ಜಗಳೂರು ತಾಲ್ಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಪುನಃ ಮರು ಸೇರ್ಪಡೆಯ ಅವಶ್ಯಕತೆ ಇದೆಯಾ?

ಜಗಳೂರು ತಾಲ್ಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಪುನಃ ಮರು ಸೇರ್ಪಡೆಯ ಅವಶ್ಯಕತೆ ಇದೆಯಾ?

1997 ರವರೆಗೂ ಜಗಳೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಯ 9  ತಾಲ್ಲೂಕುಗಳಲ್ಲಿ ಒಂದಾಗಿತ್ತು. ಚಿತ್ರದುರ್ಗ ಜಿಲ್ಲೆ ರಚನೆಯಾದ ದಿನದಿಂದಲೂ ಜಗಳೂರು ತಾಲ್ಲೂಕು ಅದರ ಜೊತೆಯಲ್ಲಿದ್ದರೂ ಏಕೆ ಅಭಿವೃದ್ಧಿಗೊಳ್ಳಲಿಲ್ಲ? ಜಗಳೂರು ತಾಲ್ಲೂಕು ಜಗಳೂರು ಕಸಬಾ ಸೇರಿ ಮೂರು ಹೋಬಳಿಗಳನ್ನು ಒಳಗೊಂಡಿದೆ. ಎರಡು ಹೋಬಳಿ ಕೇಂದ್ರಗಳು ತಾಲ್ಲೂಕಿನ ಗಡಿಭಾಗದಲ್ಲಿವೆ. ಒಂದು ಹೋಬಳಿ ಕೇಂದ್ರ ದಾವಣಗೆರೆಗೆ ಹತ್ತಿರವಾದರೆ, ಇನ್ನೊಂದು ಹೋಬಳಿ ಕೇಂದ್ರ 50 ಕಿ.ಮೀ. ದೂರವಿದೆ. 1997 ರಲ್ಲಿ ಗದ್ದಿಗೌಡರ್, ಹುಂಡೇಕರ್,  ವಾಸುದೇವರ ಸಮಿತಿಯನ್ನು ಆಧರಿಸಿ ಆಗಿನ 20 ಜಿಲ್ಲೆಗಳನ್ನು 27 ಕ್ಕೆ ಏರಿಸಿ, ಆಗಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲರು ಚಿತ್ರದುರ್ಗದಲ್ಲಿದ್ದ ದಾವಣಗೆರೆಯನ್ನು ಬೇರ್ಪಡಿಸಿ ದಾವಣಗೆರೆ, ಹರಿಹರ, ಜಗಳೂರು ಇದರ ಜೊತೆಗೆ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಹಾಗೂ ಬಳ್ಳಾರಿ ಜಿಲ್ಲೆಯ ಈಗಿನ ವಿಜಯನಗರ ಜಿಲ್ಲೆಯ ಹರಪನಹಳ್ಳಿಯನ್ನು ಸೇರಿಸಿ ದಿನಾಂಕ :15-08-1997 ರಲ್ಲಿ ದಾವಣಗೆರೆ ಜಿಲ್ಲೆ ಜನ್ಮ ತಾಳಿತು.

ಜಗಳೂರು ತಾಲ್ಲೂಕಿನ ಜನ ಎಲ್ಲಿದ್ದರೂ ನತದೃಷ್ಟರು, ಚಿತ್ರದುರ್ಗ ಜಿಲ್ಲೆಯಲ್ಲಿದ್ದಾಗ ಉಪವಿಭಾಗ, ಎ.ಪಿ.ಎಂ.ಸಿ ನ್ಯಾಯಾಲಯ ಮುಂತಾದವುಗಳೂ ದಾವಣಗೆರೆಗೆ ಸೇರಿದ್ದವು. ಡಿ.ವೈ.ಎಸ್‍ಪಿ ಕಛೇರಿ ಚಳ್ಳಕೆರೆಗೆ ಸೇರಿತ್ತು. ಹೀಗೆ ತಾಲ್ಲೂಕಿನ ಕೆಲಸ ಕಾರ್ಯಗಳಿಗೆ ಮೂರು ಕಡೆಗೆ ಪರದಾಡಬೇಕಾಗಿತ್ತು. ನಂತರ ದಾವಣಗೆರೆ ಜಿಲ್ಲೆ ಉದಯವಾದ ಮೇಲೆ ರಾಜಕೀಯ ಚದುರಂಗದಾಟದಿಂದ ಜಗಳೂರು ತಾಲ್ಲೂಕು ಹರಪನಹಳ್ಳಿ ಉಪವಿಭಾಗಕ್ಕೆ ಸೇರ್ಪಡೆಯಾಯಿತು. ಜಿಲ್ಲಾ ಕೇಂದ್ರ 48 ಕಿ.ಮೀ. ಉಪವಿಭಾಗ ಕೇಂದ್ರ ಸುಮಾರು 70 ಕಿ,ಮೀ. ಆಗುವುದರಿಂದ ಜಗಳೂರು ತಾಲ್ಲೂಕಿನ ಮುಗ್ಧ ಜನರು ಮನೆ-ಮಠ ಬಿಟ್ಟು ಅಲೆದಾಡಬೇಕಾಯಿತು. ಮರು ಸೇರ್ಪಡೆಯ ಅಣ್ಣಂದಿರು, ನಮ್ಮಗಳ ಅಭಿಪ್ರಾಯ ಕೇಳಿಲ್ಲವೆಂದು ಮೊಂಡುವಾದ ಮಾಡುತ್ತಿದ್ದಾರೆ. ಮೇಲ್ಕಂಡ ಸಮಿತಿಗಳನ್ನು ಆಧರಿಸಿ ಮಾಡಿದ್ದಾರೆ ಎಂಬುದನ್ನು ಮರೆತು ಹಾಗಾಗ ಕುಂಬಕರ್ಣನಂತೆ ಎಚ್ಚರಗೊಂಡಾಗಲೆಲ್ಲಾ ಹುತ್ತಬಡಿದು ಹಾವು ಎಬ್ಬಿಸಿ ಪುಂಗಿ ಊದುವ ಕೆಲಸ ಮಾಡುತಿದ್ದಾರೆ ನಮ್ಮ ಅಣ್ಣಂದಿರು. 

ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆಗೆ ಸೇರಿ ಸುಮಾರು 25 ವರ್ಷಗಳಾದವು. ಇಲ್ಲಿಯವರೆಗೆ ಯಾವ ಜನ ನಾಯಕರು ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆಗೆ ಸೇರಿಸಿದ್ದನ್ನು ಪ್ರಶ್ನೆ ಮಾಡಿಲ್ಲ. ಈ ಜಿಲ್ಲೆಯಾದಾಗಿನಿಂದ ಐದಾರು ಜನನಾಯಕರು ತಾಲ್ಲೂಕಿಗೆ  ಬೇಕಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಈಗಿನ ಜನನಾಯಕರು ಕ್ಷೇತ್ರದ ಬಗ್ಗೆ ತಮ್ಮದೇ ಆದ ಆಲೋಚನೆಯ ಯೋಜನೆಗಳ ಕನಸುಗಳನ್ನು ಸೂಪಜ್ಞ ಮನಸ್ಸಿನಿಂದ ರೂಪಿಸುತ್ತಿದ್ದಾರೆ. ಈಗ ಹರಪನಹಳ್ಳಿ ದಾವಣಗೆರೆ ಜಿಲ್ಲೆಯಿಂದ ಪುನಃ (ಬಳ್ಳಾರಿ) ವಿಜಯನಗರ ಜಿಲ್ಲೆಗೆ ಸೇರ್ಪಡೆಯಾದ ಮೇಲೆ ಜಗಳೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಗೆ ಸೇರಿಸಬೇಕೆಂದು ಒಂದಿಷ್ಟು ಅಣ್ಣಂದಿರು ಕೆಲವು ಸೌಲಭ್ಯಗಳು (ಡಿ,ಆರ್.ಡಿ, ವಿದರ್ಭ, ಬಯಲು ಸೀಮೆ) ಸಿಗುತ್ತವೆಂದು ಇಲ್ಲಸಲ್ಲದ ಆಸೆಗಳನ್ನು ಹುಟ್ಟಿಸಿ ಜಾತಿ, ಮತ, ಧರ್ಮ, ಪಂಥಗಳನ್ನು ಒಡೆಯುವಂತಹ ಪ್ರಯತ್ನ ಮಾಡುತ್ತಿದ್ದಾರೆ, ಜಗಳೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆಯಾದರೆ, ಭದ್ರಾ ಮೇಲ್ದಂಡೆ ಯೋಜನೆಯಿಂದ ಕಸಬಾ ಹೋಬಳಿಯ ಕೆಲವು ಗ್ರಾಮಗಳಿಗೆ ಇದರ ಪ್ರಯೋಜನ ದೊರಕಬಹುದು.

ತಾಲ್ಲೂಕು ಸಮಗ್ರ ನೀರಾವರಿ ಆಗುತ್ತದೆಂದು ಜನರಿಗೆ ಇಲ್ಲ ಸಲ್ಲದ ಆಸೆ ಹುಟ್ಟಿಸುತ್ತಿದ್ದಾರೆ. ಬಿಳಿಚೋಡು ಮತ್ತು ಸೊಕ್ಕೆ ಹೋಬಳಿಯ ಗ್ರಾಮಗಳಿಗೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ಚಿತ್ರದುರ್ಗ ಜಿಲ್ಲೆ ಈಗ 6 ತಾಲ್ಲೂಕು ಗಳನ್ನು ಒಳಗೊಂಡಿದೆ, ಈ ಯೋಜನೆಯಿಂದ ಹಿರಿಯೂರು, ಹೊಸದುರ್ಗ, ಚಿತ್ರದುರ್ಗದ (ಕೆಲವು ಭಾಗ) ಚಳ್ಳಕೆರೆಯ (ಕೆಲವು ಭಾಗ) ಸೌಲಭ್ಯ ಪಡೆಯಲಿದೆ. ಇದರಲ್ಲಿ ಹೊಳಲ್ಕೆರೆ, ಮೊಳಕಾಲ್ಮೂರಿಗೆ ಇದರಿಂದ ಯಾವ ಅನುಕೂಲವಿಲ್ಲ, ಮೊಳಕಾಲ್ಮೂರಿನಿಂದ ಚಿತ್ರದುರ್ಗಕ್ಕೆ ಸುಮಾರು 100 ಕಿ.ಮೀ ಇದೆ.  ಚಿತ್ರದುರ್ಗ ಜಿಲ್ಲೆಯಲ್ಲಿ ಅತೀ ಹಿಂದುಳಿದೆ ಪ್ರದೇಶ ಮೊಳಕಾಲ್ಮೂರು. ಇವರು ಬಳ್ಳಾರಿಗೆ (40 ಕಿ,ಮೀ) ಸೇರಿಸಬೇಕೆಂದು ಹೋರಾಟ ಮಾಡಿದರೆ ಹೇಗೆ? ಮೊಳಕಾಲ್ಮೂರು ತಾಲ್ಲೂಕಿನ ಉಳ್ಳಾಗಡ್ಡೆ ರಾಂಪುರ ಹೋಬಳಿ ಬಳ್ಳಾರಿಗೆ 25 ಕಿ.ಮೀ. ಮಾತ್ರ ಇದೆ. ಇವರ ಒಡನಾಟ ಬಳ್ಳಾರಿಯಲ್ಲಿದೆ. ಇವರು ಬಳ್ಳಾರಿಗೆ ಸೇರಿಸಬೇಕೆಂದರೆ ಆಡಳಿತದ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತದೆ.

ಮರು ಸೇರ್ಪಡೆಯ ಅಣ್ಣಂದಿರು ಮುಗ್ಧ ಜನರಿಗೆ ದಾವಣಗೆರೆ ಶ್ರೀಮಂತ ಜಿಲ್ಲೆ. ಚಿತ್ರದುರ್ಗ ಜಿಲ್ಲೆಗೆ ಸೇರಿಕೊಂಡರೆ ಕೈಲಾಸವನ್ನೇ ಧರೆಗೆ ಇಳಿಸಬಹುದೆಂದು ಅಂಗೈಯಲ್ಲಿ ಆಶಾ ಗೋಪುರಗಳನ್ನು ತೋರಿಸುತ್ತಿದ್ದಾರೆ. ದಾವಣಗೆರೆ ತಾಲ್ಲೂಕಿನ ಆನಗೋಡು, ಮಾಯಕೊಂಡ ಹೋಬಳಿಯ ಶೇಕಡ 70 ರಷ್ಟು ಗ್ರಾಮಗಳು ನೀರಾವರಿಯ ಸೌಕರ್ಯವನ್ನು ಹೊಂದಿಲ್ಲ. ಜಗಳೂರು ಚಿತ್ರದುರ್ಗ ಜಿಲ್ಲೆಯಲ್ಲಿದ್ದಾಗ ಈ ಪಟ್ಟಣಕ್ಕೆ ರೈಲು ಮಾರ್ಗದ ಸರ್ವೇ ಕಾರ್ಯ ನಡೆದಿತ್ತು, ಈ ರೈಲು ಮಾರ್ಗ ಆರಂಭವಾಗಿದ್ದರೆ, ವಿಜಯಪುರ, ಬಾಗಲಕೋಟೆ, ಬಾದಾಮಿ, ಗದಗ, ಕೊಪ್ಪಳ, ಹೊಸಪೇಟೆ, ಕೊಟ್ಟೂರು, ಜಗಳೂರು, ಮಾರ್ಗವಾಗಿ ಚಿತ್ರದುರ್ಗ ತಲುಪಿದ್ದರೆ ಈ ಪಟ್ಟಣಗಳಿಗೆ ಬೆಂಗಳೂರು ಸಮೀಪವಾಗುತ್ತಿತ್ತು. ಜಗಳೂರು ಸಹ ಎಷ್ಟು ಅಭಿವೃದ್ಧಿ ಹೊಂದುತ್ತಿತ್ತು. ಎನ್ನುವುದನ್ನು ಮರು ಸೇರ್ಪಡೆಯ ಅಣ್ಣಂದಿರು ಯೋಚನೆ ಮಾಡಿದ್ದೀರಾ? ಚಿತ್ರದುರ್ಗದಿಂದ ಸೊಲ್ಲಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ-13 ಜಗಳೂರು ಪಟ್ಟಣದ ಮೂಲಕ ಹೋಗಬೇಕಾಗಿತ್ತು. ಈ ಎರಡೂ ಯೋಜನೆಗಳಿಗೆ ಆಗಿನ ಭೂ ಮಾಲೀಕರು ರಾಜಕೀಯವನ್ನು ಬಳಸಿಕೊಂಡು ಜಗಳೂರು ಪಟ್ಟಣವನ್ನು ಮತ್ತು ತಾಲ್ಲೂಕನ್ನು ಹಿಂದುಳಿಯುವಂತೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಹಾಗೂ ಚಿತ್ರದುರ್ಗ ನಗರ ಎಷ್ಟು ಅಭಿವೃದ್ದಿಯಾಗಿದೆ ಎಂಬುದನ್ನು ಅಂಕಿ-ಅಂಶಗಳ ಮೂಲಕ ಮರು ಸೇರ್ಪಡೆಯ ಅಣ್ಣಂದಿರು ಸಾದರಪಡಿಸಬೇಕು. ಚಿತ್ರದುರ್ಗ ನಗರಕ್ಕೆ ಚಾರಿತ್ರಿಕ ಪರಂಪರೆ ಇದೆ. ಐತಿಹಾಸಿಕ ಮಹತ್ವವಿದೆ. ಅದೊಂದು ಪ್ರವಾಸಿ ಕೇಂದ್ರ ಆಗಿದ್ದರೂ, ಅಲ್ಲಿ ವಿಶಾಲವಾದ ರಸ್ತೆಗಳಾಗಲೀ, ಉದ್ಯಾನವನಗಳಾಗಲೀ ಹಾಗೂ ಇನ್ನು ಮುಂತಾದ ಸಾಮಾನ್ಯ ಕನಿಷ್ಟ ಸೌಕರ್ಯಗಳಿಲ್ಲದೆ, ಈ ನಗರ ಬಿಕೋ ಎನ್ನುತ್ತಿದೆ. ಉದಾ: ಇಲ್ಲಿಯ ಜಿಲ್ಲಾಸ್ಪತ್ರೆ ನೋಡಿದರೆ, ಇದು ಜಿಲ್ಲಾ ಕೇಂದ್ರವೇ ಎಂಬ ಅನುಮಾನ ಬರುತ್ತದೆ. ಈ ಹಿಂದುಳಿದ ಪ್ರದೇಶಗಳಿಗೆ ವಿಶೇಷ (ಪ್ಯಾಕೇಜ್) ಅನುದಾನದ ಮೂಲಕ ಅಭಿವೃದ್ಧಿಯನ್ನು ಮಾಡಲು ಏಕೆ ಸಾಧ್ಯವಾಗಿಲ್ಲ? ಮರು ಸೇರ್ಪಡೆಯ ಅಣ್ಣಂದಿರು ನಿಮಗೆ ವಿಶೇಷ ಅನುದಾನ, ವಿಶೇಷ ಮೀಸಲಾತಿ ನಿಮ್ಮ ಮನೆಯ ಬಾಗಿಲಿಗೆ ಬರುತ್ತವೆಂದು ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ಸೃಷ್ಟಿ ಮಾಡುತ್ತಾ ಇದ್ದಾರೆ. ನಿಮ್ಮ ಮನೆ ಬಾಗಿಲಿಗೆ ಯಾವ ಅನುದಾನವೂ ಬರುವುದಿಲ್ಲ. ಈಗ ಹೇಗೆ ಚಿತ್ರದುರ್ಗ ಹಿಂದುಳಿದ ಪ್ರದೇಶವೆಂದು ಹಣೆಪಟ್ಟಿ ಹೊಂದಿದೆಯೋ ಹಾಗೆ ನಾವೂ ಸಹ ಹಣೆಪಟ್ಟಿ ಧರಿಸಬೇಕಾಗುತ್ತದೆ. ಒಂದು ವೇಳೆ ಸೇರ್ಪಡೆ ಯಾದರೆ ಮುಂದೊಂದು ದಿನ ಮರು ಸೇರ್ಪಡೆಯ ಅಣ್ಣಂದಿರಿಗೆ ಶಾಪ ಹಾಕುವ ಕಾಲ ಬರಬಹುದು? 

ದಾವಣಗೆರೆ ಜಿಲ್ಲೆಯಲ್ಲಿರುವ ಜಗಳೂರು ತಾಲ್ಲೂಕು ಹೂವಿನ ಜೊತೆ ನಾರು ಸ್ವರ್ಗ ಸೇರಿದಂತೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಮರು ಸೇರ್ಪಡೆಯ ಅಣ್ಣಂದಿರು ತುಘಲಕ್ ದರ್ಬಾರ್ ಮಾಡಲು ಹೊರಟಿದ್ದಾರೆ. ತುಘಲಕ್‌ ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ ರಾಜಧಾನಿಯನ್ನು ಬದಲಾವಣೆ ಮಾಡುತ್ತಿದ್ದನಂತೆ, ಜನರ ಬವಣೆಗಳು ಮಾತ್ರ ಬೆಟ್ಟದಷ್ಟು ಹಾಗೆಯೇ ಇದ್ದವೆಂಬುದನ್ನು ಕೊನೆಗೆ ತುಘಲಕ್ ಅರಿತನಂತೆ, ಹೀಗೆ ಬದಲಾವಣೆ ಮಾಡುತ್ತಾ ಹೋದರೆ ಚನ್ನಗಿರಿ ಮತ್ತು ಹೊನ್ನಾಳಿಯವರು ಈಗಲೂ ಭಾವನಾತ್ಮಕವಾಗಿ ಶಿವಮೊಗ್ಗಕ್ಕೆ ಹೊಂದಿಕೊಂಡಿದ್ದಾರೆ, ಈಗ ರಚನೆಯಾಗಿರುವ ನ್ಯಾಮತಿ (ದಾವಣಗೆರೆ 80 ಕಿ.ಮೀ ಶಿವಮೊಗ್ಗಕ್ಕೆ 20 ಕಿ.ಮೀ) ತಾಲ್ಲೂಕಿನವರು ಈಗಾಗಲೇ ಶಿವಮೊಗ್ಗ ಜಿಲ್ಲೆಗೆ ಸೇರಿಸಬೇಕೆಂದು ಅಪಸ್ವರ ಎತ್ತಿದ್ದಾರೆ. ಹಾಗಾದರೆ ದಾವಣಗೆರೆ ಜಿಲ್ಲೆಯಲ್ಲಿ ದಾವಣಗೆರೆ ಮತ್ತು ಹರಿಹರ ಮಾತ್ರ ಉಳಿಯುತ್ತವೆ. ಎರಡು ತಾಲ್ಲೂಕಿಗೆ ಒಂದು ಜಿಲ್ಲೆ ಮಾಡುತ್ತಾ ಹೋದರೆ, ಕರ್ನಾಟಕದಲ್ಲಿ ಸುಮಾರು ನೂರಾರು ಜಿಲ್ಲೆಗಳಾಗುತ್ತವೆ. ಈ ರೀತಿ ಜನರ ತಾಳಕ್ಕೆ ತಕ್ಕಂತೆ ಕುರುಡು ಕಾಂಚಾಣ ಕುಣಿಯುತಲಿದ್ದರೆ, ಆರ್ಥಿಕ ವ್ಯವಸ್ಥೆಯ ಗತಿ ಏನು? (ಚಿತ್ರದುರ್ಗಕ್ಕೆ ಹೋದರೆ ಕೆಲಸಕ್ಕಷ್ಟೇ ಸೀಮಿತ) ಚಿತ್ರದುರ್ಗ ಜಿಲ್ಲೆಯ ಬಹುತೇಕ ತಾಲ್ಲೂಕಿನ ಜನ ದಿನನಿತ್ಯ ಒಂದಲ್ಲಾ ಒಂದು ಕೆಲಸಕ್ಕೆ ದಾವಣಗೆರೆಗೆ ಬಂದು ಹೋಗುತ್ತಾರೆ.

ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಈಗಾಗಲೇ ಎರಡನೇ ರಾಜಧಾನಿಯ ಕೂಗು ರಾಜ್ಯದಲ್ಲಿ ಅಲ್ಲಲ್ಲಿ ಕೇಳಿ ಬರುತ್ತಿರುವಾಗ, ದಾವಣಗೆರೆ ಎರಡನೇ ರಾಜಧಾನಿಗೆ ತುಂಬಾ ಅರ್ಹತೆಗಳನ್ನು ಪಡೆದಿದೆ. ಆಕಸ್ಮಾತ್ ದಾವಣಗೆರೆ ಎರಡನೇ ರಾಜಧಾನಿಯಾದರೆ, ಸುಮಾರು 30-40 ಕಿ.ಮೀ ವ್ಯಾಪ್ತಿಯಲ್ಲಿ ದಾವಣಗೆರೆಯನ್ನು ಬೃಹತ್ ಮಹಾ ನಗರವಾಗಿ ವಿಸ್ತರಿಸಬಹುದು. ಆಗ ಜಗಳೂರು ತಾಲ್ಲೂಕು ಉಪನಗರವಾದರೂ ಆಶ್ಚರ್ಯಪಡಬೇಕಾಗಿಲ್ಲ. 

ಇಲ್ಲಿಯ ಭೂಮಿಗೆ ಬಂಗಾರದ ಬೆಲೆ ಬರುತ್ತದೆ. ಬರದ ನಾಡಿನ ಜನ ಬಂಗಾರದ ಮನುಷ್ಯರಾಗುತ್ತಾರೆ. ಯಾವ ಕಾರಣದಿಂದಲೂ ಯಾವ ಕಾಲದಲ್ಲೂ ಚಿತ್ರದುರ್ಗ ಈ ಅರ್ಹತೆ ಪಡೆಯಲು ಸಾಧ್ಯವೇ ಇಲ್ಲ. ಹಾಗಾದರೆ ಈ ಹಿಂದುಳಿದ ಪ್ರದೇಶದಲ್ಲಿ ಸೇರುವುದು ಎಷ್ಟು ಸರಿ? ಎಂಬುದನ್ನು ಹತ್ತಾರು  ಸಾರಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಒಂದು ಜಿಲ್ಲಾ ಕೇಂದ್ರದ ಭೌಗೋಳಿಕ ವ್ಯಾಪ್ತಿ ಕನಿಷ್ಠ ಎಷ್ಟಿರಬೇಕೆಂಬುದನ್ನು ಮರು ಸೇರ್ಪಡೆಯ ಅಣ್ಣಂದಿರು ಅರ್ಥ ಮಾಡಿಕೊಳ್ಳಬೇಕು.

ದಾವಣಗೆರೆ ನಗರ ಶಿಕ್ಷಣ ಕ್ಷೇತ್ರದ ಜ್ಞಾನಗಂಗೆ, ಇಲ್ಲಿ ದಾವಣಗೆರೆ ವಿಶ್ವ ವಿದ್ಯಾನಿಲಯ ಎರಡು- ಮೂರು ಮೆಡಿಕಲ್ ಕಾಲೇಜುಗಳು, ನಾಲ್ಕು ಇಂಜಿನಿಯರಿಂಗ್ ಹಾಗೂ ಹತ್ತಿಪ್ಪತ್ತು ಪದವಿ ಕಾಲೇಜುಗಳು ಸುಮಾರು 30 ಕ್ಕೂ ಹೆಚ್ಚು ಗುಣಾತ್ಮಕ ಪದವಿ ಪೂರ್ವ ಕಾಲೇಜುಗಳು ಎರಡು, ಮೂರು ಡೆಂಟಲ್ ಕಾಲೇಜುಗಳು ಹಾಗೂ ದೃಶ್ಯ ಕಲಾ ಮಾಧ್ಯಮ ಕಾಲೇಜು, ವಿವಿಧ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿ ನಿಲಯಗಳುಂಟು, ಸುಸಜ್ಜಿತವಾದ ವಿವಿಧ ರೀತಿಯ ಆಸ್ಪತ್ರೆಗಳುಂಟು. ಒಂದೆರಡು ಕಲ್ಯಾಣ ಮಂಟಪಗಳು ಬಡ ಜನರ ಪಾಲಿಗೆ ವರದಾನವಾಗಿವೆ. 

ಒಂದು ಖಾಸಗಿ ಸರ್ವೆಯ ಮೂಲಕ ಸಮೀಕ್ಷೆ ಮಾಡಿದರೆ ಜಗಳೂರು ತಾಲ್ಲೂಕಿನವರು ದಾವಣಗೆರೆಯಲ್ಲಿ ಅನ್ನ, ಆಶ್ರಯ, ದುಡಿಮೆಗಾಗಿ ನೆಲೆಸಿದ್ದಾರೆ. ಇಲ್ಲಿ ದುಡಿದು ತಿನ್ನುವವರಿಗೆ ಕೈತುಂಬಾ ಕೆಲಸ ಸಿಗುತ್ತದೆ. ಇದನ್ನು ಚಿತ್ರದುರ್ಗದಲ್ಲಿ ಪಡೆಯಲಿಕ್ಕೆ ಎಂದಿಗೂ ಸಾಧ್ಯವಿಲ್ಲ. ಜಗಳೂರು ತಾಲ್ಲೂಕಿನವರು ದಾವಣಗೆರೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುತ್ತಿರುವುದು ಹಾಗೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ, ಸಿ.ಇ.ಟಿ ಕೌನ್ಸಿಲಿಂಗ್ ಮೂಲಕ ದಾವಣಗೆರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ವಿನಃ ಚಿತ್ರದುರ್ಗವನ್ನು ಆಯ್ಕೆ ಮಾಡಿಕೊಳ್ಳವುದಿಲ್ಲವೆಂಬುದನ್ನು  ಮರು ಸೇರ್ಪಡೆಯ ಅಣ್ಣಂದಿರು ನೆನಪು ಮಾಡಿಕೊಳ್ಳಬೇಕು. ಮತ್ತೇನಾದರೂ ಜಗಳೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಯಾದರೆ ಉಪವಿಭಾಗ, ಡಿ.ವೈ.ಎಸ್.ಪಿ. ಕಛೇರಿ ಮುಂತಾದ ಕಛೇರಿಗಳಿಗೆ ಚಳ್ಳಕೆರೆಗೆ ನಮ್ಮ ತಾಲ್ಲೂಕನ್ನು ಸೇರ್ಪಡೆ ಮಾಡಿದರೂ ಆಶ್ಚರ್ಯಪಡಬೇಕಾಗಿಲ್ಲ. ಏಕೆಂದರೆ ಈ ಹಿಂದೆ ಹರಪನಹಳ್ಳಿಗೆ ಉಪವಿಭಾಗ ಡಿ.ವೈ.ಎಸ್.ಪಿ. ಕಛೇರಿ ಸೇರಿದಾಗ, ಮರು ಸೇರ್ಪಡೆಯ ಅಣ್ಣಂದಿರು ಯಾರು ತುಟಿ, ಬಾಯಿ ಎರಡನ್ನೂ ಬಿಟ್ಟಿರಲಿಲ್ಲ. 

ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲ್ಲೂಕು ಮುಂದುವರಿದರೆ ಉಪವಿಭಾಗ, ಡಿ.ವೈ.ಎಸ್.ಪಿ. ಇನ್ನೂ ಮುಂತಾದ ಕಛೇರಿಗಳು ದಾವಣಗೆರೆಯಲ್ಲಿಯೇ ಇರುವುದರಿಂದ ಶ್ರಮ, ಕಾಲ, ಹಣದ ಉಳಿತಾಯವಾಗುತ್ತದೆ. ಒಂದೇ ಬಸ್ ಚಾರ್ಜ್‌ನಲ್ಲಿ ಹತ್ತಾರು ಕೆಲಸಗಳನ್ನು ಮಾಡಿಕೊಂಡು ಬರಬಹುದು ಮರು ಸೇರ್ಪಡೆಯ ಅಣ್ಣಂದಿರು ತಮ್ಮ ತವಕಗಳಿಗೆ ಇಡೀ ತಾಲ್ಲೂಕನ್ನು ಖೆಡ್ಡಾಕ್ಕೆ ದಬ್ಬಿದಂತಾಗುತ್ತದೆ. ತಾಲ್ಲೂಕಿನಲ್ಲಿ ಬೆಟ್ಟದಷ್ಟು, ಸಾಗರದಷ್ಟು ಕೆಲಸ ಕಾರ್ಯಗಳಿವೆ, ಇವುಗಳನ್ನು ಜನ ನಾಯಕರ ಗಮನಕ್ಕೆ ತಂದು, ಜನ ನಾಯಕರು ಅಧಿಕಾರಿಗಳಿಗೆ ಮಾರ್ಗದರ್ಶಕರಾಗಿ, ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ, ಎಲ್ಲರ ಕೈಗಳು ಒಂದಾದರೆ ಅಭಿವೃದ್ಧಿ ಮರೀಚಿಕೆಯಾಗಿ ಉಳಿಯುವುದಿಲ್ಲ. 2018 ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ತರಳಬಾಳು ಶ್ರೀಗಳ ಆಶಯದಂತೆ (ಕರ್ನಾಟಕ ಸರ್ಕಾರದ ಮಾನ್ಯ ಸಿದ್ಧರಾಮಯ್ಯ, ಮಾನ್ಯ ಕುಮಾರಸ್ವಾಮಿ, ಮಾನ್ಯ ಯಡಿಯೂರಪ್ಪ ಹಾಗೂ ಜನನಾಯಕರು) ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆಗಳಿಗೆ ತುಂಗ ಭದ್ರಾ ನದಿಯಿಂದ ದೀಟೂರು ಜಾಕ್‌ವೆಲ್ ಮೂಲಕ ಅಣಜಿ ಸಮೀಪದ ಚಟ್ನಳ್ಳಿ ಗುಡ್ಡದಲ್ಲಿ ಭೂಮಿಯ ಗುರುತ್ವಾಕರ್ಷಣೆ ಮೂಲಕ ಕೆರೆ ತುಂಬಿಸುವ ಯೋಜನೆಗೆ ಈಗಾಗಲೇ ಚಾಲನೆಯನ್ನ ಕೊಡಲಾಗಿದೆ. ಜನನಾಯಕರು ಅದನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಈ ಯೋಜನೆಯಿಂದ ತಾಲ್ಲೂಕು ಸಂಪೂರ್ಣವಾಗಿ ಅಂತರ್ಜಲದಿಂದ ಇಮ್ಮಡಿಗೊಳ್ಳುತ್ತದೆ.

• ಜಗಳೂರು ತಾಲ್ಲೂಕು ಮೂರು ಯೋಜನೆಗಳಿಂದ ಬರದ ನಾಡಿನ ಹಣೆ ಪಟ್ಟಿಯಿಂದ ಬಿಡಿಸಿಕೊಳ್ಳಬಹುದು.
• ಭದ್ರಾ ಮೇಲ್ದಂಡ ಯೋಜನೆ
• ಬಹು ಗ್ರಾಮ ಕುಡಿಯುವ ನೀರಿನ ಜಲ ಸಿರಿಯೋಜನೆ
• 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಜಗಳೂರು ತಾಲ್ಲೂಕಿನ ಜನರ ದಣಿವನ್ನು ನೀಗಿಸಬಹುದು.

ಜಗಳೂರು ತಾಲ್ಲೂಕಿನಲ್ಲಿಯೇ ಅನೇಕ ಅಸಮತೋಲನಗಳಿವೆ. ಅಂದರೆ ತಾಲ್ಲೂಕಿನಲ್ಲಿ ಬಸವನಕೋಟೆ ಒಂದು ಮಾದರಿ ಗ್ರಾಮ. ಇವರಿಗೆ ಚಿತ್ರದುರ್ಗ ಸುಮಾರು 80 ಕಿ.ಮೀ ದಾವಣಗೆರೆ ಸುಮಾರು 40 ಕಿ.ಮೀ. ಈ ಊರಿನ ಜನರ ಬವಣೆಯನ್ನು ಒಂದು ಪಕ್ಷಿ ನೋಟದ ಮೂಲಕ ಚಿತ್ರಿಸಿದರೆ, ನಾಡ ಕಛೇರಿ ಸೊಕ್ಕೆಗೆ 10 ಕಿ,ಮೀ ಹೋಗಬೇಕು. ಪೊಲೀಸ್ ಠಾಣೆಗೆ ಸುಮಾರು 25ಕಿ.ಮೀ ಬಿಳಿಚೋಡಿಗೆ ಬರಬೇಕು. ಕೃಷಿ ಇಲಾಖೆ ಕೆಲಸಗಳಿಗೆ ಸುಮಾರು 20 ಕಿ.ಮೀ ಹೊಸಕೆರೆಗೆ ಬರಬೇಕು. ಇಂತಹ ಭೌಗೋಳಿಕ ಅಸಮತೋಲನಗಳಿಂದ ಜನರ ಬದುಕು ಕಷ್ಟವಾಗುತ್ತದೆ. (ಬಸವನಕೋಟೆ, ಹರಪನಹಳ್ಳಿ ತಾಲ್ಲೂಕಿನ ಅರಸೀಕರೆ ಹೋಬಳಿ ಕೇಂದ್ರ ಕೇವಲ 5ಕಿ.ಮೀ ಇಲ್ಲಿ ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳು ಸಿಗುತ್ತವೆ ಎಂದು ಇವರು ಹರಪನಹಳ್ಳಿ ತಾಲ್ಲೂಕಿಗೆ ಸೇರಲು ಮನಸ್ಸು ಮಾಡಿದರೆ ಸೇರಬಹುದೇ ? 

ಮರು ಸೇರ್ಪಡೆಯ ಅಣ್ಣಂದಿರು, ದಾವಣಗೆರೆ ಜಿಲ್ಲೆಯಲ್ಲಿ 5 ತಾಲ್ಲೂಕುಗಳು ನೀರಾವರಿ ಹೊಂದಿವೆ. ಜಗಳೂರು ತಾಲ್ಲೂಕು ನೀರಾವರಿ ಹೊಂದಿಲ್ಲ, ಬರದ ನಾಡು ಎಂದು ಹೇಳುತ್ತಾರೆ. ಉದಾ: ಮಂಡ್ಯ ಜಿಲ್ಲೆಯ 7 ತಾಲ್ಲೂಕುಗಳಲ್ಲಿ ನಾಗಮಂಗಲ ತಾಲ್ಲೂಕು ಮಾತ್ರ ನೀರಾವರಿಯನ್ನು ಹೊಂದಿಲ್ಲ ಎಂಬುದನ್ನು ಅಣ್ಣಂದಿರ ಗಮನಕ್ಕೆ ತರುತ್ತಿದ್ದೇವೆ. ದಾವಣಗೆರೆ ಜಿಲ್ಲೆ ಉದಯವಾದ ಮೇಲೆ ಅಗ್ನಶಾಮಕ ಠಾಣೆ, ಎ.ಪಿ.ಎಮ್.ಸಿ ಮಾರ್ಕೆಟ್, ಜಗಳೂರಿನಲ್ಲಿ ಪದವಿ, ಐಟಿಐ ಕಾಲೇಜ್ ಹಾಗೂ ಜಗಳೂರು ಹೊಸಕೆರೆ, ಬಿಳಿಚೋಡು, ಪಲ್ಲಾಗಟ್ಟಿಯಲ್ಲಿ ಪದವಿ ಪೂರ್ವ ಕಾಲೇಜುಗಳು ಹಾಗೂ ತಾಲ್ಲೂಕಿನ ವಿವಿಧೆಡೆ ಮುರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ,   ಮುಂತಾದ ವಸತಿ ಶಾಲೆಗಳು ನಿರ್ಮಾಣಗೊಂಡಿವೆ. ವಿವಿದೆಡೆ ವಿದ್ಯುತ್ ಸ್ಟೇಷನ್‍ಗಳು (ಬಿಳಿಚೋಡು, ಪಲ್ಲಾಗಟ್ಟೆ, ಹಿರೆಮಲ್ಲನಹೊಳೆ ಮುಂತಾದ) ನಿರ್ಮಾಣಗೊಂಡಿವೆ. 57 ಕೆರೆಗಳಿಗೆ ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿಗೆ ನೀರು ತುಂಬಿಸುವ ಯೋಜನೆ ಆಯಾ ಜಿಲ್ಲೆಗೆ ಮಾತ್ರ ಸೀಮಿತ ಎಂದರೆ ಏನು ಮಾಡಬೇಕು?

ದಾವಣಗೆರೆ ಜಿಲ್ಲೆಯಲ್ಲಿ  ಜಗಳೂರು ತಾಲ್ಲೂಕು ಏಕೈಕ ಹಿಂದುಳಿದ ತಾಲ್ಲೂಕು ಎಂದು, ಅದರ ಮೂಲಕ ನಮಗೆ ಹೆಚ್ಚಿನ ಅನುದಾನವನ್ನು ಕೇಳಲು ನೈತಿಕ ಬಲ ಬರುತ್ತದೆ. ಈಗ ಮತ್ತೆ ನಾವು ಚಿತ್ರದುರ್ಗ ಜಿಲ್ಲೆಗೆ ಸೇರಿಸಿ ಎಂದು ಹೋರಾಟ ಮಾಡಿದರೆ ಬೆಟ್ಟ ಅಗೆದು ಇಲಿ ಹಿಡಿದಂತಾಗುತ್ತದೆ. ಸಾಮಾನ್ಯ ಜನರಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ಮರು ಸೇರ್ಪಡೆಯ ಅಣ್ಣಂದಿರು ಮಾಡುತ್ತಿದ್ದಾರೆಯೇ ವಿನಃ ದಿಕ್ಕು ತೋರಿಸುವ ಕೆಲಸ ಮಾಡುತ್ತಿಲ್ಲ, ಜಗಳೂರು ತಾಲ್ಲೂಕು ಹಿಂದುಳಿದಿರುವ ಬಗ್ಗೆ ಅರಿವು ಮೂಡಿಸಿ, ಅನುದಾನ ಮುಂತಾದ ಸೌಲಭ್ಯಗಳ ಅಭಿವೃದ್ಧಿಗೆ ಒಗ್ಗಟ್ಟಿನ ಮಂತ್ರದೊಂದಿಗೆ ತಾಲ್ಲೂಕಿನ ಶ್ರೇಯೋಭಿವೃದ್ಧಿಗೆ ಪಣ ತೊಡುವ ಪ್ರಯತ್ನವನ್ನು ಪಕ್ಷಾತೀತವಾಗಿ, ಜಾತ್ಯತೀತವಾಗಿ ಜನನಾಯಕರ ಗಮನಕ್ಕೆ ತರುವ ಕೆಲಸ ಮಾಡಬೇಕು. ಈ ಮೇಲಿನ ಎಲ್ಲಾ ಅಂಶಗಳನ್ನು ಮನವರಿಕೆ ಮಾಡಿಕೊಂಡರೆ ಜಗಳೂರು ತಾಲ್ಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆಯ ಅವಶ್ಯಕತೆ ಇದೆಯೇ? ಎಂಬುದು ನಮ್ಮ ಪ್ರಶ್ನೆ.


ಜಿ.ಎಸ್.ಸುಭಾಷ್ ಚಂದ್ರಭೋಸ್
ನಿವೃತ್ತ ಉಪನ್ಯಾಸಕರು,
ಮುಚ್ಚನೂರು, ಜಗಳೂರು ತಾಲ್ಲೂಕು
ಮೊ. 9916760160

error: Content is protected !!