ಮಾನ್ಯರೇ,
ಇಡೀ ಆಂಜನೇಯ ಬಡಾವಣೆ ಕಸದ ಗೂಡಾಗಿದೆ. ಎಲ್ಲಾ ರಸ್ತೆಗಳಲ್ಲೂ, ಖಾಲಿ ಇರುವ ಸೈಟ್ಗಳಲ್ಲೂ, ಪಾರ್ಕ್ ನಲ್ಲೂ ಕಸದ ರಾಶಿ ಬಿದ್ದಿದೆ. ಅಂಗಡಿಗಳ ಹತ್ತಿರ, ವಾಚನಾಲಯದ ಬಳಿ, ದೇವಸ್ಥಾನದ ಹತ್ತಿರವೂ ಕಸ ಎಂದರೆ ಕಸ. ಮೊದಲಾದರೆ ಪ್ರತಿದಿನ ಕೈಗಾಡಿ ಬರುತ್ತಿತ್ತು. ಈಗ ಟ್ರ್ಯಾಕ್ಟರ್ ದಿನ ಬಿಟ್ಟು ದಿನ ಬರುತ್ತಿದೆ. ಜನ ಕಸವನ್ನು ಮನೆಯಲ್ಲಿ ಇಟ್ಟು ಕೊಳ್ಳದೆ ಬೀದಿಯಲ್ಲಿ, ಖಾಲಿ ಸೈಟ್ ನಲ್ಲಿ ಬಿಸಾಕುತ್ತಾರೆ. ಖಾಲಿ ಬಾಟಲಿಗಳನ್ನು ರಾತ್ರೋರಾತ್ರಿ ತಂದು ಎಸೆದಿರುತ್ತಾರೆ. ಪ್ಲಾಸ್ಟಿಕ್ ಕವರ್ ಗಳು, ಚಿಂದಿ ಬಟ್ಟೆಗಳು, ಗುಟ್ಕಾ ಪಾಕೆಟ್ ಗಳು, ಸಿಗರೇಟ್ ತುಂಡುಗಳು, ಹಾಲಿನ ಪಾಕೆಟ್ ಗಳು, ತಿಂಡಿ ತಿಂದು ಬಿಸಾಕಿರುವ ಪೇಪರ್ ಪ್ಲೇಟ್ಗಳು, ಕಾಫಿ ಟೀ ಪೇಪರ್ ಕಪ್ಗಳು.,., ಒಂದೇ, ಎರಡೇ!!
ರಾಶಿ ರಾಶಿ ಕಸವು ಎಲ್ಲಾ ರಸ್ತೆಗಳಲ್ಲಿ ಕಾಣುತ್ತದೆ. ಹಂದಿಗಳ ಹಾವಳಿಯಂತೂ ಹೇಳುತೀರದು. ಖಾಲಿ ಸೈಟುಗಳು ಕಸದ ತಿಪ್ಪೆ ಗುಂಡಿಗಳಾಗಿವೆ. ಗಾಳಿಗೆ ಹಾರುತ್ತಾ ರಸ್ತೆಗೆ ಬರುತ್ತವೆ. ಈ ಸಮಸ್ಯೆಯನ್ನು ಯಾರಿಗೆ ಹೇಳಬೇಕು? ಕಸವನ್ನು ಸಾಗಿಸುವ ಜವಾಬ್ದಾರಿ ಯಾರದು? ನಮ್ಮ ಬಡಾವಣೆಯ ಕಾರ್ಪೊರೇಟರ್ ಈ ಕಡೆ ತಿರುಗಿಯೂ ನೋಡಿಲ್ಲ. ಸಂಬಂಧ ಪಟ್ಟವರಲ್ಲಿ ನನ್ನದೊಂದು ವಿನಂತಿ. ರಸ್ತೆಯ ಇಕ್ಕೆಲಗಳಲ್ಲಿ ಕಸದ ಬುಟ್ಟಿಗಳನ್ನು ಇಟ್ಟಿರಬೇಕು. ಸಾರ್ವಜನಿಕರು ಅಲ್ಲಿಯೇ ಕಸ ಹಾಕಬೇಕು. ಅಂಗಡಿಗಳ ಬಳಿ ಕಸದ ಬುಟ್ಟಿ ಇಡಲು ಮಾಲೀಕರಿಗೆ ಹೇಳಬೇಕು. ಮನೆ ಮನೆ ಕಸ ಒಯ್ಯುವ ಹಾಗೆ ಅಲ್ಲಿನ ಕಸವನ್ನೂ ಒಯ್ಯುವ ವ್ಯವಸ್ಥೆ ಮಾಡಬೇಕು.
– ಮಮತಾ ನಾಗರಾಜ್, ಆಂಜನೇಯ ಬಡಾವಣೆ, ದಾವಣಗೆರೆ.