ಏತಕ್ಕಾಗಿ ಬಿಜೆಪಿ ಸೋಲಿಸಬೇಕು ಕೈಪಿಡಿಯ ಪ್ರಮುಖ ಅಂಶಗಳು
* ಕಪ್ಪು ಹಣ ವಾಪಸ್ಸಾತಿಯಲ್ಲಿ ಸುಳ್ಳು ಭರವಸೆ
* ವರ್ಷಕ್ಕೆ 2ಕೋಟಿ ಉದ್ಯೋಗದ ಬದಲು ನಿರುದ್ಯೋಗ ಸೃಷ್ಟಿ
* 2022ಕ್ಕೆ ಎಲ್ಲರಿಗೂ ಸ್ವಂತ ಮನೆ ನಿರ್ಮಿಸುವ ಸುಳ್ಳು ಭರವಸೆ
* ಅದಾನಿ- ಅಂಬಾನಿ ವಿಕಾಸ್ ಮತ್ತು ಬಡವರ ವಿನಾಶ್
* ರೈತ ವಿರೋಧಿ, ಕಾರ್ಮಿಕ ವಿರೋಧಿ ಮೋದಿ
* ಗುತ್ತಿಗೆ ಸೈನಿಕರ ನೇಮಕಾತಿ- ಪಿಂಚಣಿ ಇಲ್ಲದೇ 4ವರ್ಷದಲ್ಲೇ ಹೊರ ದಬ್ಬುವ ಯೋಜನೆ
* ಮಣಿಪುರ ಜನತೆಯ ನೋವು-ಸಂಕಟ
* ಕ್ರೀಡಾಪಟುಗಳಿಗೆ ದಕ್ಕದ ನ್ಯಾಯ
ದಾವಣಗೆರೆ, ಏ. 1- ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಬಹುತ್ವವನ್ನು ಉಳಿಸುವುದಕ್ಕಾಗಿ ಬಿಜೆಪಿ ಸೋಲಿಸಬೇಕೆಂದು ಸಿಪಿಐ ಮಂಡಳಿಯ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜಕೀಯ ಸಮಾವೇಶದಲ್ಲಿ “ಏತಕ್ಕಾಗಿ ಬಿಜೆಪಿ ಸೋಲಿಸಬೇಕು” ಎಂಬ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇದಕ್ಕೂ ಮುನ್ನ ಇಂಡಿಯಾ ಒಕ್ಕೂಟದ ಸಿಪಿಐ, ಎಎಪಿ ಮತ್ತು ಕಾಂಗ್ರೆಸ್ ಕಾರ್ಯ ಕರ್ತರು ಗಾಂಧಿ ವೃತ್ತದಿಂದ ಮೆರವಣಿಗೆಯ ಮೂಲಕ ಸಮಾವೇಶ ಸ್ಥಳಕ್ಕೆ ಆಗಮಿಸಿದರು.
ದೇಶದಲ್ಲಿನ ಬಡವರು, ದಲಿತರು ಮತ್ತು ಆದಿವಾಸಿಗಳ ಮೇಲೆ ನಡೆದ ಅನ್ಯಾಯಕ್ಕೆ ಬಿಜೆಪಿ ನೀಡಿದ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವನ್ನು ಜನರಿಗೆ ತಿಳಿಸುವುದಕ್ಕಾಗಿ ಮತ್ತು ಬಿಜೆಪಿ ಹಾಗೂ ಸಂಘ ಪರಿವಾರದವರು ಸುಳ್ಳು ಹೇಳಿ ಮತ ಕೇಳಲು ಬಂದಾಗ ಅವರನ್ನು ಪ್ರಶ್ನಿ ಸಲು ಈ ಕೈಪಿಡಿ ಸಹಾಯಕವಾಗಲಿದೆ ಎಂದರು.
ರಾಜ್ಯ ಬಿಜೆಪಿ ನಾಯಕರು ಸಂವಿಧಾನ ಬದಲಿಸುವ ಮಾತು ಹೇಳುತ್ತಿದ್ದಾರೆ ಮತ್ತು ಆರ್ಎಸ್ಎಸ್ನ ಮೂಲ ಆಶಯವನ್ನು ಅನುಷ್ಠಾನಗೊಳಿಸುವುದೇ ಬಿಜೆಪಿಯ ಮೂಲ ಮಂತ್ರವಾಗಿದೆ ಎಂದು ಹೇಳಿದರು.
ಬಹುವರ್ಣ, ಬಹುಧರ್ಮ ಮತ್ತು ಬಹುಭಾಷೆಯೇ ನಿಜವಾದ ಭಾರತ. ಆದರೆ ಭಾರತೀಯ ಜನತಾ ಪಾರ್ಟಿ ಒಂದು ದೇಶ ಎನ್ನುತ್ತಾ ಭೇದ ಮಾಡುತ್ತಿದೆ ಎಂದರು.
ಚುನಾವಣೆ ವೇಳೆ ವಿರೋಧ ಪಕ್ಷಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಹೀನ ಕೃತ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.
ಮೋದಿ ಅವರು ಖಾಸಗೀಕರಣ ಮಾಡುತ್ತಾ ದೇಶವನ್ನು ಅದಾನಿ, ಅಂಬಾನಿಗೆ ಮಾರುತ್ತಿದ್ದಾರೆ ಎಂದ ಅವರು, ಚುನಾವಣಾ ಬಾಂಡ್ ಮೂಲಕ ಬಿಜೆಪಿ ಕೋಟಿಗಟ್ಟಲೆ ಹಣ ಸ್ವೀಕರಿಸಿ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಮೋದಿ ಅವರ ಅಜೆಂಡಾವನ್ನೇ ರಾಜ್ಯದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಆದ್ದರಿಂದ ಬರುವ ಚುನಾವಣೆಯಲ್ಲಿ ಬಿಜೆಪಿಯ ಹಿಟ್ಲರ್ ಸಂಸ್ಕೃತಿ ತೊಲಗಿಸಬೇಕು ಎಂದರು.
ದೇಶದ ಆಸ್ತಿಯಾದ ಯುವಕರು ಮೋದಿ-ಮೋದಿ ಎನ್ನದೇ ಜಾಗೃತರಾಗಬೇಕು ಎಂದು ತಿಳಿಸಿದರು.
ಸಿಪಿಐ ಜಿಲ್ಲಾ ಮಂಡಳಿಯ ಕಾರ್ಯದರ್ಶಿ ಆವರಗೆರೆ ಚಂದ್ರು, ಖಜಾಂಚಿ ಆನಂದ್ ರಾಜ್, ಎಎಪಿ ಜಿಲ್ಲಾ ಅಧ್ಯಕ್ಷ ಶಿವಕುಮಾರಪ್ಪ, ರಾಜ್ಯ ವರ್ಕಿಂಗ್ ಕಮಿಟಿ ಸದಸ್ಯ ಹೊನ್ನಪ್ಪ ಮರೆಮ್ಮನವರ, ಎನ್ಎಫ್ಐಡಬ್ಲ್ಯು ಮಹಿಳಾ ಸಂಘಟನೆ ಅಧ್ಯಕ್ಷೆ ಎಂ.ಬಿ. ಶಾರದಮ್ಮ, ಆಪ್ ಜಿಲ್ಲಾ ಕಾರ್ಯದರ್ಶಿ ಅರುಣ್ ಕುಮಾರ್, ಗುಡಿಹಳ್ಳಿ ಹಾಲೇಶ್, ಆವರಗೆರೆ ವಾಸು, ವಿ. ಲಕ್ಷ್ಮಣ ಪ್ರಮುಖ ಮುಖಂಡರು ಇದ್ದರು.