ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ವ್ಯವಸ್ಥೆಯ ಪಾತ್ರ ಅತಿ ಮುಖ್ಯ : ಡಾ. ಸತೀಶ್ ವಲ್ಲೇಪುರೆ

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ವ್ಯವಸ್ಥೆಯ ಪಾತ್ರ ಅತಿ ಮುಖ್ಯ : ಡಾ. ಸತೀಶ್ ವಲ್ಲೇಪುರೆ

ದಾವಣಗೆರೆ, ಡಿ.21- ಯಾವುದೇ ದೇಶ ಅಭಿವೃದ್ಧಿ ಪಥದತ್ತ ಸಾಗಲು ಅಲ್ಲಿನ ಶಿಕ್ಷಣ ವ್ಯವಸ್ಥೆ ಮುಖ್ಯ ಪಾತ್ರ ವಹಿಸುತ್ತದೆ ಎಂದು ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ ಹೇಳಿದರು.

ವಿಕಸಿತ್ ಭಾರತ್ @ 2047 ಅಂಗವಾಗಿ ದಾವಣೆಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾ ರ್ಥಿಗಳಿಗೆ  ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿನ ದೃಶ್ಯ ಕಲಾ ಮಹಾವಿದ್ಯಾಲಯ ಆರಂಭಗೊಂಡು 60 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ವಿಕಸಿತ ಭಾರತ @ 2047 ಅತ್ಯಂತ ಪ್ರಸ್ತುತವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಶಿಕ್ಷಣ ಸಂಸ್ಥೆಗಳು ಜ್ಞಾನ ಮತ್ತು ಕನಸುಗಳನ್ನು ಬಿತ್ತುವ ಕೆಲಸ ಮಾಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಕೇಂದ್ರ ಸರ್ಕಾರದ ಮೂಲ ಉದ್ದೇಶವಾಗಿದೆ ಎಂದರು.

2047 ಕ್ಕೆ ಭಾರತ ಸ್ವಾತಂತ್ರ್ಯಗೊಂಡು 100 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಾವು ಅಭಿವೃದ್ಧಿ ಹೊಂದುತ್ತಿರುವ, ಹೊಂದಿದ ಭಾರತದಲ್ಲಿ ಬಾಳುತ್ತಿದ್ದೇವೆ ಎನ್ನುವ ಕನಸನ್ನು ದೇಶದ ಯುವಕರಲ್ಲಿ ಕಟ್ಟಬೇಕೆನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ವಿಕಸಿತ ಭಾರತ @2047 ಮಹತ್ವದ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ದೃಶ್ಯಕಲಾ ಮಹಾವಿದ್ಯಾಲಯದ ಚಿತ್ರಕಲಾ ವಿಭಾಗದ ಬೋಧನಾ ಸಹಾಯಕ ದತ್ತಾತ್ರೇಯ ಎನ್ ಭಟ್,  ವಿಕಸಿತ್ ಭಾರತಕ್ಕೆ ಭಾರತದಲ್ಲಿ ಶಿಕ್ಷಣ ಬದಲಾವಣೆ ಅಗತ್ಯವಾಗಿದ್ದು ಭಾರತ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡುತ್ತಿದೆ ಎಂದು ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣದಿಂದ ದೇಶದಲ್ಲಿ ಬಹಳ ಬದಲಾವಣೆ ಆಗುತ್ತಿದೆ. ಕಂಪ್ಯೂಟರ್ ಬೇಡ ಎಂದವರೆ ಈಗ ಕಂಪ್ಯೂಟರ್‌ಗಳನ್ನು ಉಪಯೋಗಿಸುತ್ತಿದ್ದಾರೆ. ಅದೇ ರೀತಿ ಹೊಸ ಶಿಕ್ಷಣ ನೀತಿಗೆ ಸ್ವಲ್ಪ ಕಾಲಾವಕಾಶ ಕೊಟ್ಟು ಹೊಂದಿಕೊಳ್ಳಬೇಕು ಎಂದರು. ವಿಶ್ವಾದ್ಯಂತ ಯುದ್ಧಗಳ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ಸುರಕ್ಷಿತವಾಗಿರಬೇಕಾದರೆ ವಿಕಸಿತ ಭಾರತ ಚಿಂತನೆ ಅಗತ್ಯಇದೆ.

ದೇಶ ಎಂದರೆ ಮೂಲಭೂತ ಸೌಕರ್ಯಗಳು ಎಷ್ಟು  ಅಗತ್ಯವೋ ಯುವ ಜನರ ಕೊಡುಗೆಯು ಅಷ್ಟೇ ಅಗತ್ಯವಾಗಿದೆ. ವಿಕಸನ ಕೇವಲ ದೇಶದ ಅಭಿವೃದ್ಧಿಯಲ್ಲ, ದೇಶದ ಪ್ರತಿಯೊಬ್ಬರ ಜನರೂ ಕೂಡ ಭೌಧ್ಧಿಕವಾಗಿ, ಮಾನಸಿಕವಾಗಿ ವಿಕಸನಗೊಳ್ಳುವುದೇ ಆಗಿದೆ ಎಂದು ಪ್ರತಿಪಾಧಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ಜೈರಾಜ್ ಎಂ.ಚಿಕ್ಕಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೋಧನಾ ಸಹಾಯಕ ಎಸ್.ಎಚ್.ಹರೀಶ್ ಇತರರು ಉಪಸ್ಥಿತರಿದ್ದರು.

error: Content is protected !!