ಸಾಮಾಜಿಕ ಅಭಿವೃದ್ಧಿಗೆ ಸಾಮೂಹಿಕ ಶ್ರದ್ಧೆಯೂ ಪೂರಕ

ಸಾಮಾಜಿಕ ಅಭಿವೃದ್ಧಿಗೆ ಸಾಮೂಹಿಕ ಶ್ರದ್ಧೆಯೂ ಪೂರಕ

ದಾವಣಗೆರೆ, ಡಿ.26- ಸಾಮಾಜಿಕ ಅಭಿವೃದ್ಧಿಯು ವೈಯಕ್ತಿಕ ಸ್ತರದಲ್ಲಿ ಆಗುವ ಪ್ರಕ್ರಿಯೆಯಲ್ಲ. ಸಾಮೂಹಿಕ ಪಾಲ್ಗೊಳ್ಳುವಿಕೆಯು ಅಗತ್ಯವಾಗಿದ್ದು, ಇದಕ್ಕಾಗಿ ಶೃದ್ಧೆ ಬೇಕು ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ ಅಭಿಪ್ರಾಯ ಪಟ್ಟರು.

ನಗರದ ಶ್ರೀ ಚೌಡೇಶ್ವರಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದೇವನಗರಿ ತಾಲ್ಲೂಕು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ದಾವಣಗೆರೆ `ಡಿ’ ವಲಯ ಇವರುಗಳ ಸಂಯುಕ್ತಾಶ್ರಯದಲ್ಲಿ  ಎಂದು ಏರ್ಪಾಡಾಗಿದ್ದ ಸಾಮೂಹಿಕ `ಮಹಾರುದ್ರಾಭಿಷೇಕ’, `ಲಕ್ಷ ಬಿಲ್ವಾರ್ಚನೆ’ಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. 

ಮಾನವ ಪ್ರಯತ್ನದೊಂದಿಗೆ ದೈವ ಬಲವೂ ಇದ್ದಲ್ಲಿ ಮಾತ್ರ ಸತ್ಕಾರ್ಯಗಳು ಸಫಲವಾಗಲು ಸಾಧ್ಯ ಎಂಬ ನಂಬಿಕೆ ನಮ್ಮ ಸನಾತನರಿಂದ ನಮಗೆ ಬಂದಿದ್ದು, ಸಾಮೂಹಿಕವಾಗಿ ಮಾಡುವ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಾತಿ, ಮತ, ಅಂತಸ್ತು, ಲಿಂಗಭೇದಗಳಿಲ್ಲದೇ ಎಲ್ಲರೂ ಒಟ್ಟಾಗಿ ಭಾಗವಹಿಸುವುದರಿಂದ ಶ್ರದ್ಧಾ ಜಾಗೃತಿ ಉಂಟಾಗುತ್ತದೆ. ಇದು ಸಾಮಾಜಿಕ ಅಭಿವೃದ್ಧಿ ಪ್ರಕ್ರಿಯೆಗೆ ಪೂರಕವಾಗುತ್ತದೆ ಎಂದು ಹೇಳಿದರು.

ಸ್ತ್ರೀ ಶಕ್ತಿಯನ್ನು ಅನಾದಿ ಕಾಲದಿಂದಲೂ ಗೌರವಿಸುವ ಪರಂಪರೆ. ಭಾರತ ದೇಶದ್ದಾಗಿದ್ದು, ಸ್ತ್ರೀಯರ ಆತ್ಮ ನಿರ್ಭರತೆ ಮತ್ತು ಸ್ವಾವಲಂಬನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದು ಮಾದರಿಯಾಗಿದೆ ಎಂದರು. ಮಹಾರುದ್ರಾಭಿಷೇಕ ಹಾಗೂ ಲಕ್ಷ  ಬಿಲ್ವಾರ್ಚನೆಯ ಧಾರ್ಮಿಕ ಮಹತ್ವವನ್ನು ವೇದ – ಮಂತ್ರಗಳ ಉದಾಹರಣೆ ಸಹಿತ ಅವರು ವಿವರಿಸಿದರಲ್ಲದೇ, ಸಾಮೂಹಿಕವಾದ ಧಾರ್ಮಿಕ ಆಚರಣೆಗಳಿಂದ `ನಾನು’ ಎಂಬುವ ಸಂಕುಚಿತ ಭಾವನೆ ದೂರಾಗಿ `ನಾವು’ ಎಂಬುವ ವಿಶಾಲ ಭಾವನೆ ಮನೋಭಾವ ಉಂಟಾಗುತ್ತದೆ. ಇದು ಸಾಮಾಜಿಕ ಸಾಮರಸ್ಯಕ್ಕೂ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆಯವರ ಪ್ರೇರಣೆಯಂತೆ ನಾಡಿನಾದ್ಯಂತ ಇಂತಹ ಉಪಯುಕ್ತ ಕಾರ್ಯಗಳು ನೆರವೇರುತ್ತಿದ್ದು, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ನಾಡಿನ ಹಾಗೂ ದೇಶದ ಅಭಿವೃದ್ಧಿಗೆ ಪೂರಕ ಎಂಬುದು ಮಾನ್ಯ ಹೆಗ್ಗಡೆಯವರ ಚಿಂತನೆಯಾಗಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್‌ನ ಜಿಲ್ಲಾ ಹಿರಿಯ ನಿರ್ದೇಶಕ ವಿ. ವಿಜಯಕುಮಾರ್ ನಾಗನಾಳರವರು, ವಲಯ ಮಟ್ಟದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿ, ಅನ್ನ, ಆಹಾರಗಳ ಬಡತನಕ್ಕಿಂತ ಬುದ್ಧಿಯ ಬಡತನದಿಂದ ಅರಾಜಕತೆ ಉಂಟಾಗುತ್ತದೆ. ಧಾರ್ಮಿಕ ಸಭಾ ಕಾರ್ಯಕ್ರಮಗಳ ಉಪನ್ಯಾಸದಿಂದ ಬುದ್ಧಿಯ ಬಡತನ ನಿವಾರಣೆಯಾಗುವುದಲ್ಲದೇ ಸ್ತ್ರೀಶಕ್ತಿಯು ಪ್ರಬಲ ಶಕ್ತಿಯಾಗುವಲ್ಲಿ ಪ್ರೇರಕವಾಗುತ್ತದೆ ಎಂದರರಲ್ಲದೇ, ಸಾಲಕ್ಕಾಗಿ ಸಂಘ ಎಂದು ಭಾವಿಸದೇ ಕೌಟುಂಬಿಕ, ಸಾಮಾಜಿಕ ಅಭಿವೃದ್ಧಿಗಾಗಿ ಸಂಘ ಎಂದು ತಿಳಿಯಬೇಕೆಂದರು.

ಮುಖ್ಯ ಅತಿಥಿಗಳಾಗಿ ಮಹಿಳಾ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀಮತಿ ಎಂ.ಆರ್. ಚೌಬೇ ಅವರು ಮಾತನಾಡಿ ಸ್ತ್ರೀಯರ ಮುಗ್ಧತೆಯ ದುರುಪಯೋಗವಾಗುವ ಅನೇಕ ಅಪರಾಧ ಪ್ರಸಂಗಗಳನ್ನು ಉದಾಹರಿಸಿ, ಎಚ್ಚರಿಕೆ ನೀಡಿದರಲ್ಲದೇ ವರದಕ್ಷಣೆ ಕಿರುಕುಳಗಳಲ್ಲಿ ಹೆಣ್ಣಿಗೆ ಹೆಣ್ಣೇ ವೈರಿಯಂತಾಗುತ್ತಿರುವ ಸಂದರ್ಭಗಳು ಇವೆ. ಅತ್ತೆ – ಸೊಸೆಯ ಸಂಬಂಧ ತಾಯಿ – ಮಗಳ ಸಂಬಂಧದಂತಿರಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಭಕ್ತ ಮತ್ತು ಭಗವಂತನ ಸಂಬಂಧದಲ್ಲಿ ಭಕ್ತಿ ಪ್ರಧಾನವಾಗಿ ಇರಬೇಕೇ ಹೊರತು ಭಯಪ್ರಧಾನವಾಗಬಾರದು. ಭಯವೇ ಪ್ರಧಾನವಾದಲ್ಲಿ ಅದರ ದುರುಪಯೋಗ ಪಡೆದು ಹಣ ಸುಲಿಗೆ ಮಾಡುವ ವರ್ಗವೂ ಇದೆ. ಭಕ್ತಿ ಸಮರ್ಪಿಸಿ, ಬದುಕು ಕಟ್ಟಿಕೊಳ್ಳುವಲ್ಲಿ ಆತ್ಮಶುದ್ಧಿ ಅತ್ಯವಶ್ಯ, ಪ್ರತಿಯೊಬ್ಬರ ಆತ್ಮದಲ್ಲೂ ಪರಮಾತ್ಮನಿದ್ದಾನೆ ಎಂದು ಭಾವಿಸಿದಾಗ ತಾರತಮ್ಯ ಭಾವನೆಗಳಿಗೆ  ಅವಕಾಶ ಇರುವುದಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಅಣಬೇರು ಮಂಜಣ್ಣ,  ಶ್ರೀಮತಿ ಚೇತನಾ, ಸಲ್ಮಾ ಬಾನು, ಭಾಗ್ಯ ಮುಂತಾದವರು ಉಪಸ್ಥಿತರಿದ್ದರು. 

ನಿರೂಪಣೆಯನ್ನು ಗ್ರಾಮಾಭಿವೃದ್ಧಿ ಟ್ರಸ್ಟಿನ ಯೋಜನಾಧಿಕಾರಿ ಹೆಚ್.ಬಾಬುರವರು ನಿರೂಪಿಸಿದರು. ಜಯಲಕ್ಷ್ಮಿ ಪ್ರಾರ್ಥಿಸಿದರು. ಮೇಲ್ವಿಚಾರಕರಾದ ಕಮಲಾಕ್ಷಿ ಸ್ವಾಗತಿಸಿದರು.

error: Content is protected !!