ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಶಿಕ್ಷಣದ ಜ್ಯೋತಿ ಬೇಕು

ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಶಿಕ್ಷಣದ ಜ್ಯೋತಿ ಬೇಕು

ಹರಪನಹಳ್ಳಿ, ಜ.14- ಆಧುನಿಕ, ಅಭಿವೃದ್ಧಿ ಹೊಂದಿದ ಮತ್ತು ಕೈಗಾರಿಕೀಕರಣ ಗೊಂಡ ಜಗತ್ತು ಶಿಕ್ಷಣದ ಚಕ್ರಗಳ ಮೇಲೆ ಓಡುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ನಮಗೆಲ್ಲರಿಗೂ ಶಿಕ್ಷಣದ ಜ್ಯೋತಿ ಬೇಕು ಎಂದು ಹರಪನಹಳ್ಳಿ ಉಪವಿಭಾಗದ ಡಿವೈಎಸ್ಪಿ ಡಾ. ವೆಂಕಟಪ್ಪ ನಾಯಕ  ಹೇಳಿದರು.

ಪಟ್ಟಣದ ವಾಲ್ಮೀಕಿ ನಗರದ ದೊಡ್ಡಗರಡಿಕೇರಿ ಕಾಲೋನಿಯಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಪರಿಶಿಷ್ಟರ ಕಾಲೋನಿ ಗಳಲ್ಲಿ ಕಾನೂನು ಅರಿವು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯ ಸುಶಿಕ್ಷಿತನಾದಂತೆಲ್ಲಾ ವಿಕಸನದ ಕಡೆ ಸಾಗಬೇಕು. ಆದರೆ, ಸುಶಿಕ್ಷಿತ ಮನುಷ್ಯನೇ ಇಂದು ಜಾತಿ, ಧರ್ಮ, ಮೇಲು- ಕೀಳು ಎಂಬ ವರ್ಗಭೇದ ನೀತಿ ಅನುಸರಿಸುತ್ತಿದ್ದಾನೆ. ಇಂತಹ ಅಸಮಾನತೆಯ ಸಾಮಾಜಿಕ ವ್ಯವಸ್ಥೆಗೆ ಅಮಾಯಕ, ಅನಕ್ಷರಸ್ಥರೇ ಒಳಗಾಗುತ್ತಿದ್ದಾರೆ. ಇಂತಹ ಶ್ರೇಣೀಕೃತ ವ್ಯವಸ್ಥೆಗೆ ಅಕ್ಷರದ ಅರಿವಿನ ಕೊರತೆಯೇ ಪ್ರಮುಖ ಕಾರಣ. ಹೀಗಾಗಿ, ಮೊದಲು ನಾವು ಶುದ್ಧಾಂಗ ಶೈಕ್ಷಣಿಕ ಸಂಸ್ಕಾರ ವನ್ನು ನಮ್ಮ ಪ್ರತಿ ಮಗುವಿಗೂ ಒದಗಿಸ ಬೇಕಾಗಿದೆ. ಅದು ಪಾಲಕರ ಆದ್ಯ ಕರ್ತವ್ಯವೂ ಹೌದು. ಶುದ್ಧಾಂಗ ಶಿಕ್ಷಣದಿಂದ ಮಾತ್ರ ನಮ್ಮ ಅರಿವಿಗೆ ಬಾರದೇ, ಅಘೋಷಿತವಾಗಿ ನಡೆಯು ತ್ತಿರುವ ಅಸಮಾನತೆಯನ್ನು ಬೇರು ಸಹಿತವಾಗಿ ನಿರ್ಮೂಲನೆ ಮಾಡಲು ಸಾಧ್ಯ ಎಂದರು.

ಪ್ರೈಮರಿ, ಹೈಸ್ಕೂಲ್ ಶಿಕ್ಷಣವನ್ನು ಮುಗಿಸುತ್ತಿದ್ದಂತೆಯೇ ಕೆಲ ಯುವಕರು, ಸಂಘಟನೆಗಳ ಹೆಸರಿನಲ್ಲಿ ಭವಿಷ್ಯದ ಬದುಕನ್ನು ಕಟ್ಟಿಕೊಡುವ ಶಿಕ್ಷಣವನ್ನೇ ಮರೆಯುತ್ತಿದ್ದಾರೆ. ಈ ಪರಿಪಾಟ ಸಲ್ಲದು. ಸಂಘಟನೆಗೂ ಮುನ್ನ ನಾವು ಶೈಕ್ಷಣಿಕವಾಗಿ ಬಲಾಢ್ಯವಾಗಬೇಕಿದೆ. ಹಾಗಾದಾಗ ಮಾತ್ರ ಅವಕಾಶಗಳ ದ್ವಾರ ಬಾಗಿಲು ನಮ್ಮನ್ನು ಮುಕ್ತ ಕಂಠದಿಂದ ಸ್ವಾಗತಿಸುತ್ತದೆ. ಅದರ ಸ್ವಾಗತಕ್ಕೆ ಜಾತಿ, ಧರ್ಮ, ಆಸ್ತಿ, ಅಂತಸ್ತು, ಕುಬೇರ- ಕುಚೇಲ ಎಂದು ನೋಡುವುದಿಲ್ಲ. ನಮ್ಮಲ್ಲಿರುವ ಶೈಕ್ಷಣಿಕ ಅರ್ಹತೆಯನ್ನು ಮಾತ್ರ ಅದು ಪರಿಗಣಿಸುತ್ತದೆ ಎಂಬ ಅರಿವನ್ನು ನಾವು ಮೊದಲು ಮೈಗೂಡಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಶುದ್ಧಾಂಗ ಶೈಕ್ಷಣಿಕ ಸಂಸ್ಕಾರದ ಕೊರತೆ ಅಪರಾಧ ಪ್ರಕರಣಗಳ ಹೆಚ್ಚಳಕ್ಕೂ ಕಾರಣ. ಇತ್ತೀಚೆಗೆ, ಅಪ್ರಾಪ್ತ ಬಾಲಕ-ಬಾಲಕಿಯರು ಪ್ರೀತಿ, ಪ್ರೇಮದ ನೆಪದಲ್ಲಿ ಮನೆಬಿಟ್ಟು ಓಡಿಹೋಗುತ್ತಾರೆ. ಅವರಿನ್ನೂ ಪ್ರಾಪ್ತ ವಯಸ್ಸಿಗೆ ಬಾರದ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣಗಳು, ಅದರಲ್ಲಿಯೂ ಪೋಕ್ಸೋ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. 

ಸ್ಥಳೀಯ ಉಪಕಾರಾಗೃಹಕ್ಕೆ ನಾನು ಭೇಟಿ ಮಾಡಿದ ಸಂದರ್ಭದಲ್ಲಿ ಬಂಧನದಲ್ಲಿರುವ 64 ಬಂಧಿತರಲ್ಲಿ 54ಬಂಧಿತರು, ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಕಾರಣಕ್ಕಾಗಿ ಎಂಬ ಅಂಕಿ-ಅಂಶ ಗಮನಿಸಿದರೆ ಬೇಸರ ಎನಿಸುತ್ತಿದೆ. ಇಂತಹ ದುಸ್ಸಾಹಸಕ್ಕೆ ಕೈಹಾಕಿ, ಭವಿಷ್ಯದ ಬದುಕನ್ನು ಹಾಳುಮಾಡಿಕೊಳ್ಳದಂತೆ ಎಚ್ಚರಿಕೆ ವಹಿಸಿ ಎಂದರು.

ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಉಚ್ಚೆಂಗೆಪ್ಪ  ಕೆ. ಮಾತನಾಡಿ, ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳಕ್ಕೆ ಒಳಗಾಗುತ್ತಿರುವ ಪರಿಶಿಷ್ಟರ ಶೋಷಿತ ಸಮುದಾಯಕ್ಕೆ ಅದರಿಂದ ಮುಕ್ತಿ ಹೊಂದಲು ಶಿಕ್ಷಣವೇ ಪ್ರಬಲ ಅಸ್ತ್ರ.  ತಳಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಜಾರಿ ಮಾಡಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ವಿನಿಯೋಗಿಸಿಕೊಂಡು, ಆರ್ಥಿಕವಾಗಿ ಸದೃಢತೆ ಸಾಧಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಬ್ಇನ್‌ಸ್ಪೆಕ್ಟರ್ ರುದ್ರಪ್ಪ, ವಸಂತಪ್ಪ, ಪೊಲೀಸ್ ಇಲಾಖೆ ಸಿಬ್ಬಂದಿ ಜಾತಪ್ಪ, ಕುಮಾರ್, ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಘಟಕದ ಉಪಾಧ್ಯಕ್ಷ ಮಂಡಕ್ಕಿ ಸುರೇಶ್, ದೊಡ್ಡಗರಡಿಕೇರಿ ದೈವಸ್ಥರಾದ ಪಟ್ನಾಮದ ಹಾಲಸಿದ್ಧಪ್ಪ, ರಾಯದುರ್ಗದ ದುರುಗಪ್ಪ, ದ್ಯಾಮಜ್ಜಿ ಹನುಮಂತಪ್ಪ, ಡಿ. ದಂಡ್ಯೆಪ್ಪ, ಕೆ. ಅಂಜಿನಪ್ಪ ಸೇರಿದಂತೆ ಇತರರು ಹಾಜರಿದ್ದರು.

error: Content is protected !!