ವಾಲ್ಮೀಕಿ ಮಂದಿರವನ್ನೂ ಅಯೋಧ್ಯೆಯಲ್ಲಿ ನಿರ್ಮಿಸಿ-ಫೆ. 8, 9ಕ್ಕೆ ವಾಲ್ಮೀಕಿ ಜಾತ್ರೆ ಮುಖ್ಯಮಂತ್ರಿ ಭಾಗಿ

ವಾಲ್ಮೀಕಿ ಮಂದಿರವನ್ನೂ ಅಯೋಧ್ಯೆಯಲ್ಲಿ ನಿರ್ಮಿಸಿ-ಫೆ. 8, 9ಕ್ಕೆ ವಾಲ್ಮೀಕಿ ಜಾತ್ರೆ ಮುಖ್ಯಮಂತ್ರಿ ಭಾಗಿ

ಮಲೇಬೆನ್ನೂರು, ಜ.9- ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರದ ಬಳಿ ವಾಲ್ಮೀಕಿ ಮಹರ್ಷಿಗಳ ಮಂದಿರವನ್ನೂ ಕಟ್ಟಿಸಬೇಕೆಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ರಾಮ ಜನ್ಮಭೂಮಿ ಟ್ರಸ್ಟ್ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅವರು, ಮಂಗಳವಾರ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಕರೆದಿದ್ದ 6ನೇ ವರ್ಷದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಾಮಾಯಣ ಕೃತಿಯ ಮೂಲಕ ಶ್ರೀರಾಮನನ್ನು ಜಗತ್ತಿಗೇ ಪರಿಚಯಿಸಿದ ಶ್ರೀ ವಾಲ್ಮೀಕಿ ಅವರ ಮಂದಿರ ನಿರ್ಮಿಸುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ ಎಂಬ ವಿಶ್ವಾಸವೂ ನಮಗಿದೆ ಎಂದ ಶ್ರೀಗಳು, ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರು ನಾಮಕರಣ ಮಾಡಿರುವುದನ್ನು ಸ್ವಾಗತಿಸಿ, ಉತ್ತರ ಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸಿದರು.

ಬಿಜೆಪಿಯವರು ರಾಜಕೀಯ ಲಾಭ ಕ್ಕಾಗಿ ಮಾತ್ರ ರಾಮ ರಾಮ ಎನ್ನದೇ, ಶ್ರೀ ರಾಮನ ನಿಜವಾದ ಚರಿತ್ರೆ ಮತ್ತು ಶಕ್ತಿಯನ್ನು ತಿಳಿದುಕೊಳ್ಳಬೇಕು. ರಾಮನ ಜೊತೆಗೆ ವಾಲ್ಮೀಕಿ ಅವರನ್ನೂ ಗೌರವಿಸುವ ಕೆಲಸ ವನ್ನು ಮಾಡಿ ಎಂದು ಸ್ವಾಮೀಜಿ ಹೇಳಿದರು.

ರಾಜ್ಯದಲ್ಲಿ ಬುಡಕಟ್ಟು ಸಾಂಸ್ಕೃತಿಕ ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದ್ದು, ವಾಲ್ಮೀಕಿ ಜಾತ್ರೆಯಲ್ಲಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತ ಘೋಷಣೆ ಮಾಡ ಬೇಕೆಂದು ಸ್ವಾಮೀಜಿ ಹೇಳಿದರು.

ಇದೇ ದಿನಾಂಕ 22 ರಂದು ಅಯೋಧ್ಯೆಯಲ್ಲಿ ಜರುಗುವ ಶ್ರೀ ರಾಮಮಂದಿರದ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿ, ಬಂದ ನಂತರ ವಾಲ್ಮೀಕಿ ಜಾತ್ರೆಯ ವೇದಿಕೆ ನಿರ್ಮಾಣಕ್ಕೆ ಹಂದರ ಕಂಬ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಸ್ವಾಮೀಜಿ ತಿಳಿಸಿದರು.

ಸಮಾಜದ ಮುಖಂಡ ಟಿ.ಈಶ್ವರ್ ಮಾತನಾಡಿ, ಅಯೋಧ್ಯೆಯಲ್ಲಿ ಸಮಾಜದ ವತಿಯಿಂದ ವಾಲ್ಮೀಕಿ ಗುರುಪೀಠ ಶಾಖೆ ನಿರ್ಮಿಸಲು ಶ್ರೀಗಳು ಹಾಗೂ ಸಮಾಜದ ಪ್ರಮುಖರು ಮುಂದಾಗಬೇಕೆಂದರು. ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿದರು. 

ಸಭೆಯ ಅಧ್ಯಕ್ಷತೆ ವಹಿಸಿದ್ದ  ಸಹಕಾರ ಸಚಿವರೂ, 6ನೇ ವರ್ಷದ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರೂ ಆದ ಕೆ.ಎನ್.ರಾಜಣ್ಣ ಮಾತನಾಡಿ, ಬರುವ ಫೆಬ್ರವರಿ 8 ಮತ್ತು 9 ರಂದು  6ನೇ ವರ್ಷದ ವಾಲ್ಮೀಕಿ ಜಾತ್ರೆ ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 8 ರಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ, 9ಕ್ಕೆ ಸಾಮೂಹಿಕ ವಿವಾಹ ಜರುಗಲಿವೆ. ನಂತರ  ಮಹಿಳಾ ಗೋಷ್ಠಿ, ಸಾಧಕಿಯರಿಗೆ ಸನ್ಮಾನ,  ನೌಕರರ ಗೋಷ್ಠಿ, ಪ್ರತಿಭಾ ಪುರಸ್ಕಾರ, ಸಂಜೆ ಯುವ ಗೋಷ್ಠಿ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 9ರ ಬೆಳಿಗ್ಗೆ 9ಕ್ಕೆ ವಾಲ್ಮೀಕಿ ರಥೋತ್ಸವ, ನಂತರ ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಜಾತ್ರಾ ಸಮಿತಿ ಸಂಚಾಲಕ ಹಾಗೂ ನಿವೃತ್ತ ಡಿಸಿ ಬಿ.ಶಿವಪ್ಪ, ಮಠದ ಧರ್ಮದರ್ಶಿಗಳಾದ ಡಾ. ಜಿ.ರಂಗಯ್ಯ, ಶ್ರೀಮತಿ ಶಾಂತಲಾ ರಾಜಣ್ಣ, ಬಿ.ವೀರಣ್ಣ, ಹರ್ತಿಕೋಟೆ ವೀರೇಂದ್ರ ಸಿಂಹ, ನಲುವಾಗಲು ನಾಗರಾಜಪ್ಪ, ಹೊಸಪೇಟೆ ಜಂಬಣ್ಣ ನಾಯಕ, ಕೆ.ಬಿ.ಮಂಜುನಾಥ್, ಹಾಸನ ಮಹೇಶ್, ಶಿವಮೊಗ್ಗದ ಎನ್.ಎಸ್.ಬಸವರಾಜ್, ಮುಖಂಡರಾದ ಹೊದಿಗೆರೆ ರಮೇಶ್, ಕೆ.ಪಿ.ಪಾಲಯ್ಯ, ನಿವೃತ್ತ ಅಧಿಕಾರಿ ಕೆ.ಎಸ್.ಮೃತ್ಯುಂಜಯಪ್ಪ, ಡಾ. ಎ.ಬಿ.ರಾಮಚಂದ್ರಪ್ಪ, ಯಾದಗಿರಿಯ ಗೌಡಪ್ಪಗೌಡ, ವಿಜಯಪುರದ ಧರ್ಮದರ್ಶಿ ಎಂ.ಪಿ.ಕೌಲಗಿ, ಬಳ್ಳಾರಿ ಜಿಲ್ಲಾಧ್ಯಕ್ಷ ದೊಡ್ಡೇರಿ ಸ್ವಾಮಿ, ಬೀದರ್ ಜಿಲ್ಲೆಯ ದಶರತ್ ಜಮಾದಾರ್, ಉತ್ತರ ಕನ್ನಡ ಜಿಲ್ಲೆಯ ಮರೆಯಪ್ಪನಾಯಕ, ಬೆಳಗಾವಿ ಜಿಲ್ಲೆಯ ರಾಜಶೇಖರ್ ತಳವಾರ, ಮುಖಂಡರಾದ ಎನ್.ಎಂ.ಆಂಜನೇಯ ಗುರೂಜಿ, ತಿಮ್ಮೇನಹಳ್ಳಿ ಚಂದ್ರಪ್ಪ, ಜಿಗಳಿ ಆನಂದಪ್ಪ, ಕೊಕ್ಕನೂರು ಸೋಮಶೇಖರ್, ಶ್ಯಾಗಲೆ ಮಂಜುನಾಥ್, ಅಣಜಿ ಅಂಜಿನಪ್ಪ, ಹರಿಹರದ ದಿನೇಶ್ ಬಾಬು, ಮಕರಿ ಪಾಲಾಕ್ಷಪ್ಪ, ಪಾರ್ವತಿ ಬೋರಯ್ಯ, ಗೌರಮ್ಮ ಮಂಜುನಾಥ್, ದಾವಣಗೆರೆಯ ವಿಜಯಶ್ರೀ ಮಹೇಂದ್ರಕುಮಾರ್, ಹರಪನಹಳ್ಳಿಯ ಹೆಚ್.ಕೆ.ಹಾಲೇಶ್, ಪತ್ರಕರ್ತ ಹುಚ್ಚಂಗೆಪ್ಪ, ರಾಜನಹಳ್ಳಿಯ ಭೀಮಣ್ಣ, ಚೈತ್ರಾ ಲಂಕೇಶ್, ಜಿಗಳಿಯ ಡಿ.ಮಂಜುನಾಥ್, ಬೆಣ್ಣೇರ್ ನಂದ್ಯೆಪ್ಪ, ಪತ್ರಕರ್ತ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!