ಮಾನ್ಯರೇ,
ಮದ್ಯ ವ್ಯಸನಿ ಅಲ್ಲದ ಆಟೋ ಚಾಲಕ ಅಥವಾ ಕೂಲಿ ಕಾರ್ಮಿಕನು ಕೂಡ ಉತ್ತಮ ವರ. ಅಂತಹವರಿಗೆ ಹೆಣ್ಣಿನ ಪೋಷಕರು ಧಾರಾಳವಾಗಿ ಧಾರೆ ಎರೆದು ಕೊಡಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಅವರ ಅಭಿಪ್ರಾಯ ಸರಿಯಾಗಿಯೇ ಇದೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಪೋಷಕರು ಧನ ದಾಹಕ್ಕೆ ಬಿದ್ದಂತೆ ಹುಡುಗ ಸರ್ಕಾರಿ ನೌಕರನೇ ಆಗಿರಬೇಕು, ಕೋಟ್ಯಾಧಿಪತಿಯೇ ಆಗಿರಬೇಕು ಎಂಬ ಮನಸ್ಥಿತಿಗಳಿಂದ ರೈತರು ಮತ್ತು ಮಧ್ಯಮ ವರ್ಗದ ಯುವಕರಿಗೆ ಹೆಣ್ಣುಗಳೇ ಸಿಗುತ್ತಿಲ್ಲ ಎಂಬುದೇ ದುರಂತ. ಕೆಲವೊಮ್ಮೆ ಅತಿ ಆಸೆಗೆ ಬಿದ್ದು ದುಶ್ಚಟಗಳ ಹಿನ್ನೆಲೆ ಇರುವ ಹುಡುಗನಿಗೆ ಕೊಟ್ಟು ಸಾಯುವವರೆಗೂ ಕಣ್ಣೀರಲ್ಲೇ ಕೈ ತೊಳೆಯುತ್ತಾರೆ. ಹುಡುಗಿ ಪೋಷಕರ ಅನೇಕ ಷರತ್ತುಗಳಿಂದ ಇಂದು ಲಕ್ಷಾಂತರ ಸಂಖ್ಯೆಯ ಯುವಕರು ಅವಿವಾಹಿತರಾಗಿಯೇ ಪರದಾಡುತ್ತಿದ್ದಾರೆ.
ನೆಮ್ಮದಿಗೆ ಹಣಕ್ಕಿಂತಲೂ ಹೆಚ್ಚು ಬೆಲೆ ಇದೆ. ನೆಮ್ಮದಿಯನ್ನು ಹಣ ಕೊಟ್ಟು ಕೊಳ್ಳಲಾಗದು. ಹುಡುಗ ರೈತ ಅಥವಾ ಬಡವನಾದರೂ ಪರವಾಗಿಲ್ಲ ಯಾವುದೇ ದುಶ್ಚಟವಿಲ್ಲದ ಹಿನ್ನೆಲೆ ನೋಡಿಕೊಂಡು ಹೆಣ್ಣನ್ನು ಧಾರೆ ಎರೆದು ಕೊಡುವುದೇ ಉತ್ತಮ.
ಮುರುಗೇಶ.ಡಿ., ದಾವಣಗೆರೆ.