ಮನುಕುಲದ ಕಪಿಮುಷ್ಠಿಗೆ ಸಿಲುಕುವನೇ ಸೂರ್ಯ ?

ಮನುಕುಲದ ಕಪಿಮುಷ್ಠಿಗೆ ಸಿಲುಕುವನೇ ಸೂರ್ಯ ?

ಆಂಜನೇಯ ದೇವರು ಸೂರ್ಯನ ಹಿಡಿದು ನುಂಗಲು ಪ್ರಯತ್ನ ನಡೆಸಿದ್ದು ಪುರಾಣಗಳಲ್ಲಿದೆ. ಸಾವಿರಾರು ವರ್ಷಗಳ ಹಿಂದೆ ಈ ಪುರಾಣಗಳನ್ನು ಬರೆಯಲಾಗಿತ್ತು. ಮುಂದೆ ಸಾವಿರಾರು ವರ್ಷಗಳ ನಂತರ ಸೂರ್ಯ ಮನುಷ್ಯನ `ಕಪಿ ಮುಷ್ಠಿ’ಗೆ ಸಿಲುಕಲಿದ್ದಾನೆ ಎಂದು ಕೆಲ ವಿಜ್ಞಾನಿಗಳು ಅಂದಾಜಿಸಿದ್ದಾರೆ!

ವಿಜ್ಞಾನ ಮುಂದುವರೆದಂತೆ ಪುರಾಣ ಕಾಲದಲ್ಲಿ ಬಣ್ಣಿಸಲಾಗುತ್ತಿದ್ದ ಅದ್ಭುತ ಶಕ್ತಿಗಳು ದೊರೆಯುತ್ತಿರುವುದು ಹೊಸದೇನೂ ಅಲ್ಲ. ಆದರೆ, ನಾವಿನ್ನೂ ನಾಗರಿಕತೆಯ ಹಾದಿಯಲ್ಲಿ ಅಂಬೆಗಾಲಿಡುತ್ತಿದ್ದೇವೆ. ನಾಗರಿಕತೆ ಮುಂದು ವರೆದಂತೆ ಲಭ್ಯವಾಗಬಹುದಾದ ಶಕ್ತಿ, ಸಾಮರ್ಥ್ಯಗಳ ಅಂದಾಜು ಪುರಾಣಗಳ ಕಲ್ಪನೆಗಳನ್ನೂ ಮೀರುತ್ತವೆ.

1964ರಲ್ಲಿ ಸೋವಿಯತ್ ಖಗೋಳಶಾಸ್ತ್ರಜ್ಞ ನಿಕೊಲೈ ಕರ್ದಶೇವ್ ಅವರು `ಟ್ರಾನ್ಸ್‌ಮಿಷನ್ ಆಪ್ ಇನ್ಫಾರ್ಮೇಷನ್ ಬೈ ಎಕ್ಸ್‌ಟ್ರಾಟೆರೆಸ್ಟ್ರಿಯಲ್ ಸಿವಿಲೈಸೇಷನ್ಸ್’ ಎಂಬ ಪ್ರಬಂಧ ಮಂಡಿಸಿದ್ದರು. ಮುಂದಿನ ದಿನಗಳಲ್ಲಿ ನಾಗರಿಕತೆಯು ಯಾವ ಮಟ್ಟಿಗಿನ ಇಂಧನ ಬಳಸಬಹುದು ಎಂಬುದನ್ನು ಅಂದಾಜಿಸಿದ್ದರು.

ನಾಗರಿಕತೆ ಬೆಳೆಯುತ್ತಾ ಹೋದಂತೆ, ಇಂಧನ ಬಳಕೆಯೂ ಹೆಚ್ಚಾಗುತ್ತದೆ. ಹೀಗಾಗಿ ಅತಿ ಹೆಚ್ಚು ಇಂಧನ ಬಳಸುವ ನಾಗರಿಕತೆಗಳು ಹೆಚ್ಚು ಮುಂದುವರೆದವು ಎಂದು ಹೇಳಬಹುದು. ಈ ಲೆಕ್ಕಾಚಾರ ಅನ್ಯಗ್ರಹ ಜೀವಿಗಳಿಗಷ್ಟೇ ಅಲ್ಲ, ಭೂಮಿಯ ಜೀವಿಗಳಿಗೂ ಅನ್ವಯವಾಗುತ್ತದೆ. ಕರ್ದಶೇವ್ ಅವರು 1964ರಲ್ಲಿ ರೂಪಿಸಿದ್ದ ನಾಗರಿಕತೆ ಮಾನದಂಡವನ್ನು ಹಲವು ಬಾರಿ ಪರಿವರ್ತಿಸುತ್ತಾ ಬರಲಾಗಿದೆ ಹಾಗೂ ಹೊಸ ಅಂಶ – ವಿಚಾರಗಳನ್ನು ಸೇರಿಸಲಾಗಿದೆ.

ಕರ್ದಶೇವ್ ಮೂರು ಹಂತಗಳಲ್ಲಿ ನಾಗರಿಕತೆಯನ್ನು ವಿಭಜಿಸಿದ್ದಾರೆ. ಮನುಕುಲ ಈ ನಾಗರಿತೆಯ ಮೊದಲ ಹಂತದಲ್ಲೂ ಬರುವುದಿಲ್ಲ! ಖಗೋಳಶಾಸ್ತ್ರಜ್ಞ ಕಾರ್ಲ್ ಸ್ಯಾಗನ್‌ ಅವರು ನಾಗರಿಕತೆಯ ಹಂತಗಳನ್ನು ದಶಮಾಂಶಗಳ ಹಂತಕ್ಕೆ ವಿಭಜಿಸಿದ್ದು, ಆ ಪ್ರಕಾರ ನಮ್ಮ ನಾಗರಿಕತೆ 0.72ರ ಹಂತದಲ್ಲಿದೆ.

ಭೂಮಿಯ ಮೇಲೆ ಬೀಳುವ ಸೂರ್ಯನ ಎಲ್ಲ ಬೆಳಕನ್ನು ಬಳಸಿಕೊಂಡಾಗ ಹಾಗೂ ಭೂಮಿಯ ಮೇಲಿನ ಎಲ್ಲ ಖನಿಜಗಳ ಬಳಕೆ ಸಾಧ್ಯವಾದಾಗ ನಾವು 1.0 ಹಂತದ ನಾಗರಿಕರಾಗುತ್ತೇವೆ ಎಂದು ಸ್ಯಾಗನ್‌ ಅಂದಾಜಿಸಿದ್ದಾರೆ.

ಇನ್ನು, 2.0 ಹಂತದ ನಾಗರಿಕರು ಸೂರ್ಯನಿಂದಲೇ ನೇರವಾಗಿ ಇಂಧನ ಪಡೆಯುತ್ತಾರೆ. ಸೂರ್ಯನ ಸುತ್ತ ಬಳೆಯ ಹೋಲುವ ಉಪಕರಣಗಳನ್ನು ಅಳವಡಿಸಿ ಅಗತ್ಯ ವಿದ್ಯುತ್ ಪಡೆಯುತ್ತಾರೆ. ಸೂರ್ಯನನ್ನೇ `ಬ್ಯಾಟರಿ’ ರೀತಿ ಬಳಸಿ ಪಡೆಯುವ ವಿದ್ಯುತ್ ಪ್ರಮಾಣವನ್ನು ಈಗ ಅಂದಾಜಿಸಲಿಕ್ಕೂ ಆಗದು. 1.0 ಹಂತದ ನಾಗರಿಕರನ್ನು ಹೋಲಿಸಿದರೆ, 2.0 ಹಂತದ ನಾಗರಿಕರು ಸಾವಿರ ಕೋಟಿ ಪಟ್ಟು ಹೆಚ್ಚು ಇಂಧನ ಬಳಸುತ್ತಾರೆ.

ಮೂರನೇ ಹಂತಕ್ಕೆ ತಲುಪುವ ನಾಗರಿಕತೆಗಳು, ತಮ್ಮ ಸುತ್ತಲಿನ ನಕ್ಷತ್ರ ಪುಂಜಗಳಲ್ಲಿರುವ ಎಲ್ಲಾ ಸೂರ್ಯಗಳಿಂದ ಇಂಧನ ಪಡೆಯುತ್ತಾರೆ. ಇವರು 2.0 ಹಂತದ ನಾಗರಿಕತೆಗಿಂತ ಸಾವಿರ ಕೋಟಿ ಪಟ್ಟು ಹೆಚ್ಚು ಇಂಧನ ಪಡೆಯುತ್ತಾರೆ ಎಂದು ಸ್ಯಾಗನ್ ಅಂದಾಜಿಸುತ್ತಾರೆ. ಈ ರೀತಿಯ ಅಂದಾಜುಗಳು ವೈಜ್ಞಾನಿಕ ಕಥಾನಕಗಳ ಹಂತಕ್ಕೆ ಬಂದು ನಿಲ್ಲುತ್ತವೆ.

ಈ ನಾಗರಿಕತೆಯ ಹಂತಗಳನ್ನು ದಾಟುವುದು ಸುಲಭವಲ್ಲ. 0.01ರಷ್ಟು ಹೆಜ್ಜೆ ಇಡಲಿಕ್ಕೂ ಕನಿಷ್ಠ ಐದು ವರ್ಷಗಳು ಬೇಕಾಗುತ್ತವೆ ಎಂಬ ಅಂದಾಜಿದೆ. ಸುಮಾರು 100-200 ವರ್ಷಗಳ ನಂತರವೇ ಭೂಮಿಯು 1.0 ನಾಗರಿಕತೆಯ ಹಂತ ತಲುಪಬಹುದು ಎಂದು ವಿಜ್ಞಾನ ಭವಿಷ್ಯಕಾರ ಮಿಚಿಯೋ ಕಾಕು ಹೇಳುತ್ತಾರೆ. ಭೂಗ್ರಹ ಜೀವಿಗಳು ಎರಡನೇ ಹಂತಕ್ಕೆ ಬರಲು ಸಾವಿರಾರು ವರ್ಷ ಹಾಗೂ ಮೂರನೇ ಹಂತಕ್ಕೆ ಬರಲು ಲಕ್ಷ ವರ್ಷಗಳು ಬೇಕಾಗಲಿವೆ ಎಂದು ಹೇಳಲಾಗುತ್ತಿದೆ.

ಕರ್ದಶೇವ್ ನಂತರ ಹಲವಾರು ವರ್ಷಗಳಲ್ಲಿ ಖಗೋಳಶಾಸ್ತ್ರಜ್ಢರು, ಭೌತಶಾಸ್ತ್ರಜ್ಞರು ಹಾಗೂ ವೈಜ್ಞಾನಿಕ ಭವಿಷ್ಯಕಾರರು ನಾಗರಿಕತೆಯ ಹಂತಗಳಿಗೆ ಹಲವಾರು ಅಂಶಗಳನ್ನು ಸೇರಿಸುತ್ತಾ ಬಂದಿದ್ದಾರೆ.

ಕೆಲ ವಿಜ್ಞಾನಿಗಳು ಈ ಮೂರೂ ಹಂತಗಳ ಆಚೆಗೂ ಇರುವ ನಾಗರಿಕತೆಗಳ ಚಿಂತನೆ ನಡೆಸಿದ್ದಾರೆ. ಅವರು ಈ ಹಂತಗಳನ್ನು ಏಳು ಹಂತಗಳಿಗೆ ಬೆಳೆಸಿದ್ದಾರೆ. ಏಳನೇ ಹಂತದಲ್ಲಿರುವ ನಾಗರಿಕರು ಸಮಯ ಹಾಗೂ ಬಾಹ್ಯಾಕಾಶವನ್ನೂ ಬದಲಿಸಿಕೊಳ್ಳಬಲ್ಲರು ಎಂದು ಅಂದಾಜಿಸಿದ್ದಾರೆ. ಈ ಹಂತದ ನಾಗರಿಕರು `ಸೃಷ್ಟಿಕರ್ತ’ರ ಸಾಮರ್ಥ್ಯ ಹೊಂದಿರುತ್ತಾರೆ ಎಂದೂ ಹೇಳಲಾಗುತ್ತಿದೆ.

ಮುಂದಾನೊಂದು ಕಾಲದಲ್ಲಿ ಉನ್ನತ ನಾಗರಿಕತೆ ಹಂತ ತಲುಪುವವರು ರೋಗ – ರುಜಿನಗಳ ಮೀರಿ, ಕಾಲದ ಹಂಗು ದಾಟಿ, ಹುಟ್ಟು – ಸಾವುಗಳ ಸಂಕೋಲೆ ಮುರಿದು ತಾವು ಬಯಸಿದ್ದನ್ನೆಲ್ಲಾ ಕ್ಷಣದಲ್ಲೇ ಪಡೆಯುವ `ಕಲ್ಪವೃಕ್ಷ’ದ ಮಾಲೀಕರಾಗಿರುತ್ತಾರೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.


ಎಸ್.ಎ. ಶ್ರೀನಿವಾಸ್‌

error: Content is protected !!