ಕಾಲಮಿತಿ ಇಲ್ಲ
ಅಡುಗೆ ಅನಿಲ ಸಂಪರ್ಕ ಹೊಂದಿರುವ ಫಲಾನುಭವಿಗಳು ಆಧಾರ್ ಸಂಖ್ಯೆಯ ದಾಖಲೆಯೊಂದಿಗೆ ತಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಉಚಿತವಾಗಿ ಇ-ಕೆವೈಸಿ ದೃಢೀಕರಣ ನೀಡಬೇಕು. ಆದರೆ ಇದಕ್ಕೆ ಯಾವುದೇ ಕಾಲಮಿತಿ ಇಲ್ಲ ಮತ್ತು ಇ-ಕೆವೈಸಿಗೆ ಹಣ ನೀಡುವಂತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಶಿದ್ರಾಮ ಮಾರಿಹಾಳ್ ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆ, ಡಿ. 29 – ಅಡುಗೆ ಅನಿಲದ ಸಿಲಿಂಡರ್ ಹೊಂದಿರುವವರು ಇ-ಕೆ.ವೈ.ಸಿ. ಮಾಡಿಸುವ ಸಂಬಂಧ ಹರಡಿದ ಗಾಳಿ ಸುದ್ದಿಯ ಕಾರಣದಿಂದಾಗಿ ಸಾರ್ವಜನಿಕರು ಅಡುಗೆ ಅನಿಲ ವಿತರಣಾ ಕೇಂದ್ರಗಳ ಎದುರು ಮುಗಿಬೀಳುತ್ತಿರುವುದು ಕಂಡು ಬರುತ್ತಿದೆ.
ಗ್ರಾಹಕರು ಒಂದೇ ಹೆಸರಿನಲ್ಲಿ ಹೆಚ್ಚು ಅಡುಗೆ ಅನಿಲದ ಸಿಲಿಂಡರ್ ಹೊಂದುವುದಕ್ಕೆ ಕಡಿವಾಣ ಹಾಕಲು ಹಾಗೂ ಸಬ್ಸಿಡಿ ದುರ್ಬಳಕೆ ತಡೆಯಲು ಇ-ಕೆ.ವೈ.ಸಿ. ಮಾಡಿಸಲು ಸೂಚನೆ ನೀಡಲಾಗಿತ್ತು.
ಆದರೆ, ಇ- ಕೆ.ವೈ.ಸಿ. ಮಾಡಿಸಲು ಡಿಸೆಂಬರ್ 31 ಕೊನೆ ದಿನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡಿದೆ. ಇದನ್ನು ನಂಬಿಕೊಂಡು ಜನರು ಇ-ಕೆ.ವೈ.ಸಿ. ಮಾಡಿಸಲು ಅಡುಗೆ ಅನಿಲ ವಿತರಣಾ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದಾರೆ.
ಇ-ಕೆ.ವೈ.ಸಿ. ಮಾಡಿಸಲು ಯಾವುದೇ ಗಡುವಿಲ್ಲ ಎಂದು ಅನಿಲ ಸಿಲಿಂಡರ್ ವಿತರಕರು ಹೇಳುತ್ತಿದ್ದರೂ, ಜನರು ಕಿವಿಗೊಡುವ ಸ್ಥಿತಿಯಲ್ಲಿಲ್ಲ.
ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಹೊಂದಿರುವವರು ಇ-ಕೆ.ವೈ.ಸಿ. ಮಾಡಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆದರೆ, ಇದಕ್ಕೆ ಯಾವುದೇ ಕೊನೆಯ ದಿನಾಂಕ ಇಲ್ಲ. ಇದಕ್ಕಾಗಿ ಆಧಾರ್ ಕಾರ್ಡ್ ಹಾಗೂ ಅಡುಗೆ ಅನಿಲ ಸಂಪರ್ಕದ ಕಾರ್ಡುಗಳನ್ನು ತಂದರೆ ಸಾಕು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ, ಅನಿಲ ಸಿಲಿಂಡರ್ ವಿತರಣಾ ಕೇಂದ್ರದ ಸಿಬ್ಬಂದಿಯೇ ಗ್ರಾಹಕರ ಮನೆಗೆ ತೆರಳಿ ಇ-ಕೆ.ವೈ.ಸಿ. ಮಾಡಿಸಿಕೊಳ್ಳುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಗಾಳಿ ಮಾತುಗಳಿಗೆ ಕಿವಿಗೊಡದೇ ಅನಿಲ ಸಿಲಿಂಡರ್ ವಿತರಣಾ ಕೇಂದ್ರದ ಸಿಬ್ಬಂದಿ ಹಾಗೂ ಸರ್ಕಾರದ ಅಧಿಕೃತ ಸೂಚನೆಗಳನ್ನು ಪಾಲಿಸಬೇಕಿದೆ.