ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತರಳಬಾಳು ಶ್ರೀ
‘ಜಗತ್ತಿನ ಧರ್ಮಗಳೆಲ್ಲ ಹೂವುಗಳಿದ್ದಂತೆ. ಪ್ರತಿಯೊಂದು ಹೂವಿಗೂ ತನ್ನದೇ ಆದ ಸೌಂದರ್ಯವಿದೆ. ಅದರಂತೆ ಪ್ರತಿ ಧರ್ಮಕ್ಕೂ ತನ್ನದೇ ತಾತ್ವಿಕತೆಯಿದೆ’ ಎಂದು ವಾಷಿಂಗ್ಟನ್ ನ ದಿ. ವಿಮಲಾ ಚನ್ನಬಸಪ್ಪನವರ ಇಂಗ್ಲಿಷ್ ಕವಿತೆಯ ಭಾವಾನುವಾದ ಕವಿತೆಯನ್ನು ವಾಚಿಸಿ ತರಳಬಾಳು ಶ್ರೀಗಳು ಗಮನ ಸೆಳೆದರು
ಹಾವೇರಿ, ಜ.6- ಧರ್ಮ, ಪ್ರಾಂತ, ಭಾಷೆಗಳ ವಿಷಯಗಳ ಬಗ್ಗೆ ಪ್ರತಿಯೊಬ್ಬರಿಗೂ ಸೆಳೆತವಿರುತ್ತದೆ. ಪ್ರತಿ ತಾಯಿಗೂ ತಮ್ಮ ಮಕ್ಕಳ ಮೇಲೆ ಪ್ರೀತಿ ಇರುವಂತೆ ಆಯಾಯ ಧರ್ಮ, ಪ್ರಾಂತ, ಭಾಷೆಗಳ ಬಗ್ಗೆ ಅದರ ಅನುಯಾಯಿಗಳಿಗೆ ಪ್ರೀತಿ ಇರುತ್ತದೆ. ಆದರೆ ಇನ್ನೊಬ್ಬರಿಗೆ ನೋವಾಗದಂತೆ ಬದುಕುವುದೇ ಸಾಮರಸ್ಯದ ಬದುಕು ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅಖಿಲ ಭಾರತ 86ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ನಡೆದ ‘ಸಾಮರಸ್ಯ ಭಾವ ಕನ್ನಡ ಜೀವ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಮ ಮನೋಹರ ಲೋಹಿಯಾ ಅವರು ‘ರಾಜಕೀಯ ಅಲ್ಪಾವಧಿ ಧರ್ಮವಾದರೆ, ಧರ್ಮ ದೀರ್ಘಕಾಲದ ರಾಜಕೀಯ’ ಎಂದು ವಿಶ್ಲೇಷಿಸಿದ್ದಾರೆ. ಧರ್ಮ ಎಂದರೆ ಇಹದ ಅಭ್ಯುದಯ ಮತ್ತು ಪರದ ಶ್ರೇಯಸ್ಸನ್ನು ಬಯಸುವುದೇ ಆಗಿದೆ.ಧರ್ಮದ ನಿಜವಾದ ವ್ಯಾಖ್ಯಾನದಲ್ಲಿ ಗೊಂದಲಗಳಿಲ್ಲ. ಆದರೆ ಸರಿಯಾಗಿ ಅರ್ಥಮಾಡಿಕೊಳ್ಳದಿರುವುದರಿಂದ ಜಗತ್ತಿಗೆ ಮತ ಧರ್ಮ ಗಳು ದೊಡ್ಡ ಕಂಟಕಗಳಾಗಿವೆ ಎಂದು ಹೇಳಿದರು.
ಬದುಕಿನಲ್ಲಿ ಸಾಮರಸ್ಯದ ಭಾವ ನೆಲಗೊಳ್ಳಬೇಕೆಂದರೆ ಆತ್ಮದ ಶುದ್ಧಿ ಮುಖ್ಯ. ನಿತ್ಯ ಜೀವನದಲ್ಲಿ ಕೆಲಸ ನಿರ್ವಹಿಸುವಾಗ ಸರಿ ತಪ್ಪುಗಳ ಬಗ್ಗೆ ಶುದ್ಧ ಆತ್ಮದಿಂದ ಪರಾಮರ್ಶೆ ಮಾಡಿಕೊ ಳ್ಳಬೇಕು. ಆಗ ಅಧರ್ಮದ ಕಾರ್ಯ ಗಳು ಸಂಭವಿಸುವುದಿಲ್ಲ ಎಂದರು.
ಗೋಷ್ಠಿಯ ಆಶಯ ಭಾಷಣವನ್ನು ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿಯವರು ಮಾತನಾಡಿ, ಕನ್ನಡ ನೆಲ ಸಾಮರಸ್ಯದ ಬೀಡು. 12 ನೇ ಶತಮಾನದಲ್ಲಿ ಬಸವಣ್ಣನವರ ವಚನಗ ಳಲ್ಲಿಯೇ ಸಾಮರಸ್ಯದ ಎಳೆಗಳಿವೆ. ಷರೀಫ, ಸರ್ವಜ್ಞ, ಕನಕರಂತಹ ದಾರ್ಶ ನಿಕರು ಕರ್ನಾಟಕದ ಸಮರಸ ಬದುಕಿನ ಶಿಖರಗಳು ಎಂದು ಬಣ್ಣಿಸಿದರು.
ಡಾ. ನಾಗರಾಜ ದ್ಯಾಮನಕೊಪ್ಪ ಸರ್ವಜ್ಞರ ಸಾಮಾಜಿಕ ದೃಷ್ಟಿ, ಡಾ. ವೈ ಎಂ ಯಾಕೊಳ್ಳಿಯವರು ಕನಕರಲ್ಲಿ ಭಾವೈಕ್ಯತಾ ದೃಷ್ಟಿ ಮತ್ತು ಡಾ. ಅಡಿವೆಪ್ಪ ವಾಲಿಯವರು ಷರೀಫರ ಸಾಮರಸ್ಯ ದೃಷ್ಟಿ ಎಂಬ ವಿಚಾರಗಳನ್ನು ಕುರಿತು ಮಾತನಾಡಿದರು.