ಶಕ್ತಿ ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪುತ್ತಾರೆ ಎಂದ ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ ಅವರು ತಮ್ಮ ಮನೆಯಲ್ಲಿ ಆಗಿರುವ ಘಟನೆಗೆ ಉತ್ತರ ಕೊಡಲಿ.
– ಹೆಚ್.ಎಂ ರೇವಣ್ಣ, ಮಾಜಿ ಸಚಿವ,
ದಾವಣಗೆರೆ, ಮೇ 3- ಮೋದಿ ಅಲೆ ಎಲ್ಲೂ ಇಲ್ಲ. 2-3 ರಾಜ್ಯ ಹೊರತು ಪಡಿಸಿದರೆ, ಎಲ್ಲವೂ ಆಪರೇಷನ್ ಕಮಲ ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಇಡಿ, ಐಟಿ ಮೂಲಕ ವಿಪಕ್ಷಗಳ ಮೇಲೆ ದಬ್ಬಾಳಿಕೆ ಮಾಡುವ ಬಿಜೆಪಿಯು ರೈತರ ಆದಾಯ ದುಪ್ಪಟ್ಟುಗೊಳಿಸದೇ ಮುಷ್ಕರಕ್ಕೆ ಕುಳಿತ ರೈತರ ಎದೆಗೆ ಗುಂಡು ಹಾರಿಸುವ ಕಾರ್ಯ ಮಾಡಿದೆ ಎಂದು ದೂರಿದರು.
ಈ ಹಿಂದೆ ಕಪ್ಪು ಹಣ ವಾಪಸ್ ತರುತ್ತೇವೆ ಮತ್ತು 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದ ಪ್ರಧಾನಿ ಮೋದಿ ಅವರು ಸುಳ್ಳು ಭರವಸೆಯ ಮೂಲಕ ದೇಶದ ಜನರಿಗೆ ಮೋಸ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರಾದ ದೇವರಾಜ್ ಅರಸ್ ಹಾಗೂ ಇಂದಿರಾ ಗಾಂಧಿ ಅವರ ಆಡಳಿತದಲ್ಲಿ 20 ಅಂಶದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಪ್ರಸ್ತುತದಲ್ಲಿವೆ ಎಂದು ಹೇಳಿದರು.
2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅನ್ನ ಭಾಗ್ಯ, ಆಶ್ರಯ ಮನೆಯ ಸಾಲ ಹಾಗೂ ನಿಗಮಗಳ ಸಾಲ ಮನ್ನಾ ಮಾಡುವ ಜತೆಗೆ ಭಾಗ್ಯ ಜ್ಯೋತಿಯಂತಹ ಜನಪರ ಯೋಜನೆಗಳನ್ನು ಕೊಟ್ಟಿದ್ದಾರೆ ಎಂದರು.
ಇಂದು ಸಿ.ಎಂ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿಗಳನ್ನು ಪ್ರತಿ ಮನೆಗೂ ತಲುಪಿಸುವ ಜತೆಗೆ ಪ್ರಣಾಳಿಕೆಯ 165 ಅಂಶಗಳ ಪೈಕಿ 160 ನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು
ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ಜನರ ಕಾಳಜಿ ಮಾಡುತ್ತಿದೆ. ಆದ್ದರಿಂದ ಸಂವಿಧಾನ ಬದಲಿಸಲು ಹೊರಟ ಬಿಜೆಪಿಯಿಂದ ದೇಶ ರಕ್ಷಿಸಲು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದರು.
ಈ ವೇಳೆ ಪಕ್ಷದ ಹಿರಿಯ ನಾಯಕ ರಾಮಚಂದ್ರಪ್ಪ, ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ನಂಜಪ್ಪ, ಮಾಜಿ ಶಾಸಕ ಎಸ್. ರಾಮಪ್ಪ, ವೆಂಕಟೇಶ್, ಮುಖಂಡ ನಂದಿಗಾವಿ ಶ್ರೀನಿವಾಸ್, ಗಿರೀಶ್ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿದ್ದರು.