ಒಬ್ಬ ವಿಜ್ಞಾನಿ ಸೃಷ್ಟಿಯಲ್ಲಿ ಸಮಾಜ, ಪೋಷಕರ, ಶಿಕ್ಷಕರ ಪಾತ್ರ ಅಪಾರ-ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ. ಕೊಟ್ರೇಶ್

ಒಬ್ಬ ವಿಜ್ಞಾನಿ ಸೃಷ್ಟಿಯಲ್ಲಿ ಸಮಾಜ, ಪೋಷಕರ, ಶಿಕ್ಷಕರ ಪಾತ್ರ ಅಪಾರ-ಸಾರ್ವಜನಿಕ  ಶಿಕ್ಷಣ ಇಲಾಖೆ ಉಪ  ನಿರ್ದೇಶಕ ಜಿ. ಕೊಟ್ರೇಶ್

ದಾವಣಗೆರೆ, ಡಿ. 26- ಒಬ್ಬ ವಿಜ್ಞಾನಿ ಸೃಷ್ಟಿಯಾಗಬೇಕಾದರೆ ಅವನ ಹಿಂದೆ ಸಮಾಜ, ಪೋಷಕರ ಮತ್ತು ಶಿಕ್ಷಕರ ಪಾತ್ರ ಅಪಾರವಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ. ಕೊಟ್ರೇಶ್ ತಿಳಿಸಿದರು.

ನಗರದ ಸೇಂಟ್‌ ಜಾನ್ಸ್ ಶಾಲೆಯಲ್ಲಿ ನಿನ್ನೆ ಏರ್ಪಾಡಾಗಿದ್ದ ಕಲಾ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.

ಚಂದ್ರಯಾನ್-3 ರಲ್ಲಿ ಕಾರ್ಯ ನಿರ್ವಹಿಸಿದ ವಿಜ್ಞಾನಿ ತಿಮ್ಮಪ್ಪ ಪೂಜಾರ್ ಅವರು ತಮ್ಮ ವಿದ್ಯಾರ್ಥಿಯಾಗಿದ್ದರು ಎಂದು ಕೊಟ್ರೇಶ್ ಹೆಮ್ಮೆಯಿಂದ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಲತಾ ಮಾತನಾಡಿ, ಮಕ್ಕಳ ಚಿಕ್ಕ ಚಿಕ್ಕ ಪ್ರಯತ್ನಗಳೇ ಮುಂದಿನ ದೊಡ್ಡ ಸಾಧನೆಗೆ ಅವಕಾಶ ಮಾಡಿಕೊಡುತ್ತದೆ. ವಿಜ್ಞಾನ ವಸ್ತು ಪ್ರದರ್ಶನ ಕೇವಲ ಒಂದು ದಿನದ ವಿಷಯವಾಗಿರದೇ ನಿರಂತರವಾಗಲಿ ಎಂದು ಕರೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ|| ಆರ್.ಜೆ. ಪುನೀತ್‌ಗೌಡ  ಮಾತನಾಡಿ, ನನ್ನಿಂದ ಸಾಧ್ಯವಿಲ್ಲ ಎಂದು ಭಾವಿಸುವ ಬದಲು ನನ್ನಿಂದ ಎಲ್ಲವೂ ಸಾಧ್ಯ ಎಂದು ಪ್ರಯತ್ನಿಸಿದರೆ, ಎಲ್ಲರಿಗೂ ಎಲ್ಲವೂ ಸಾಧ್ಯವೆಂದು ಪ್ರತಿಪಾದಿಸಿದರು.

ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್.ಅನಿಲ್‌ ಕುಮಾರ್‌, ಕಾರ್ಯದರ್ಶಿ ಟಿ.ಎಂ. ಉಮಾ ಪತಯ್ಯ  ಮಾತನಾಡಿ, ನಿಮ್ಮಲ್ಲಿ ಅಡಗಿರುವ ಕಲೆಯನ್ನು ಹೊರಗೆಡವಲು ವಿಜ್ಞಾನ ವಸ್ತು ಪ್ರದರ್ಶನ ಒಂದು ವೇದಿಕೆ ಆದ್ದರಿಂದ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶಾಲೆಯ ಖಜಾಂಚಿ ಪ್ರವೀಣ್ ಹುಲ್ಲುಮನೆ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳೇ ಸಿದ್ದಪಡಿಸಿದ ಡ್ರೋನ್ ಮಾದರಿ ಯನ್ನು ವೇದಿಕೆಯ ಮೇಲೆ ಉಡಾವಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರತಿ ವರ್ಷವೂ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೇಂದ್ರ ಪಠ್ಯಕ್ರಮ ವಿಭಾಗದ ಕು. ಭೂಮಿಕಾ ಎಲ್. ಹಾಗು ರಾಜ್ಯ ಪಠ್ಯಕ್ರಮ ವಿಭಾಗದ ಕು. ರುಚಿತಾ ಅವರುಗಳಿಗೆ ಹುಲ್ಲುಮನೆ ವಂಶಸ್ಥರಿಂದ ನೀಡಲಾಗುವ `ಹುಲ್ಲುಮನೆ ರಾಮಪ್ಪ-ಭೀಮಪ್ಪ ಸ್ವರ್ಣ ಫಲಕ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಆರ್. ಸಯ್ಯದ್ ಆರಿಫ್ ಹಾಗೂ ಶ್ರೀಮತಿ ಪ್ರೀತಾ. ಟಿ.ರೈ, ಉಪ ಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ ಹಾಗೂ ಇತರರು ಪಾಲ್ಗೊಂಡಿದ್ದರು.

error: Content is protected !!