ಮಸ್ಕ್, ಅಂಬಾನಿ ಕನಸುಗಳೇಕಿಲ್ಲ…?
ಪಶ್ಚಿಮ ಬಂಗಾಳದಲ್ಲಿ ಒಂದು ಕಾಲದಲ್ಲಿ ಕಾರ್ಮಿಕ ನಾಯಕರಾಗುವುದೇ ಕನಸಾಗಿತ್ತು. ಕಾರ್ಮಿಕ ನಾಯಕರಾಗುವುದರಿಂದ ರಾಜಕೀಯಕ್ಕೆ ಕಾಲಿಡಬಹುದು. ಉನ್ನತ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆ ಅವರಲ್ಲಿತ್ತು. ಈ ರೀತಿಯ ಸ್ಪರ್ಧೆಗಳು ಕಾರ್ಮಿಕ ನಾಯಕರನ್ನೇನೋ ಹುಟ್ಟು ಹಾಕಿದವು, ಆದರೆ ಉದ್ಯಮಿಗಳನ್ನು ಸೃಷ್ಟಿಸಲಿಲ್ಲ. ಒಂದು ಕಾಲದಲ್ಲಿ ಉದ್ಯಮಗಳ ಬೀಡಾಗಿದ್ದ ಪಶ್ಚಿಮ ಬಂಗಾಳ, ನಂತರದಲ್ಲಿ ತೀವ್ರ ಆರ್ಥಿಕ ಕುಸಿತ ಕಾಣಬೇಕಾಯಿತು.
ಎಲಾನ್ ಮಸ್ಕ್ ಹಾಗೂ ಮುಕೇಶ್ ಅಂಬಾನಿ ರೀತಿಯ ದಿಗ್ಗಜರಾಗುವ ಕನಸುಗಳನ್ನು ಕಾಣುವುದನ್ನು ಬಿಟ್ಟು ಕೇವಲ ಜಂಟಿ ಕಾರ್ಯದರ್ಶಿಯಾಗುವ ಕನಸಿಗೆ ಸೀಮಿತವಾಗಬೇಕೆ ? ಸಮಾಜವೇ ತನ್ನ ಯುವ ಪೀಳಿಗೆಯ ಕನಸುಗಳನ್ನು ಸರ್ಕಾರಿ ಹುದ್ದೆಗೆ ಸೀಮಿತ ಮಾಡಿದಾಗ ಅಂತಹ ಸಮಾಜದಿಂದ ಹೆಚ್ಚಿನ ನಿರೀಕ್ಷೆ ಸಾಧ್ಯವೇ? ಎಂದು ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಪ್ರಶ್ನಿಸಿದ್ದಾರೆ.
ನೀನು ದೊಡ್ಡವನಾದ ಮೇಲೆ ಏನಾಗುತ್ತೀಯ? ಎಂಬ ಪ್ರಶ್ನೆಗೆ ದಶಕಗಳ ಹಿಂದೆ ಡಾಕ್ಟರ್ ಇಲ್ಲವೇ ಇಂಜಿನಿಯರ್ ಎಂಬ ಉತ್ತರ ಸಾಮಾನ್ಯವಾಗಿ ಸಿಗುತ್ತಿತ್ತು. ಈಗ ಅದರ ಸಾಲಿಗೆ ಐಎಎಸ್ ಆಗುತ್ತೇನೆ ಎಂಬ ಉತ್ತರವೂ ಸೇರ್ಪಡೆಯಾಗಿದೆ. ಹೀಗಾಗಿಯೇ ಕಳೆದ ದಶಕದಲ್ಲಿ ಈ ಪರೀಕ್ಷೆಗೆ ಹಾಜರಾಗುವವರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.
ಕಳೆದ 2007ರಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಸಂಖ್ಯೆ 3.33 ಲಕ್ಷದಷ್ಟಿತ್ತು. ಅದು 2018ರಿಂದ ಹತ್ತು ಲಕ್ಷದ ಗಡಿ ದಾಟಿದೆ. ಇಷ್ಟಾದರೂ, 2007ರಲ್ಲಿ ಐನೂರರಷ್ಟು ಅಭ್ಯರ್ಥಿಗಳು ಆಯ್ಕೆಯಾಗಿದ್ದರೆ, ಈಗ ಸಾವಿರದಷ್ಟು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗುತ್ತಿದ್ದಾರೆ. ಪರೀಕ್ಷೆಗೆ ಹಾಜರಾಗುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದರಿಂದ ಸ್ಪರ್ಧೆಯೂ ಏರಿಕೆಯಾಗಿದೆ.
ಆದರೆ, ಈ ಸ್ಪರ್ಧೆಯಿಂದ ಅನಾಹುತಗಳೂ ಹೆಚ್ಚಾಗಿವೆ. ಐಎಎಸ್ ಹುದ್ದೆಗಳನ್ನು ಪಡೆಯಲು ವರ್ಷಗಟ್ಟಲೆ ಬೆವರು ಹರಿಸಬೇಕಿದೆ. ಇದಕ್ಕಾಗಿ ಕೋಚಿಂಗ್ ಕೇಂದ್ರಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಯುವ ಪೀಳಿಗೆ ಈ ಪರೀಕ್ಷೆಗೆ ಶ್ರಮಿಸುವ ಒತ್ತಡವೂ ಏರುತ್ತಿದೆ.
ದೆಹಲಿಯಲ್ಲಿ ಐಎಎಸ್ ಕೋಚಿಂಗ್ ಕೇಂದ್ರ ಒಂದರಲ್ಲಿ ನಡೆದ ಅವಘಡದ ಕಾರಣದಿಂದಾಗಿ ಕೋಚಿಂಗ್ ಕೇಂದ್ರಗಳ ಹಾವಳಿ ಕುರಿತು ತಕ್ಕ ಮಟ್ಟಿಗೆ ಚರ್ಚೆ ಆರಂಭವಾಗಿದೆ. ಆದರೆ ಚರ್ಚೆಯ ದಿಕ್ಕು ದೆಸೆ ಮಾತ್ರ ಕೋಚಿಂಗ್ ಕೇಂದ್ರಗಳ ಸುತ್ತ ಸೀಮಿತವಾಗಿದೆ.
ಮೂಲ ಸಮಸ್ಯೆ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದೆ. ಈ ಬಗ್ಗೆ ಅಧಿಕಾರಸ್ಥರು ಗಮನ ಹರಿಸುತ್ತಿಲ್ಲ ಎನ್ನಿಸುತ್ತಿದೆ. ರಾಜಸ್ಥಾನದ ಕೋಟಾ ಮುಂತಾದ ಕೋಚಿಂಗ್ ತಾಣಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆಯಾಗಿತ್ತು. ಸರ್ಕಾರ ಒಂದಿಷ್ಟು ಮಾರ್ಗಸೂಚಿಗಳನ್ನು ಪ್ರಕಟಿಸಿ ಈ ವಿಷಯಕ್ಕೆ ತೆರೆ ಎಳೆದಿತ್ತು. ಈ ಬಾರಿಯೂ ಐಎಎಸ್ ಕೋಚಿಂಗ್ ಕೇಂದ್ರಗಳ ವಿಷಯದಲ್ಲಿ ಇದೇ ಆಗುವುದರಲ್ಲಿ ಅನುಮಾನಗಳಿಲ್ಲ.
Click here to change this text
ಐಎಎಸ್ ನಂತರ “ಸಣ್ಣ” ಹುದ್ದೆಗಳ ಕನಸಿನ ಬಗ್ಗೆ ಸನ್ಯಾಲ್ ಎಚ್ಚರಿಕೆಯ ಮಾತುಗಳ ಚರ್ಚೆ ಆಗಲಿದೆಯೇ..?
ಕೇವಲ ಐಎಎಸ್ ಪರೀಕ್ಷೆಯಷ್ಟೇ ಅಲ್ಲದೆ, ವಿವಿಧ ಪರೀಕ್ಷೆಗಳಿಗಾಗಿ ಕೋಚಿಂಗ್ ಕೇಂದ್ರಗಳ ಹಾವಳಿ ಹೆಚ್ಚಾಗುತ್ತಿದೆ. ಇಂಜಿನಿಯರಿಂಗ್, ವೈದ್ಯಕೀಯ ಪರೀಕ್ಷೆಗಳಿಂದ ಹಿಡಿದು ಸೈನ್ಯದ ಸೇರ್ಪಡೆವರೆಗೆ ಕೋಚಿಂಗ್ ಕ್ಲಾಸ್ಗಳು ಆರಂಭವಾಗಿವೆ. ಇವುಗಳಿಗೆ ಸಾಕಷ್ಟು ಹಣ ಹಾಗೂ ಅದಕ್ಕೂ ಮೀರಿ ಯುವ ಪೀಳಿಗೆಯ ಅಮೂಲ್ಯ ಆಯುಷ್ಯವನ್ನು ಅರ್ಪಿಸಬೇಕಿದೆ. ಲಾಂಗ್ ನೀಟ್, ಲಾಂಗ್ ಜೆಇಇ, ಲಾಂಗ್ ಯುಜಿ – ಪಿಜಿ ಎನ್ನುತ್ತಾ ವಿದ್ಯಾರ್ಥಿಗಳ ಆಯುಷ್ಯ ಸವೆಯುತ್ತಿದೆ.
ಕೇಂದ್ರ ಸರ್ಕಾರ ಯು.ಪಿ.ಎಸ್.ಸಿ. ಪರೀಕ್ಷೆಯ ಮೂಲಕ ಐಎಎಸ್, ಐಪಿಎಸ್, ಐಆರ್ಎಸ್, ಐಎಫ್ಎಸ್ ಮುಂತಾದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತದೆ. ಆದರೆ, ಐಎಎಸ್ ಹುದ್ದೆಯ ಖದರ್ ಯಾವ ರೀತಿ ಇದೆ ಎಂದರೆ ಯುಪಿಎಸ್ಸಿ ಪರೀಕ್ಷೆಯೂ ಐಎಎಸ್ ಪರೀಕ್ಷೆ ಎಂದೇ ಹೆಸರಾಗಿದೆ. ಐಆರ್ಎಸ್ ಮುಂತಾದ ಹುದ್ದೆಗಳಿಗೆ ಆಯ್ಕೆಯಾದವರೂ ಸಮಾಧಾನವಿಲ್ಲದೇ ಐಎಎಸ್ ಆಗಲು ಮತ್ತೆ ಪರೀಕ್ಷೆ ಬರೆಯುವುದೂ ಕಂಡು ಬಂದಿದೆ.
ಮಹಾರಾಷ್ಟ್ರದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ಅಡ್ಡದಾರಿಯಿಂದ ಉತ್ತೀರ್ಣರಾದ ಬಗ್ಗೆ ಇತ್ತೀಚೆಗೆ ತಕ್ಕ ಮಟ್ಟಿಗೆ ಚರ್ಚೆ ನಡೆದಿತ್ತು. ಇದೇ ರೀತಿ ಹಲವರು ಉತ್ತೀರ್ಣರಾದ ಬಗ್ಗೆ ಶಂಕೆಯೂ ಉಂಟಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆಗೆ ನಡೆಯುವ ನೀಟ್ – ಯುಜಿ ಅಕ್ರಮಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾದ ಗಂಭೀರ ಕ್ರಮಗಳು ಐಎಎಸ್ ಪರೀಕ್ಷೆಯ ವಿಷಯದಲ್ಲಿ ಕಂಡುಬರಲಿಲ್ಲ. ಈಗಲೂ ಕೋಚಿಂಗ್ ಕೇಂದ್ರಗಳ ಸುತ್ತಕ್ಕೆ ಚರ್ಚೆ ಸೀಮಿತವಾಗಿದೆ.
ಈ ವಿಷಯ ಕುರಿತಂತೆ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಅವರು ಕೆಲ ತಿಂಗಳ ಹಿಂದೆ ಗಂಭೀರ ಪ್ರಶ್ನೆ ಮುಂದಿಟ್ಟಿದ್ದರು. ಭಾರತದ ಯುವ ಪೀಳಿಗೆ ಎಲಾನ್ ಮಸ್ಕ್, ಮುಕೇಶ್ ಅಂಬಾನಿ ಮುಂತಾದ ಬೃಹತ್ ಉದ್ಯಮಿಗಳಂತೆ ನಾವಾಗಬೇಕು ಎಂಬ ಆದರ್ಶ ಹೊಂದಿಲ್ಲ. ಅವರ ಕನಸುಗಳು ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗೆ ಸೀಮಿತವಾಗಿವೆ ಎಂದು ವಿಷಾದಿಸಿದ್ದರು.
ಐಎಎಸ್ ರೀತಿಯ `ಸಣ್ಣ’ ಹುದ್ದೆಗಳಿಗೆ ಕನಸು ಕಾಣಬೇಡಿ, ದೊಡ್ಡ ಮಟ್ಟದ ಆಕಾಂಕ್ಷೆ ಹೊಂದಿ ಎಂದು ಸನ್ಯಾಲ್ ಸಲಹೆ ನೀಡಿದ್ದರು. ಸಮಾಜವು ಸಣ್ಣ ಕನಸುಗಳಿಗೆ ಸೀಮಿತವಾದರೆ ದೊಡ್ಡ ಸಮಸ್ಯೆಗಳು ಎದುರಾಗುತ್ತವೆ ಎಂದೂ ಅವರು ಎಚ್ಚರಿಸಿದ್ದರು.
ಬಿಹಾರದಲ್ಲಿ ಐಎಎಸ್ ಅಧಿಕಾರಿಗಳಾಗುವ ಗೀಳು ಹೆಚ್ಚಾಗಿದೆ. ಪಕ್ಕದ ಪಶ್ಚಿಮ ಬಂಗಾಳದಲ್ಲಿ ಕಾರ್ಮಿಕ ನಾಯಕರಾಗುವ ಗೀಳು ಹೆಚ್ಚಾಗಿತ್ತು. ಉದ್ಯಮಿ, ಕ್ರೀಡಾಪಟು, ಚಿತ್ರ ತಾರೆ, ಕಲಾವಿದ ಮುಂತಾದ ಕನಸುಗಳನ್ನು ಈ ರಾಜ್ಯದಲ್ಲಿರುವವರು ಕಡೆಗಣಿಸಿದ್ದರು. ಹೀಗಾಗಿ ಬಿಹಾರದಲ್ಲಿ ಹೆಚ್ಚಿನ ಸಂಖ್ಯೆಯ ಐಎಎಸ್ ಅಧಿಕಾರಿಗಳು ಬಂದರೂ, ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕ ನಾಯಕರು ಉದ್ಭವಿಸಿದರೂ ರಾಜ್ಯಗಳಿಗೆ ಬಡತನದ ಬೇಗೆ ತಪ್ಪಲಿಲ್ಲ ಎಂದು ಸನ್ಯಾಲ್ ಪ್ರತಿಪಾದಿಸಿದ್ದರು.
ಐಎಎಸ್ ಪರೀಕ್ಷೆಯನ್ನು ಒಂದೆರಡು ಬಾರಿ ಬರೆದು ಅಲ್ಲಿಗೆ ನಿಲ್ಲಿಸಿದ್ದರೆ ಇರುತ್ತಿರಲಿಲ್ಲ. ಆದರೆ ಲಕ್ಷಾಂತರ ಯುವಕರು ತಮ್ಮ ಉತ್ತಮ ಆಯುಷ್ಯವನ್ನು ಪರೀಕ್ಷಾ ಸಿದ್ಧತೆಗೆ ಮೀಸಲಿಡುತ್ತಿದ್ದಾರೆ. 500 ರಿಂದ ಸಾವಿರ ಹುದ್ದೆಗಳನ್ನು ಪಡೆಯಲು ಲಕ್ಷಾಂತರ ಯುವಕರು ತಮ್ಮ ಸಮಯ ಪೋಲು ಮಾಡುತ್ತಿದ್ದಾರೆ. ಇದೇ ಸಮಯವನ್ನೇ ಕ್ರೀಡೆ, ಚಲನಚಿತ್ರ, ಸಂಗೀತ, ಸಂಸ್ಕೃತಿ ಮುಂತಾದ ವಲಯಗಳಲ್ಲಿ ತೊಡಗಿಸಿದರೆ ಸಾಧನೆ ಸಾಧ್ಯವಿತ್ತು ಎಂದು ಎಂದು ಸನ್ಯಾಲ್ ಹೇಳಿದ್ದರು.
ಈ ಬಗ್ಗೆ ಗಂಭೀರವಾಗಿ ಚರ್ಚೆಗಳು ನಡೆಯಬೇಕಿದೆ. ಇದು ಕೇವಲ ಕೆಲವು ಜನರ ವಿದ್ಯಾರ್ಥಿಗಳ ಕೆಲವು ಪೋಷಕರಿಗೆ ಸಂಬಂಧಿಸಿದ ಪ್ರಶ್ನೆ ಅಲ್ಲ. ಇದು ಮುಂದಿನ ಸಮಾಜ ಹೀಗಿರಬೇಕು ಎಂದು ಚಿಂತನೆ ಮಾಡುವ ವಿಷಯವಾಗಿದೆ. ಪೋಷಕರು ತಾವು ಜೀವನಪೂರ್ತಿ ಕೂಡಿಟ್ಟ ಹಣವನ್ನು ಮಕ್ಕಳ ನಿಜವಾದ ಏಳಿಗೆಗೆ ಯಾವ ರೀತಿ ಬಳಸಲು ಸಾಧ್ಯ ಯೋಚಿಸಬೇಕಿದೆ. ಅನಾರೋಗ್ಯಕರ ಕೋಚಿಂಗ್ ಹಾಗೂ ಅನಾರೋಗ್ಯಕರ ಕನಸುಗಳ ಕಾರಣದಿಂದ ಮುಂದಿನ ಪೀಳಿಗೆಯ ಮೇಲೆ ಕರಾಳ ಪರಿಣಾಮವಾಗುವುದು ಖಂಡಿತಾ ದೇಶದ ಹಿತದಲ್ಲಿಲ್ಲ.
ಎ.ಜಿ. ಮುರಳಿ ಮೋಹನ್
ದಾವಣಗೆರೆ.