. ಪಾಟೀಲರು ಕರೆದಾಗ ಶ್ರೀಗಳು ಬರಲಿಲ್ಲ. ಸುತ್ತೂರು ಶ್ರೀಗಳು ಬಂದು ಕರೆದಾಗ ಜೊತೆಗೂಡಿ ತಮ್ಮೂರಿನ ನೀರಾವರಿ ಯೋಜನೆ ಉದ್ಘಾಟಿಸಿದ್ದರೆಂದು ಸಿರಿಗೆರೆ ಶ್ರೀಗಳು ನೆನಪಿಸಿಕೊಟ್ಟರು.
ಈ ನಿಟ್ಟಿನಲ್ಲಿ ವಚನಾನಂದ ಶ್ರೀಗಳ ಸಾಮಾಜಿಕ ಚಿಂತನೆ ಮಾದರಿಯಾಗಿದ್ದು, ಸಮಾಜದ ಜನರಿಗಾಗಿ ನ್ಯಾಯ ಒದಗಿಸಲು ಹೋರಾಟ ಮಾಡುತ್ತಿರುವುದನ್ನು ಶ್ಲ್ಯಾಘಿಸಿದ ಶ್ರೀಗಳು, ವಚನಾನಂದ ಶ್ರೀಗಳು ಶ್ವಾಸ ಗುರುಗಳಾಗಿದ್ದು, ಅವರು ಉಸಿರಾಡುವವರಿಗೂ ಸಮಾಜ ಉಸಿರಾಡುತ್ತದೆ. ಅವರು ಉಸಿರು ನಿಲ್ಲಿಸಿದರೆ ನಿಮಗೆ ತೊಂದರೆ ಆಗಲಿದೆ ಎಂದು ಭಕ್ತರನ್ನು ಎಚ್ಚರಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಜ್ಞಾನ ವೃಕ್ಷದಂತಿದ್ದರು. ಅವರು ಒಟ್ಟಾರೆ ಸಮಾಜಕ್ಕೆ ಕೊಟ್ಟಿರುವ ಸಂದೇಶಗಳು ಸೂರ್ಯ, ಚಂದ್ರರು ಇರುವರೆಗೂ ಜನರ ಮಧ್ಯ ಇರುತ್ತವೆ ಎಂದರು.
ರೈತರ ಜಮೀನನ್ನು ವಶಕ್ಕೆ ಪಡೆಯಬೇಡಿ : ಸಿರಿಗೆರೆ ಶ್ರೀ
ಕೈಗಾರಿಕೆ ಸೇರಿದಂತೆ ಹಲವಾರು ಯೋಜನೆಗಳಿಗೆ ಸರ್ಕಾರ ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದೆ, ರೈತ ದೇಶದ ಬೆನ್ನೆಲುಬು. ನಾವು ರೈತರ ಜಮೀನನ್ನು ಕಸಿದುಕೊಂಡು ಬಂಡವಾಳ ಶಾಹಿಗಳಿಗೆ ಕೊಟ್ಟರೆ ರೈತರ ಬೆನ್ನನ್ನು ಮುರಿದಂತಾಗುತ್ತದೆ ಎಂದು ಸಿರಿಗೆರೆ ಶ್ರೀಗಳು ಕಳವಳ ವ್ಯಕ್ತಪಡಿಸಿದರು.
ಕೈಗಾರಿಕೆಗಳು ಬೇಕು ನಿಜ. ಆದರೆ ನೀವು ರೈತರ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ನಂತರ ಕೈಗಾರಿಕೆಗಳಿಗೆ ನೀಡಿದರೆ ರೈತರಿಗೆ ತೊಂದರೆ ಆಗುತ್ತದೆ. ಆದ್ದರಿಂದ ವಿದೇಶಗಳಲ್ಲಿ ಜಾರಿಯಲ್ಲಿರುವಂತೆ ರೈತರ ಭೂಮಿ ರೈತನ ಹೆಸರಿನಲ್ಲಿಯೇ ಇರಬೇಕು. ರೈತ ಭೂಮಿಯ ಖಾಯಂ ಒಡೆಯನಾಗಿರಬೇಕು. ಕೈಗಾರಿಕೆ ಮಾಡುವವರು ಆ ರೈತನಿಗೆ ಪ್ರತಿ ತಿಂಗಳು ಇಂತಿಷ್ಟು ಹಣ ನೀಡುವಂತಾಗಬೇಕು. ಆ ಮೂಲಕ ರೈತರಿಗಾಗಿ ದೇಶದಲ್ಲಿ ಹೊಸ ಕಾನೂನು ಜಾರಿಗೊಳಿಸಬೇಕೆಂದು ಸಿರಿಗೆರೆ ಸ್ವಾಮೀಜಿ ಆಗ್ರಹಿಸಿದರು.
ಯಡಯೂರಪ್ಪನವರ ಅಧಿಕಾರವಧಿ ಯಲ್ಲಿ ಪಂಚಮಸಾಲಿ ಸಮಾಜಕ್ಕೆ 3ಬಿ ಸೌಲಭ್ಯ ನೀಡಲಾಗಿತ್ತು. ಈಗ ಕೇಳುತ್ತಿರುವ 2ಎ ಮೀಸಲಾತಿಯೂ ಈ ಸಮಾಜದಲ್ಲಿರುವ ಬಡವರಿಗೆ, ರೈತರಿಗೆ ಅಗತ್ಯವಾಗಿದ್ದು, ಶೀಘ್ರವೇ ಆ ಸೌಲಭ್ಯವೂ ಸಿಗಲಿದೆ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಸಿಎಂ ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
`ಪಂಚವಾಣಿ ಪತ್ರಿಕೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರದ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಅಧ್ಯಾತ್ಮಿಕವಾಗಿ ಮೂಲ ಚಿಂತನೆ ಹೊಂದಿರುವ ಸಾಮಾಜಿಕ ಬದುಕು ನಮ್ಮದಾಗಿದ್ದು, ಸಮಾಜಕ್ಕಾಗಿ ಕೆಲಸ ಮಾಡಿದ ಮಹಾತ್ಮರು ಮಾತ್ರ ಸ್ಮರಣೀಯರಾಗಿ ಉಳಿಯುತ್ತಾರೆ ಎಂಬುದಕ್ಕೆ ಸಿದ್ದೇಶ್ವರ ಶ್ರೀಗಳು ಸಾಕ್ಷಿಯಾಗಿದ್ದಾರೆ ಎಂದರು.
ರಾಮ, ಕೃಷ್ಣ, ಬಸವಣ್ಣ ಸೇರಿದಂತೆ ಇನ್ನೂ ಅನೇಕರನ್ನು ನಾವು ಜಾತಿ ಆಧಾರದಿಂದ ನೋಡಿಲ್ಲ. ಅವರ ಗುಣಗಳಿಂದಾಗಿ ಅವರು ಎಲ್ಲರಿಗೂ ದೇವರಾಗಿದ್ದಾರೆ. ಅವರ ಹಾದಿಯಲ್ಲೇ ಸಿದ್ದೇಶ್ವರ ಶ್ರೀಗಳು ಕೂಡಾ ನಮ್ಮೆಲ್ಲರಿಗೂ ದೇವರಾಗಿದ್ದಾರೆ ಎಂದರು.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಹಳ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ನ್ಯಾಯಾಂಗ ತೀರ್ಮಾನವು ನಮ್ಮ ಪರವಾಗಿ ಬರುವ ವಿಶ್ವಾಸವಿದ್ದು, ಈ ಸಮಾಜಕ್ಕೆ ಖಂಡಿತವಾಗಿಯೂ ನ್ಯಾಯ ಕೊಟ್ಟೇ ಕೊಡುತ್ತೇವೆ. ನಿಮ್ಮ ಬೆಂಬಲಕ್ಕೆ ಕೇಂದ್ರ ಸರ್ಕಾರವೂ ಇದೆ. ಗಂಗಾರತಿ ಮಾದರಿಯಲ್ಲಿ ಹರಿಹರದ ಬಳಿ ತುಂಗಾರತಿಯ ಶ್ರೀಗಳ ಸಂಕಲ್ಪ ಶೀಘ್ರವೇ ಅನುಷ್ಠಾನಕ್ಕೆ ಬರಲಿದೆ ಎಂದು ಪ್ರಹ್ಲಾದ್ ಜೋಷಿ ಹೇಳಿದರು.
ವಿಜಯಪುರದ ಸ್ಪರ್ಶ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸಂಯುಕ್ತಾ ಪಾಟೀಲ್ ಮಾತನಾಡಿ, ಯುವ ಜನಾಂಗದ ಬದುಕಿನ ಯಶಸ್ಸಿಗೆ ಸಿದ್ದೇಶ್ವರ ಶ್ರೀಗಳು ಆಸಕ್ತಿ, ಪರಿಶ್ರಮ, ಏಕಾಗ್ರತೆ ಎಂಬ ಮೌಲ್ಯಗಳನ್ನು ಕೊಟ್ಟಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಬದುಕೇ ಆದರ್ಶವಾಗಿದ್ದು, ಸಿದ್ದೇಶ್ವರ ಶ್ರೀಗಳು ಜ್ಞಾನ ಯೋಗಿಯಾಗಿದ್ದಾರೆ. ತರಳಬಾಳು ಶ್ರೀಗಳು ಜಲಯೋಗಿಯಾಗಿದ್ದಾರೆ. ವಚನಾನಂದ ಶ್ರೀಗಳು ಯೋಗದ ಮೂಲಕ ಜನರಿಗೆ ಯೋಗದ ಯೋಗಿಗಳಾಗಿದ್ದಾರೆ ಎಂದರು.
ಚಿತ್ರನಟ ಡಾಲಿ ಧನಂಜಯ್ ಅವರು ಬಸವಣ್ಣನವರ ವಚನದ ಮೂಲಕ ಮಾತು ಆರಂಭಿಸಿ, ಸಿದ್ಧಗಂಗಾ ಮತ್ತು ಸಿದ್ದೇಶ್ವರ ಶ್ರೀಗಳ ಬದುಕನ್ನು ನೋಡಿರುವ ನಾವೇ ಪುಣ್ಯವಂತರಾಗಿದ್ದೇವೆ. ನುಡಿ ಇದ್ದಂಗೆ ನಡೆ ಇರಬೇಕೆಂದು ಬಸವಣ್ಣ ಹೇಳಿದ್ದರು. ಆ ಮಾತುಗಳನ್ನು ಅಕ್ಷರಶಃ ಪಾಲಿಸಿದ ಶ್ರೀಗಳು ಎಲ್ಲವನ್ನೂ ನಿರಾಕರಿಸಿ ಹೇಗೆ ಬದುಕಬೇಕೆಂದು ತೋರಿಸಿಕೊಟ್ಟಿದ್ದಾರೆ. ಎಲ್ಲವೂ ಇದ್ದಾಗ ಹೇಗೆ ಬದುಕಬೇಕೆಂದು ನಟ ಪುನೀತ್ ರಾಜ್ಕುಮಾರ್ ತೋರಿಸಿಕೊಟ್ಟು ಹೋಗಿದ್ದಾರೆ ಎಂದಾಗ ಸಭೆಯಲ್ಲಿ ಜೋರಾದ ಚಪ್ಪಾಳೆ ಕೇಳಿ ಬಂದವು.
ಮಾರ್ಚ್ 30 ಕ್ಕೆ ನನ್ನ ಅಭಿನಯದ `ಹೊಯ್ಸಳ’ ಚಿತ್ರ ಬಿಡುಗಡೆ ಆಗಲಿದ್ದು, ಎಲ್ಲರೂ ಸಿನಿಮಾ ಟಾಕೀಸ್ಗೆ ಹೋಗಿ ಸಿನಿಮಾ ನೋಡಿ ಬೆಂಬಲಿಸುವಂತೆ ಮನವಿ ಮಾಡಿದ ಡಾಲಿ ಧನಂಜಯ್ ಅವರು, ಅಭಿಮಾನಿಗಳ ಕೋರಿಕೆ ಮೇರೆಗೆ ಡೈಲಾಗ್ ಹೇಳಿ ಗಮನ ಸೆಳೆದರು.
ರಾಜ್ಯ ಮಾಹಿತಿ ಆಯುಕ್ತ ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಸಿ.ಬಿ. ರಿಷ್ಯಂತ್, ಅಥಣಿಯ ವಿಮೋಚನಾ ಸಂಸ್ಥೆಯ ಬಿ.ಎಲ್. ಪಾಟೀಲ್ ಮಾತನಾಡಿದರು.
ರಾಣೇಬೆನ್ನೂರು ಶಾಸಕ ಅರುಣ್ಕುಮಾರ್ ಪೂಜಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿದ್ದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ನಾವು 2ನೇ ಕ್ಲಾಸ್ ಇದ್ದಾಗ ನಮ್ಮ ತಾಯಿ ಸಿದ್ದೇಶ್ವರ ಶ್ರೀಗಳ ಪ್ರವಚನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಗ ನಮ್ಮ ತಾಯಿ ನನಗೆ ನೀನು ಸಿದ್ದೇಶ್ವರ ಶ್ರೀಗಳಂತೆ ಆಗು ಎಂದಿದ್ದರು. ಈ ಪೀಠಕ್ಕೆ ನಾವು ಬರುವಾಗಲೂ ಅವರ ಮತ್ತು ಇಳಕಲ್ನ ಮಹಾಂತ ಅಪ್ಪಗಳ ಅಭಿಪ್ರಾಯ ಕೇಳಿ ಅವರು ಒಪ್ಪಿದ ಮೇಲೆಯೇ ಇಲ್ಲಿಗೆ ಬಂದಿದ್ದೇವೆ. ಹರ ಜಾತ್ರೆ ಆರಂಭಿಸಲು ಸಿದ್ದೇಶ್ವರ ಶ್ರೀಗಳೇ ಕಾರಣ. ಹಾಗಾಗಿ ಅವರ ಕೈಯಿಂದಲೇ ಹರ ಜಾತ್ರೆಗೆ ಚಾಲನೆ ಕೊಡಿಸಿದ್ದೆವು. ಅಂದಿನಿಂದ ಇಂದಿನವರೆಗೆ ಹರ ಜಾತ್ರೆ ಯಾವ ವಿಘ್ನವೂ ಇಲ್ಲದಂತೆ ನಡೆದುಕೊಂಡು ಬಂದಿದೆ. ವಿದೇಶದಲ್ಲಿ ಸಿದ್ದೇಶ್ವರ ಶ್ರೀಗಳ ಜೊತೆಗೆ ನಮ್ಮ ಯೋಗವನ್ನು ಫಿಕ್ಸ್ ಮಾಡುತ್ತಿದ್ದರು. ಅವರು ನನಗೆ ತಾಯಿಯ ಪ್ರೀತಿ, ಮಮತೆ ತೋರಿಸಿದ್ದರೆಂದು ಭಾವುಕರಾದರು. ಸಿರಿಗೆರೆ ಶ್ರೀಗಳು ನನಗೆ ಆದರ್ಶರಾಗಿದ್ದಾರೆ. ಅವರ ಮಾರ್ಗದರ್ಶನವೂ ನಮಗೆ ಸದಾ ಇರಲಿದೆ ಎಂದರು.
ಪುನೀತ್ ರಾಜ್ಕುಮಾರ್ ನಂತರ ಬಹಳ ವಿಶೇಷ ಹಾಗೂ ಮಾನವೀಯ ಗುಣಗಳನ್ನು ಹೊಂದಿರುವ ನಟನಾಗಿ ಡಾಲಿ ಧನಂಜಯ ಬೆಳೆಯುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದಾಗ ನಟರ ಪೈಕಿ ಅಲ್ಲಿಗೆ ಬಂದವರು ಧನಂಜಯ ಮಾತ್ರ. ಆ ಕಾರಣಕ್ಕಾಗಿ ನಾವು ಅವರನ್ನು ಈ ನುಡಿ ನಮನ ಕಾರ್ಯಕ್ರಮಕ್ಕೆ ಕರೆದಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.
ಈ ವೇಳೆ ಕೂಡ್ಲಿಗಿಯ ಬಳ್ಳಾರಿ ಹನುಮಂತ ಅವರು ತಯಾರು ಮಾಡಿಸಿದ 18 ಕೆ.ಜಿ. ಬೆಳ್ಳಿಯ ಪೀಠವನ್ನು ಪೀಠಕ್ಕೆ ಹಸ್ತಾಂತರಿಸಿದರು.
ಕು. ಮಹಾನ್ಯ ಹಾಡಿದ `ಇಂದು ಬಾನಿಗೆಲ್ಲಾ ಹಬ್ಬ’ ಮತ್ತು `ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡುಗಳು ಎಲ್ಲರ ಮನ ಸೆಳೆದವು.
ಪಂಚಮಸಾಲಿ ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಬಿ. ನಾಗನಗೌಡರು ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯಧ್ಯಕ್ಷ ಸೋಮನಗೌಡ ಪಾಟೀಲ್ ನುಡಿ ನಮನ ಸಲ್ಲಿಸಿದರು.
ಸಮಾಜದ ಮುಖಂಡರಾದ ಬಾವಿ ಬೆಟ್ಟಪ್ಪ, ಶಾಸಕ ಎಸ್. ರಾಮಪ್ಪ, ಬಸವರಾಜ ದಿಂಡೂರು, ಬಿ.ಸಿ. ಉಮಾಪತಿ, ಎಚ್.ಪಿ. ಬಾಬಣ್ಣ, ಸಿರಿಗೆರೆ ನಾಗನಗೌಡ್ರು, ಕಳಕನಗೌಡ ಕಲ್ಲೂರ, ಗುರುಶಾಂತ ಬಿ. ನೋಡೋಣಿ, ಹೆಚ್. ನಾಗರಾಜ್, ಎಸ್.ಎಸ್. ಪಾಟೀಲ್, ಜ್ಯೋತಿ ಪ್ರಕಾಶ್, ವಕೀಲರಾದ ಪ್ರಕಾಶಗೌಡ ಪಾಟೀಲ್, ಚಂದ್ರಶೇಖರ್ ಪೂಜಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಬೆಂಗಳೂರು ಜಿ.ಪಂ. ಮಾಜಿ ಅಧ್ಯಕ್ಷ ಮರಿಸ್ವಾಮಿ ಮತ್ತಿತರರು ವೇದಿಕೆಯಲ್ಲಿದ್ದರು.
ಪಂಚಮಸಾಲಿ ಸಮಾಜದ ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ ನವಲಗುಂದ ಸ್ವಾಗತಿಸಿದರು. ಹರಿಹರದ ಕು. ನಳಿನ ನಿರೂಪಿಸಿದರೆ, ಲಕ್ಷ್ಮೇಶ್ವರದ ಮಂಜುನಾಥ ಮಾಗಡಿ ವಂದಿಸಿದರು.
ಜಿಗಳಿ ಪ್ರಕಾಶ್, [email protected]