86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ದೊಡ್ಡ ರಂಗೇಗೌಡ
ಜಿಲ್ಲಾ ಕಸಾಪದಿಂದ ದೊಡ್ಡ ರಂಗೇಗೌಡರಿಗೆ ಆತ್ಮೀಯ ಸನ್ಮಾನ
ಕುವೆಂಪು ಭವನದಲ್ಲಿ ಬೆಣ್ಣೆ ದೋಸೆ ಸವಿದ ಹಿರಿಯ ಕವಿ, ಚಿಂತಕ
ದಾವಣಗೆರೆ, ಜ. 5- ಕನ್ನಡ ಧೀಮಂತ ಭಾಷೆ, ಮಧುರವಾದ ಭಾಷೆ, ಮಾನವೀಯ ನೆಲೆಯುಳ್ಳ ಭಾಷೆ ಎಂದು ಹಿರಿಯ ಕವಿ ಡಾ. ದೊಡ್ಡ ರಂಗೇಗೌಡ ಹೇಳಿದರು.
ಹಾವೇರಿಯಲ್ಲಿ ನಾಳೆಯಿಂದ ಆರಂಭವಾಗಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲಿರುವ ಅವರು, ಹಾವೇರಿಗೆ ಹೋಗುವ ಮಾರ್ಗದಲ್ಲಿ ನಗರದ ಕುವೆಂಪು ಕನ್ನಡ ಭವನಕ್ಕೆ ಆಗಮಿಸಿ ಜಿಲ್ಲಾ ಕಸಾಪ ಹಾಗೂ ಅಭಿಮಾನಿಗಳ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಇಚ್ಛಾಶಕ್ತಿ ಇದ್ದರೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರವನ್ನು ಕನ್ನಡದಲ್ಲಿ ಹೇಳಲು ಸಾಧ್ಯವಿದೆ. ವೈದ್ಯಕೀಯ ಶಾಸ್ತ್ರವನ್ನು ಕನ್ನಡದಲ್ಲಿ ಹೇಳಿದ ಮಹನೀಯ ರಿದ್ದಾರೆ. ಯೋಮ ವಿಜ್ಞಾನವನ್ನು ಕನ್ನಡದಲ್ಲಿ ಹೇಳಬಲ್ಲ ಬೇಕಾದಷ್ಟು ಕನ್ನಡಿಗರಿದ್ದಾರೆ. ಕನ್ನಡದಲ್ಲಿ ಸುಲಿದ ಬಾಳೆಯ ಹಣ್ಣಿನಂತೆ ಹೇಳುವ ವಿದ್ವಾಂಸರು ನಮ್ಮಲ್ಲಿದ್ದಾರೆ ಎಂದು ಹೇಳಿದರು.
ಕನ್ನಡಿಗರು ಯಾವತ್ತೂ ಎದೆ ಸೆಟೆಸಿ ಮುಂದೆ ಹೋಗಬೇಕು. ನಾವು ಪರಂಪರಾ ನುಗತವಾದ ಎಲ್ಲಾ ಪರಾಕ್ರಮವನ್ನು, ತೇಜ ಸ್ಸನ್ನು ಪಡೆದುಕೊಂಡಿದ್ದೇವೆ ಎಂದರು.
ಕನ್ನಡ ನಾಡಿನ ಅಂಗುಲಂಗುಲ ನೆಲವನ್ನು ಕೂಡ ನಾವು ಮರಾಠಿಗರಿಗೆ ಬಿಟ್ಟು ಕೊಡುವುದಿಲ್ಲ ಎಂಬುದು ನಮ್ಮ ಕಾರ್ಯತಂತ್ರವಾಗಬೇಕು. ಇದಕ್ಕೆ ಬೇಕಾ ದಷ್ಟು ಆಧಾರಗಳಿವೆ. ನೀವೆಲ್ಲ ಮಹಾಜನ್ ವರದಿಯನ್ನು ಓದಬೇಕು. ಮಹಾಜನ್ ವರದಿ ಹೇಳುವ ಪ್ರಕಾರ ಬೆಳಗಾವಿ ಕರ್ನಾಟ ಕಕ್ಕೆ ಸೇರಬೇಕು ಎಂದಿದೆ ಎಂದರು.
ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಕಿರುಕುಳಗಳು ಪ್ರಾರಂಭವಾಗಿವೆ. ಕೇರಳದ ಶಾಲೆಗಳಲ್ಲಿ ಕನ್ನಡದ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡುತ್ತಿಲ್ಲ. ಅಲ್ಲಿ ಕನ್ನಡದ ಅಧ್ಯಾಪಕರೇ ಇಲ್ಲ. ಕನ್ನಡದ ಮಕ್ಕಳಿಗೆ ಅಲ್ಲಿ ವಿದ್ಯಾಭ್ಯಾಸವಿಲ್ಲದೆ ಸೊರಗಿ ಹೋಗು ತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪನವರು ಜಿಲ್ಲಾಡಳಿತ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ದೊಡ್ಡರಂಗೇಗೌಡ ಅವರನ್ನು ಸ್ವಾಗತಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಮದೇವಪ್ಪ, ಹಿರಿಯ ಸಾಹಿತಿಗಳು, ಚಿಂತಕರೂ ಆದ ಡಾ.ದೊಡ್ಡ ರಂಗೇಗೌಡರು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಜಿ. ರುದ್ರಯ್ಯ, ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಬಿ. ದಿಳ್ಳಪ್ಪ, ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಸಂಘಟನಾ ಕಾರ್ಯದರ್ಶಿ ಸಿ.ಜಿ. ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಬಾ.ಮ. ಬಸವರಾಜಯ್ಯ, ಹೆಚ್.ಬಿ. ಮಂಜುನಾಥ್, ಕೆ.ಬಿ. ಕೊಟ್ರೇಶ್, ಜಿಲ್ಲಾ ಪದಾಧಿಕಾರಿಗಳಾದ ರುದ್ರಾಕ್ಷಿ ಬಾಯಿ, ಭೈರೇಶ್, ಮಧುಕುಮಾರ್ ಎಲ್.ಜಿ, ಪತ್ರಕರ್ತ ರವಿ ಬಾಬು, ವಿವೇಕ್, ಸಿಂಗಾಪುರದ ಪರಮೇಶ್ವರಪ್ಪ, ಮಾರುತಿ ಸಂತೆಬೆನ್ನೂರು ಇತರರಿದ್ದರು.