ವೈಚಾರಿಕತೆ-ವೈಜ್ಞಾನಿಕ ಮನೋಧರ್ಮ ನಾಣ್ಯದ ಎರಡು ಮುಖಗಳು ಎಂದು ನಂಬಿದ್ದ ಕುವೆಂಪು

ವೈಚಾರಿಕತೆ-ವೈಜ್ಞಾನಿಕ ಮನೋಧರ್ಮ ನಾಣ್ಯದ ಎರಡು ಮುಖಗಳು ಎಂದು ನಂಬಿದ್ದ ಕುವೆಂಪು

ವಿಶ್ರಾಂತ ಪ್ರಾಚಾರ್ಯ  ಮಲ್ಲಿಕಾರ್ಜುನ ಕಲಮರಳ್ಳಿ 

ದಾವಣಗೆರೆ, ಡಿ. 29- ಕನ್ನಡ ಜಾಗೃತಿಯ ಜೊತೆ ಜೊತೆಯಲ್ಲಿಯೇ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಧರ್ಮ ಎರಡನ್ನೂ ಒಟ್ಟಿಗೆ ತೆಗುದುಕೊಂಡು ಹೋದ ಮಹಾನುಭಾವ ರಾಷ್ಟ್ರಕವಿ ಕುವೆಂಪು ಎಂದು ಸಾಹಿತಿ, ವಿಶ್ರಾಂತ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಕಲಮರಳ್ಳಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ವಿಶ್ವಮಾನವ ದಿನಾಚರಣೆ ಹಾಗೂ ಹೆಚ್.ಎನ್. ಶಿವಕುಮಾರ್ ಅವರ `ಮೌನವಾಗದಿರು’ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ `ಕುವೆಂಪು ಅವರ ವೈಚಾರಿಕ ನಿಲುವುಗಳು’ ಕುರಿತು ಅವರು ಉಪನ್ಯಾಸ ನೀಡಿದರು.

ಅಧ್ಯಾತ್ಮವನ್ನು ವಿಜ್ಞಾನದ ನೆಲೆಗಟ್ಟಿನಲ್ಲಿ ವೈಚಾರಿಕತೆಯ ಬೆಳಕಿನಲ್ಲಿ ಸಾಗಿಸಬೇಕೆಂಬುದೇ ಕುವೆಂಪು ಅವರ ಸಂಕಲ್ಪವಾಗಿತ್ತು. ಆ ಸಂಕಲ್ಪವನ್ನು ಕಾರ್ಯರೂಪಕ್ಕಿಳಿಸಿದ ಮಹಾನ್ ಚೇತನರಾಗಿ ಕುವೆಂಪು ರೂಪುಗೊಂಡಿದ್ದರು ಎಂದು ಹೇಳಿದರು.

ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಧರ್ಮಗಳು ಒಂದೇ ನಾಣ್ಯದ ಎರಡು ಮುಖಗಳು  ಎಂದು ಕುವೆಂಪು ನಂಬಿಕೊಂಡಿದ್ದರು. ರಾಷ್ಟ್ರದ ಅಧೋಗತಿಗೆ ಸಾಮಾಜಿಕ ಅನ್ಯಾಯ ಹಾಗೂ ಧಾರ್ಮಿಕ ವಂಚನೆ ಪ್ರಬಲ ಕಾರಣ ಎಂದು ಅವರು ಪ್ರಬಲವಾಗಿ ಪ್ರತಿಪಾದಿಸಿದ್ದರು. ಹೀಗಾಗಿ ಅದರ ವಿರುದ್ಧ ಪ್ರಬಲ ಹೋರಾಟ ನಡೆಸಿದ್ದರು. ಎಲ್ಲಾ ಧರ್ಮಗಳಲ್ಲಿರುವ ಮೌಢ್ಯಗಳನ್ನು ಖಂಡಿಸುತ್ತಿದ್ದರು ಎಂದು ಹೇಳಿದರು.

ಕರ್ನಾಟಕದ ಕನ್ನಡ ಪ್ರಜ್ಞೆಗೆ ಕುವೆಂಪು ಅವರು ಸಾಕ್ಷಿಯಾಗಿದ್ದರು. ಕನ್ನಡಕ್ಕೆ ಕುತ್ತು ಬಂದಾಗ ಮೊದಲು ದನಿ ಎತ್ತುತ್ತಿದ್ದವರು ಕುವೆಂಪು. ವ್ಯಕ್ತಿಯ ಜೀವನ ಸ್ಥಾವರವಾಗಿರಬಾರದು, ಧರ್ಮ ಮತ್ತು ಮತಗಳೂ ಸಹ ಜಡತ್ವದಿಂದ ಸ್ಥಾವರವಾಗಿರಬಾರದು, ಚೈತನ್ಯಶೀಲತೆಯಿಂದ ಕೂಡಿರಬೇಕು ಎಂಬುದು ಅವರ ಕಲ್ಪನೆ ಮತ್ತು ಸಂಕಲ್ಪವಾಗಿತ್ತು. ಚಲನ ಶೀಲತೆಯೇ ಬದುಕಿನ ಜೀವಾಳ ಎಂದು ಅವರು ಪರಿಭಾವಿಸಿದ್ದರು ಎಂದು ಕಲಮರಳ್ಳಿ ಹೇಳಿದರು.

`ಮಂತ್ರ ಮಾಂಗಲ್ಯ’ ಕುವೆಂಪು ಅವರ ಮತ್ತೊಂದು ಕ್ರಾಂತಿಯಾಗಿತ್ತು. ಎಲ್ಲಾ ಧರ್ಮ ಜಾತಿಯವರು ಸರಳವಾಗಿ ವಿವಾಹಿತರಾಗಿ ಸುಖೀ ಹಾಗೂ  ಆದರ್ಶ ಜೀವನ ನಡೆಸಬೇಕೆಂಬ ಪರಿಕಲ್ಪನೆ ಮಂತ್ರ ಮಾಂಗಲ್ಯದ್ದಾಗಿತ್ತು. ಇದು ರಾಜ್ಯಾದ್ಯಂತ ಹೊಸ ಸಂಚಲನವನ್ನೇ ಮಾಡಿತ್ತು ಎಂದರು.

ಚಕ್ರತೀರ್ಥ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ,  `ವೇದ ಪುರಾಣಗಳನ್ನು ಕುವೆಂಪು ವಿರೋಧಿಸಿರಲಿಲ್ಲ. ವರ್ಣಾಶ್ರಮ ಪದ್ಧತಿಯನ್ನು ಬೆಂಬಲಿಸಿದ್ದರು’ ಎಂದಿದ್ದಾರೆ. ಇದು ಅಪಹಾಸ್ಯದ ಮಾತು. ಕುವೆಂಪ ವಿಚಾರ ಧಾರೆಗಳ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದ ಪೆದ್ದನೊಬ್ಬನ ನುಡಿ ಇದಾಗಿದ್ದು,  ಕುವೆಂಪು ಅವರ ಶೂದ್ರ ತಪಸ್ವಿ ಹಾಗೂ ಜಲಗಾರ ನಾಟಕಗಳನ್ನು ಓದಿಕೊಂಡರೆ ಕುವೆಂಪು ಅವರೇನು? ಎಂಬ ನಿಜ ಸಂಗತಿ ಚಕ್ರತೀರ್ಥ ಅವರಿಗೆ ತಿಳಿಯುತ್ತದೆ ಎಂದು ಹೇಳಿದರು.

ಹೆಚ್.ಎನ್. ಶಿವಕುಮಾರ್ ಅವರ `ಮೌನವಾಗದಿರು’ ಕವನ ಸಂಕಲನವನ್ನು  ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಲೋಕಾರ್ಪಣೆ ಗೊಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು.  ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಹೆಚ್.ಎನ್. ಶಿವಕುಮಾರ್ ಉಪಸ್ಥಿತರಿದ್ದರು.

ವಿನೂತನ ಮಹಿಳಾ ಸಮಾಜದ ಸದಸ್ಯರು ನಾಡಗೀತೆ ಹಾಡಿದರು. ಕಾರ್ಯಕ್ರಮದ ನಂತರ ಸೇಂಟ್ ಜಾನ್ಸ್ ಶಾಲೆ, ಸಿದ್ಧಗಂಗಾ ಶಾಲೆ ಹಾಗೂ ಅನುಭವ ಮಂಟಪದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

error: Content is protected !!