ಸೂರಿಗಾಗಿ ಸಮರ ಸಾರಬೇಕಿದೆ-ವಸತಿಗಾಗಿ 5 ಲಕ್ಷ ಎಕರೆ ಜಾಗ ಕಾಯ್ದಿರಿಸಬೇಕು : ಸಾತಿ ಸುಂದರೇಶ್

ಸೂರಿಗಾಗಿ ಸಮರ ಸಾರಬೇಕಿದೆ-ವಸತಿಗಾಗಿ 5 ಲಕ್ಷ ಎಕರೆ ಜಾಗ ಕಾಯ್ದಿರಿಸಬೇಕು : ಸಾತಿ ಸುಂದರೇಶ್

ಜಿಲ್ಲೆಯಲ್ಲಿ 92 ಸಾವಿರ ವಸತಿ ಅರ್ಜಿ ಗುರುತಿಸಿರುವುದು 41 ಎಕರೆ ಜಾಗ

ದಾವಣಗೆರೆ ಜಿಲ್ಲೆಯಲ್ಲಿ 64,892 ಕುಟುಂಬಗಳು ಮನೆಗಾಗಿ ಹಾಗೂ 27,741 ಕುಟುಂಬಗಳು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟಾರೆ ಜಿಲ್ಲೆಯ 92,433 ಕುಟುಂಬಗಳಿಗೆ ಜಿಲ್ಲೆಯಲ್ಲಿ ವಸತಿ ಇಲ್ಲ. ಆದರೆ, ಇವರ ವಸತಿಗಾಗಿ ಜಿಲ್ಲೆಯಲ್ಲಿ ಮೀಸಲಿಟ್ಟಿರುವುದು ಕೇವಲ 41 ಎಕರೆ ಜಮೀನು ಎಂದು ಸಾತಿ ಸುಂದರೇಶ್ ಹೇಳಿದರು.

ರಾಜೀವ್ ಗಾಂಧಿ ವಸತಿ ನಿಗಮದ ಪ್ರಕಾರ ಒಂದು ಎಕರೆಯಲ್ಲಿ 20 ಮನೆಗಳನ್ನು ಮಾತ್ರ ಕಲ್ಪಿಸಲು ಸಾಧ್ಯ. ಹೀಗಿರುವಾಗ 41 ಎಕರೆಯಲ್ಲಿ ಇಷ್ಟೊಂದು ಜನರಿಗೆ ವಸತಿ ಕಲ್ಪಿಸಲು ಸಾಧ್ಯವೇ? ಕಂದಾಯ ಇಲಾಖೆಯ ಬಳಿ ಸಾಕಷ್ಟು ಜಮೀನಿದೆ. ಈ ಜಮೀನನ್ನು ವಸತಿ ಉದ್ದೇಶಕ್ಕೆ ಮೀಸಲಿಡಲು ಹೋರಾಟ ನಡೆಸಬೇಕಿದೆ ಎಂದವರು ಹೇಳಿದರು.


ದಂಗೆ ಏಳದಿದ್ದರೆ ಸೂರು ಸಿಗದು

ರಾಜ್ಯದಲ್ಲಿ ಆಡಳಿತ ನಡೆಸಿದ ಯಾವುದೇ ಪಕ್ಷ ಜನರ ಸೂರಿನ ಸಮಸ್ಯೆ ಬಗೆಹರಿಸಲು ಗಂಭೀರ ಪ್ರಯತ್ನ ನಡೆಸಿಲ್ಲ. ಜನರು ದಂಗೆ ಏಳದೇ ಇದ್ದರೆ, ರಾಜ್ಯ ಹಾಗೂ ದೇಶದ ಜನರಿಗೆ ನಿವೇಶನ – ಮನೆ ಸಿಗುವುದಿಲ್ಲ ಎಂದು ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.

ಜನರ ಬದುಕು ಕಟ್ಟುವ ರಾಜಕಾರಣ ಮಾಡುವ ಬದಲು ಭಾವನಾತ್ಮಕ ರಾಜಕಾರಣ ಮಾಡಲಾಗುತ್ತಿದೆ. ಜನರನ್ನು ಉನ್ಮಾದಕ್ಕೆ ಸಿಲುಕಿಸಲಾಗುತ್ತಿದೆ. ಕಮ್ಯುನಿಷ್ಟ್ ಪಕ್ಷವು ಜನರ ಬದುಕು ಕಟ್ಟುವ ರಾಜಕಾರಣ ಬಯಸುತ್ತಿದೆ ಎಂದವರು ಹೇಳಿದರು.

ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದಿಲ್ಲ. ಆದರೆ, ಜನರಿಗೆ ಸೂರು ಒದಗಿಸುವ ಗ್ಯಾರಂಟಿ ಈಗ ಬೇಕಿದೆ. ಒಂದೇ ಮನೆಯಲ್ಲಿ ನಾಲ್ಕಾರು ಕುಟುಂಬಗಳು ವಾಸ ಮಾಡುವ ಪರಿಸ್ಥಿತಿ ಇದೆ. ಇದರಿಂದಾಗಿ ಜನರಿಗೆ ಖಾಸಗಿ ಬದುಕೇ ಇಲ್ಲದಂತಾಗಿದೆ ಎಂದವರು ವಿಷಾದಿಸಿದರು.


ದಾವಣಗೆರೆ, ಜ. 14 – ರಾಜ್ಯದಲ್ಲಿ 50 ಲಕ್ಷ ಕುಟುಂಬಗಳಿಗೆ ವಸತಿ ಇಲ್ಲ. ಈ ಕುಟುಂಬಗಳು ಸೂರು ಪಡೆಯಲು ಸುದೀರ್ಘ ಹಾಗೂ ಸಂಘಟನೆಯ ಹೋರಾಟಕ್ಕೆ ಮುಂದಾಗಬೇಕು ಎಂದು ಸಿ.ಪಿ.ಐ. ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಕರೆ ನೀಡಿದರು.

ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಮಂಡಳಿ ಆಶ್ರಯದಲ್ಲಿ ನಗರದ ಕಾಂ. ಪಂಪಾಪತಿ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ನಿವೇಶನ ಮತ್ತು ವಸತಿ ರಹಿತರ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ವಸತಿಗಾಗಿ ಹೆಸರು ನೋಂದಾಯಿಸಿಕೊಂಡವರ ಸಂಖ್ಯೆ ಈಗ 26.31 ಲಕ್ಷದಷ್ಟಿದೆ. ವಾಸ್ತವಿಕವಾಗಿ ಇದಕ್ಕೂ ಎರಡು ಪಟ್ಟು, 50 ಲಕ್ಷ ಕುಟುಂಬಗಳಿಗೆ ವಸತಿ ಇಲ್ಲ ಎಂಬ ಅಂದಾಜಿದೆ ಎಂದವರು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2022ರ ವೇಳೆ ಎಲ್ಲರಿಗೂ ಸೂರು ಒದಗಿಸುವ ಭರವಸೆ ನೀಡಿದ್ದರು. ಆದರೆ, 2024 ಬಂದರೂ ದೇಶದ ಕೋಟ್ಯಂತರ ಜನರಿಗೆ ಇನ್ನೂ ಸೂರು ಸಿಕ್ಕಿಲ್ಲ. ಜನರಿಗೆ ಸೂರಿನಂತಹ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಬದಲು ಭಾವನಾತ್ಮಕ ವಿಷಯಗಳ ರಾಜಕೀಯ ಮಾಡಲಾಗುತ್ತಿದೆ ಎಂದರು ಟೀಕಿಸಿದರು.

ಕಂದಾಯ ಇಲಾಖೆಯ ಬಳಿ ಸರ್ಕಾರಿ ಜಮೀನಿದೆ. ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಜೊತೆ ಕಂದಾಯ ಇಲಾಖೆ ಕೆಲಸ ಮಾಡಿದಾಗ ಮಾತ್ರ ಸೂರಿನ ಸಮಸ್ಯೆ ಬಗೆಹರಿಸಲು ಸಾಧ್ಯ. ಈ ದಿಸೆಯಲ್ಲಿ ಸರ್ಕಾರವನ್ನು ಎಚ್ಚರಿಸಲು ಕಮ್ಯುನಿಷ್ಟ್ ಸಂಘಟನೆ ಮೂಲಕ ಹೋರಾಟ ನಡೆಸಲಾಗುತ್ತಿದೆ ಎಂದು ಸುಂದರೇಶ್ ಹೇಳಿದರು.

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಂದಾಯ ಸಚಿವರಾಗಿದ್ದ ಆರ್. ಅಶೋಕ್ ಅವರು 17 ಲಕ್ಷ ಎಕರೆ ಗೋಮಾಳವನ್ನು ಮಠ ಮಂದಿರಗಳಿಗೆ ವಹಿಸಲು ಮುಂದಾಗಿದ್ದರು. ಇದರ ವಿರುದ್ಧ ಹೋರಾಟ ಮಾಡಿ ಹಸ್ತಾಂತರ ನಿಲ್ಲಿಸಲಾಗಿತ್ತು. 12 ಲಕ್ಷ ಎಕರೆ ಜಾಗ ಒತ್ತುವರಿಯಾಗಿದೆ ಎಂದು ಬಾಲಸುಬ್ರಹ್ಮಣ್ಯ ವರದಿ ತಿಳಿಸಿದೆ. ಆದರೆ, ರಾಜ್ಯದ ಎಲ್ಲ ಸೂರು ರಹಿತರಿಗೆ ನೆಲೆ ಕಲ್ಪಿಸಲು 2.5 ಲಕ್ಷ ಎಕರೆ ಜಮೀನು ಸಾಕು. ಮುಂದಿನ ಅಗತ್ಯಗಳನ್ನೂ ಗಮನಿಸಿ ಒಟ್ಟಾರೆ 5 ಲಕ್ಷ ಎಕರೆ ಜಾಗವನ್ನು ವಸತಿಗೆ ಕಾಯ್ದಿರಿಸುವಂತೆ ಹೋರಾಟ ಮಾಡಲಾಗುವುದು ಎಂದವರು ಹೇಳಿದರು.

ಪಂಚಾಯ್ತಿ ಹಂತದಿಂದ ಈ ಬಗ್ಗೆ ಸಂಘಟನೆ ಹಾಗೂ ಹೋರಾಟ ನಡೆಸಬೇಕಿದೆ. ಸುದೀರ್ಘ ಕಾಲದ ಹೋರಾಟದ ನಂತರವೇ ಬಡವರು ವಸತಿ ಪಡೆಯಲು ಸಾಧ್ಯ. ಈ ದಿಸೆಯಲ್ಲಿ ಕಮ್ಯುನಿಷ್ಟ್ ಪಕ್ಷ ಮುಂದಾಗಲಿದೆ ಎಂದವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್ ವಹಿಸಿದ್ದರು.

ವೇದಿಕೆಯ ಮೇಲೆ ಕಮ್ಯುನಿಷ್ಟ್ ಮುಖಂಡರಾದ ಆವರಗೆರೆ ಚಂದ್ರು, ಆವರಗೆರೆ ವಾಸು, ಹೆಚ್.ಜಿ. ಉಮೇಶ್, ಎಂ.ಬಿ. ಶಾರದಮ್ಮ, ಮಹಮ್ಮದ್ ಭಾಷಾ, ಜಿ. ಯಲ್ಲಪ್ಪ, ಹಾಲವ್ವನಹಳ್ಳಿ ಪ್ರಸನ್ನ, ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು.

ಐರಣಿ ಚಂದ್ರು ಮತ್ತಿತರರು ಜಾಗೃತಿ ಗೀತೆ ಹಾಡಿದರು.

error: Content is protected !!