ಆರು ಬಾರಿ ಕೊಟ್ಟ ಮಾತು ತಪ್ಪಿದ ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಕಿಡಿ
ದಾವಣಗೆರೆ, ಜ.12- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವ್ ನಿವಾಸದ ಮುಂದೆ ನಾಳೆ ದಿನಾಂಕ 13ರ ಶುಕ್ರವಾರ ಧರಣಿ ಮಾಡಿ, ಮೀಸಲಾತಿಗೆ ಆಗ್ರಹಿಸಲಾಗುವುದು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಶ್ರೀ ಸದ್ಯೋಜಾತ ಮಠದ ಸಭಾಂಗಣದಲ್ಲಿ ನಿನ್ನೆ ಸಂಜೆ ನಡೆದ ಪಂಚಮಸಾಲಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವರ್ಷ ಡಿ.12ರಂದೇ ಹೋರಾಟಕ್ಕೆ ಮುಂದಾದವರನ್ನು ತಡೆದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಡಿ.19ರಂದು ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಘೋಷಿಸುವೆ ಎಂದು ಮಾತು ಕೊಟ್ಟಿದ್ದರು. ಡಿ.22 ರಂದು ಬಹುದೊಡ್ಡ ಸಮಾವೇಶ ಆಯೋಜಿಸಲಾಯಿತು. ಪಾದಯಾತ್ರೆ ಮೂಲಕ ಸಮಾವೇಶ ತಲುಪುತ್ತಿದ್ದಂತೆ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯಿತು. ಮಾತುಕತೆಗೆ ತೆರಳಿದ ಯತ್ನಾಳ್, ಕಾಶಪ್ಪ ಮತ್ತಿತರರಿಗೆ ಡಿ.29ರಂದು ಮೀಸಲಾತಿ ನೀಡಿಯೇ ತೀರುವುದಾಗಿ ಜನ್ಮ ಕೊಟ್ಟ ತಾಯಿಯ ಆಣೆ ಮಾಡಿ ನಂಬಿಸಿದಾಗ, ನಾವೂ ಸೇರಿ ಎಲ್ಲರೂ ನಂಬಿದೆವು. ಹೀಗೆ ಸರ್ಕಾರ ಹಂತ ಹಂತವಾಗಿ ಮೀಸಲಾತಿ ಹೋರಾಟ ಹತ್ತಿಕ್ಕುವ ಯತ್ನ ನಡೆಸಿತು. ಎಂದು ಕಿಡಿಕಾರಿದರು.
ಡಿ.29ರಂದು ಸರ್ಕಾರ ಅರೆಬರೆ ತೀರ್ಮಾನ ತೆಗೆದುಕೊಂಡು, 2ಸಿ ಮತ್ತು 2ಡಿ ಘೋಷಿಸಿತು. ಕಾನೂನು ತಜ್ಞರ ಅಭಿಪ್ರಾಯ ಪಡೆದು ಅದನ್ನು ತಿರಸ್ಕರಿಸಲಾಗಿದೆ. ಎರಡು ವರ್ಷಗಳ ಹೋರಾಟದಿಂದ ರೂಪಿಸಿದ ಜನಶಕ್ತಿಯನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಹೋರಾಟ ಮಾಡದೇ ಇದ್ದವರಿಗೂ ಮೀಸಲಾತಿ ನೀಡಿದ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಮಾಡಿದೆ ಎಂದು ಕಿಡಿಕಾರಿದರು.
ಮೀಸಲಾತಿ ಸಿಗದಿದ್ದರೆ ಸಂಘಟನೆಯನ್ನೇ ರಾಷ್ಟ್ರೀಯ ಶಕ್ತಿಯನ್ನಾಗಿಸಿ ಹೋರಾಟ ಮಾಡೋಣ ಎಂದು ಶ್ರೀಗಳು ಕರೆ ನೀಡಿದರು.
ಸಮಾಜದ ಕಾನೂನು ಸಲಹೆಗಾರ ನ್ಯಾಯವಾದಿ ಎಸ್.ವಿ. ಪಾಟೀಲ್ ಮಾತನಾಡಿ, ಸಮಾಜಕ್ಕೆ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿಗಳು ಪ್ರಮಾಣ ಮಾಡಿ ಮಾತು ತಪ್ಪಿದ್ದಾರೆ. ಬೆಳಗಾವಿ ಸತ್ಯಾಗ್ರಹ ವೇಳೆ ತಾಯಿಯ ಮೇಲೆ ಪ್ರಮಾಣ ಮಾಡಿ, ಯತ್ನಾಳ್ ಅವರಿಗೆ ಕೊಟ್ಟ ಮಾತು ತಪ್ಪಿರುವುದು ತಾಯಿಗೇ ದ್ರೋಹ ಮಾಡಿದಂತೆ. 2ಸಿ ಮತ್ತು 2ಡಿ ಅಂತ ವಿಭಾಗಿಸಿದ್ದಾರೆಯೇ ಹೊರತು, ಮೀಸಲಾತಿ ಪ್ರಮಾಣ ತಿಳಿಸಿಯೇ ಇಲ್ಲ. ಸುಪ್ರೀಂ ಕೋರ್ಟ್ ಆದೇಶ ಮೀರಿ ಸರ್ಕಾರ ಮೀಸಲಾತಿ ನೀಡಲಾಗದು.
ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ನಮಗೇ ಇಡ್ಲ್ಯೂಎಸ್ ಮೀಸಲಾತಿಯೂ ಸಿಗುವುದಿಲ್ಲ. ಸಚಿವ ಸಂಪುಟದ ತೀರ್ಮಾನ ಪಂಚಮಸಾಲಿ ಸಮಾಜದ ತಲೆಯ ಮೇಲೆ ಕಲ್ಲು ಹಾಕಿದಂತಾಗಿದೆ. ಪೂಜ್ಯರ ಧರಣಿ ನಡೆಸುವ ತೀರ್ಮಾನವನ್ನು ಎಲ್ಲರೂ ಬೆಂಬಲಿಸಿ, ನಿರಂತರ ಹೋರಾಟಕ್ಕೆ ಮುಂದಾಗೋಣ ಎಂದರು.
ಮಾಜಿ ಮೇಯರ್ ಬಿ.ಜೆ. ಅಜಯ ಕುಮಾರ್ ಮಾತನಾಡಿ, ಪಂಚಮಸಾಲಿ ಸಮಾಜ ಸಂಘಟಿತವಾಗಿದೆ. ಹೋರಾಟಕ್ಕೆ ರಾಜಕೀಯ ಶಕ್ತಿ ತುಂಬಬೇಕಿದೆ. ನಮ್ಮ ಸಮಾಜದಿಂದ ಟಿಕೆಟ್ ಕೇಳುವವರ ಸಂಖ್ಯೆ ಹೆಚ್ವಿರುವುದು ಆಶಾದಾಯಕ ಸಂಗತಿ ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಸರ್ಕಾರ ಪಂಚಮಸಾಲಿ ಸಮಾಜ ನಿರ್ಲಕ್ಷಿಸಿದೆ. ಸಮಾಜವನ್ನು ಬಳಸಿಕೊಂಡು ಮೋಸ ಎಸಗಿದೆ ಎಂದರು.
ಮುಖಂಡರಾದ ಪರಮೇಶ್ವರ ಗೌಡರು ಮಾತನಾಡಿದರು. ಪೈಲ್ವಾನ್ ಮಂಜುನಾಥ ಸ್ವಾಗತಿಸಿದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ದೂಡಾ ಮಾಜಿ ಸದಸ್ಯ ಟಿ. ಶಂಕರಪ್ಪ, ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಗೋಪನಾಳ್, ಮುಖಂಡರಾದ ಕಾರಿಗನೂರು ಕಲ್ಲೇಶಪ್ಪ, ನಾಗರಸನಹಳ್ಳಿ ವಿರೂಪಾಕ್ಷಪ್ಪ, ಶಂಭಣ್ಣ, ಜಯಮ್ಮ, ಮಾಜಿ ಯೋಧ ಚನ್ನಬಸವನ ಗೌಡ, ಹಿರೇಮೇಗಳಗೇರಿ ಚನ್ನಬಸಪ್ಪ ಕೊಳೇನಹಳ್ಳಿ, ಬಿಸಲೇರಿ, ನಾಗರಸನಹಳ್ಳಿ, ಹರಿಹರ ಮತ್ತಿತರ ಭಾಗದ ಮುಖಂಡರು ಇದ್ದರು.